ನಟಸಾರ್ವಭೌಮ ಡಾ. ರಾಜ್ ಕುಮಾರ್ ಹಾಗೂ ರಾಜರತ್ನ ಡಾ. ಪುನೀತ್ ರಾಜ್ ಕುಮಾರ್ ಬಯೋಪಿಕ್ ಗಳು ಬೆಳ್ಳಿಪರದೆ ಬೆಳಗಬೇಕು ಅನ್ನೋದು ಅದೆಷ್ಟೋ ಮಂದಿ ಕನ್ನಡಿಗರ ಕನಸಾಗಿದೆ. ಆದ್ರೆ ಅವರ ಬಯೋಪಿಕ್ ಮಾಡೋಕೆ ಖುಷಿಯಿಂದ ಓಕೆ ಹೇಳಬೇಕಿದ್ದ ಶಿವಣ್ಣ, ಯಾವುದೇ ಕಾರಣಕ್ಕೂ ಮಾಡಲ್ಲ ಅಂತ ಹೇಳಿದ್ದಾರೆ.
ಸ್ಯಾಂಡಲ್ ವುಡ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಸೋಲ್ ಸ್ಟಾರ್ ರಾಜ್ ಬಿ ಶೆಟ್ಟಿ ಅಭಿನಯದ 45 ಸಿನಿಮಾ ರಿಲೀಸ್ ಆಗೋಕೆ ಕೌಂಟ್ ಡೌನ್ ಶುರುವಾಗಿದೆ. ಸದ್ಯ ಮೂವರು ಸೂಪರ್ ಸ್ಟಾರ್ ಗಳು ಹೈದರಾಬಾದ್, ಮುಂಬೈ, ಚೆನ್ನೈ, ಕೊಚ್ಚಿ ಸೇರಿದಂತೆ ಹಲವೆಡೆ ಪ್ರಚಾರದ ಭರಾಟೆಯಲ್ಲಿದ್ದಾರೆ. ಈ ನಡುವೆ ಶಿವರಾಜ್ ಕುಮಾರ್ ಅವರಿಗೆ ಬಯೋಪಿಕ್ ಕುರಿತ ಪ್ರಶ್ನೆ ಎದುರಾಗಿದೆ. ಆದ್ರೆ ಶಿವಣ್ಣ ಅದಕ್ಕೆ ಕೊಟ್ಟ ಉತ್ತರ ಸಾಕಷ್ಟು ಕುತೂಹಲ ಮೂಡಿಸಿದೆ.

ಅಂದಹಾಗೆ ಶಿವರಾಜ್ ಕುಮಾರ್ ಕೈಯಲಿ ಸಾಲು ಸಾಲು ಸಿನಿಮಾಗಳಿವೆ. ಆದರೂ ಶಿವಣ್ಣ ಸದ್ದಿಲ್ಲದೇ ಅಪ್ಪು ಅಥವಾ ವರನಟ ಡಾ ರಾಜ್ ಕುಮಾರ್ ಬಯೋಪಿಕ್ ಗೆ ಮನಸ್ಸು ಮಾಡಿದ್ದಾರಾ ಅನ್ನೋ ಕುತೂಹಲ ಇತ್ತು. ಆದ್ರೆ ಶಿವಣ್ಣ ಅಪ್ಪು ಹಾಗೂ ಅಪ್ಪಾಜಿಯವರನ್ನ ಅದೆಷ್ಟು ಪ್ರೀತಿಸ್ತಾರೆ.. ಒಬ್ಬ ಅಭಿಮಾನಿಯಂತೆ ಅವರನ್ನ ಆರಾಧಿಸ್ತಾರೆ ಅನ್ನೋದಕ್ಕೆ ಸಾಕಷ್ಟು ಉದಾಹರಣೆಗಳಿವೆ.’

ಅಪ್ಪು..ಅಪ್ಪಾಜಿ ಇಬ್ಬರೂ ಲೆಜೆಂಡ್ಸ್. ಅವರ ಬಯೋಪಿಕ್ ಮಾಡೋದು ಸೂಕ್ತ ಅಲ್ಲ.
ಯಾರೋ ಒಬ್ಬರು ಹೇಳಿದ್ರು ಬಯೋಪಿಕ್ ಮಾಡಿ ಅಂತ. ನಾನು ಒಪ್ಪಲಿಲ್ಲ. ಅವರಿಬ್ಬರ ಕಣ್ಣುಗಳು ನನ್ನನ್ನು ನೋಡ್ತಿದೆ. ಅವರ ಬಯೋಪಿಕ್ ಮಾಡುವಾಗ ನಾನು ಕಣ್ಣೀರು ಹಾಕೋಕೆ, ಅಪ್ಸೆಟ್ ಆಗೋಕೆ ಇಷ್ಟ ಪಡಲ್ಲ ಎಂದಿದ್ದಾರೆ.

ಅಂದಹಾಗೆ ಶಿವರಾಜ್ ಕುಮಾರ್ ಮತ್ತೊಂದು ಇಂಟರೆಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ. ಬಯೋಪಿಕ್ ಮಾಡ್ತಿದ್ದೀನಿ.. ಆದ್ರೆ ಅದು ನಮ್ಮ ಕುಟುಂಬ ಸದಸ್ಯರದ್ದಲ್ಲ. ಬೇರೆ ಯಾರದು..? ಏನದು ಸ್ಪೆಷಲ್ ಅನ್ನೋದನ್ನ ಈಗ ರಿವೀಲ್ ಮಾಡೋಕೆ ಆಗಲ್ಲ ಎಂದಿದ್ದಾರೆ. ಸದ್ಯ ಟೈಟಲ್ ಕೂಡ ಹೇಳೋ ಆಗಿಲ್ಲ. ಆದ್ರೆ ಆರೆಂಜ್ ಅನ್ನೋ ಟೈಟಲ್ ಅಂತ ಒಲ್ಲದ ಮನಸ್ಸಿಂದ ಬಯೋಪಿಕ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಶಿವಣ್ಣ ಸದ್ಯ ಅನಾರೋಗ್ಯದ ನಡುವೆ ಚೇತರಿಸಿಕೊಂಡು, ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಇದರ ಜೊತೆಗೆ ಶಿವಣ್ಣ ಬಹುನಿರೀಕ್ಷಿತ ಸಿನಿಮಾ 45ನ ಅಬ್ಬರದ ಪ್ರಚಾರ ಮಾಡ್ತಾ, ಹಲವು ಇಂಟರೆಸ್ಟಿಂಗ್ ವಿಚಾರಗಳನ್ನ ಮಾತನಾಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಕರುನಾಡ ಚಕ್ರವರ್ತಿ ಬಯೋಪಿಕ್ ಮಾಡ್ತಿರೋದು ಯಾರ ಕಥೆ ಅನ್ನೋದಕ್ಕೆ ಉತ್ತರ ಸಿಗಬೇಕಿದೆ.





