ಬೆಂಗಳೂರು: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್ 11ರ ಮೂಲಕ ಪರಿಚಯವಾದ ನಟ ಶಿಶಿರ್ ಶಾಸ್ತ್ರಿ ಹಾಗೂ ನಟಿ ಐಶ್ವರ್ಯ ಶಿಂಧೋಗಿ ಇದೀಗ ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ.. ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಈ ಸಿಹಿ ಸುದ್ದಿಯಿಂದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಬಿಗ್‌ಬಾಸ್ ಮನೆಯೊಳಗೆ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದ ಶಿಶಿರ್ ಮತ್ತು ಐಶ್ವರ್ಯ, ಕಾರ್ಯಕ್ರಮದ ಬಳಿಕವೂ ತಮ್ಮ ಸ್ನೇಹವನ್ನು ಮುಂದುವರಿಸಿದ್ದರು. ಒಟ್ಟಿಗೆ ಕೆಲಸ ಮಾಡುವ ಸಂದರ್ಭಗಳಲ್ಲಿ ಆರಂಭವಾದ ಪರಿಚಯ ಇಬ್ಬರ ನಡುವೆ ಸ್ನೇಹ ಬೆಳೆಸಿತ್ತು. ಕಾಲ ಕಳೆದಂತೆ ಪರಸ್ಪರ ಗೌರವ, ಕಾಳಜಿ ಹೆಚ್ಚಾಗಿ ಅದು ಪ್ರೀತಿಗೆ ತಿರುಗಿದೆ. ಇದೀಗ ಇಬ್ಬರೂ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ದಾಂಪತ್ಯ ಜೀವನದತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ.
ನಿಶ್ಚಿತಾರ್ಥದ ಸಂಭ್ರಮದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಶಿರ್ ಶಾಸ್ತ್ರಿ, ತಮ್ಮ ಪ್ರೇಮಕಥೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ನಮ್ಮ ಜರ್ನಿ ಪ್ರೀತಿಯಿಂದ ಆರಂಭವಾಗಿರಲಿಲ್ಲ. ಒಟ್ಟಿಗೆ ಕೆಲಸ ಮಾಡುವಾಗ ಪರಿಚಯವಾಯಿತು. ಆ ಪರಿಚಯ ಸ್ನೇಹವಾಗಿ ಬದಲಾಯಿತು. ಸ್ನೇಹದ ನಡುವೆ ಪರಸ್ಪರ ಗೌರವ ಹೆಚ್ಚಾಯಿತು. ನಂತರ ಅದು ಪ್ರೀತಿಗೆ ತಿರುಗಿತು ಎಂದು ವಿವರಿಸಿದ್ದಾರೆ.
ಆರಂಭದಲ್ಲಿ ಇಬ್ಬರೂ ಪ್ರೀತಿಸಿ ಮದುವೆಯಾಗುತ್ತೇವೆ ಎಂದು ಅಂದುಕೊಂಡಿರಲಿಲ್ಲವಂತೆ. ಅಷ್ಟೇ ಅಲ್ಲ, ಬಿಗ್‌ಬಾಸ್ ಮನೆಯಲ್ಲಿಯೇ ತಮ್ಮ ನಡುವೆ ಪ್ರೀತಿ ಹುಟ್ಟಿರಲಿಲ್ಲ ಎಂಬುದನ್ನೂ ಶಿಶಿರ್ ಸ್ಪಷ್ಟಪಡಿಸಿದ್ದಾರೆ. ಐಶ್ವರ್ಯ ಬಗ್ಗೆ ಆರಂಭದಿಂದಲೂ ವಿಶೇಷ ಭಾವನೆ ಇತ್ತು. ಆದರೆ ಆ ಭಾವನೆ ಪ್ರೀತಿಯಾಗಿ ಬದಲಾಗುತ್ತದೆ ಎಂದು ತಾವು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.
ತಮ್ಮ ಪ್ರೇಮಕಥೆಯ ಮತ್ತೊಂದು ಕುತೂಹಲಕಾರಿ ವಿಚಾರವನ್ನೂ ಶಿಶಿರ್ ಬಹಿರಂಗಪಡಿಸಿದ್ದಾರೆ. ಮೊದಲು ಪ್ರಪೋಸ್ ಮಾಡಿದ್ದು ಐಶ್ವರ್ಯನೇ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
ಐಶ್ವರ್ಯ ಮನಗೆದ್ದ ಶಿಶಿರ್ ಕಾಳಜಿ!
ಇನ್ನು ಐಶ್ವರ್ಯ ಶಿಂಧೋಗಿ ಕೂಡ ತಮ್ಮ ಪ್ರೀತಿಯ ಪಯಣದ ಬಗ್ಗೆ ಮನದ ಮಾತು ಹಂಚಿಕೊಂಡಿದ್ದಾರೆ. ಆರಂಭದಲ್ಲಿ ತಾವು ಮದುವೆಯಾಗುತ್ತೇವೆ ಎಂಬ ಕಲ್ಪನೆಯೇ ಇರಲಿಲ್ಲ. ಆದರೆ ತಮ್ಮಿಬ್ಬರ ಬಗ್ಗೆ ಸುತ್ತಮುತ್ತಲಿನವರು ಮದುವೆಯ ಮಾತುಗಳನ್ನು ಆಡಲು ಶುರುಮಾಡಿದ್ದರು. ನಾವೇ ಯೋಚಿಸುವುದಕ್ಕೂ ಮೊದಲೇ ಎಲ್ಲರೂ ನಮ್ಮ ಮದುವೆ ಬಗ್ಗೆ ಮಾತನಾಡುತ್ತಿದ್ದರು ಎಂದು ನಗುತ್ತಲೇ ಹೇಳಿದ್ದಾರೆ.
ತಮ್ಮ ಪ್ರೀತಿ ತುಂಬಾ ತಡವಾಗಿ ಆರಂಭವಾಯಿತು ಎಂದು ಹೇಳಿರುವ ಐಶ್ವರ್ಯ, ಶಿಶಿರ್ ಅವರ ವ್ಯಕ್ತಿತ್ವವೇ ತಮ್ಮ ಮನಸ್ಸನ್ನು ಗೆದ್ದಿತು ಎಂದಿದ್ದಾರೆ. ಶಿಶಿರ್ ತಮಗಾಗಿ ತೋರಿಸಿದ ಕಾಳಜಿಗೆ ತಾವು ಮನಸೋತಿದ್ದಾಗಿ ತಿಳಿಸಿದ್ದಾರೆ. ಆರಂಭದಲ್ಲಿ ಪ್ರೀತಿ ಇರಲಿಲ್ಲ. ಆದರೆ ಅವರ ಮಾನವೀಯ ಗುಣಗಳನ್ನು ಕಂಡು ವ್ಯಕ್ತಿಯಾಗಿ ಅವರ ಬಗ್ಗೆ ಅಪಾರ ಗೌರವ ಮೂಡಿತ್ತು. ಆ ಗೌರವವೇ ಮುಂದೆ ಪ್ರೀತಿಗೆ ಕಾರಣವಾಯಿತು ಎಂದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.
ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುತ್ತಾ, ಪರಸ್ಪರ ಗೌರವಿಸುತ್ತಾ ಬೆಳೆದ ಸಂಬಂಧ ಇದೀಗ ನಿಶ್ಚಿತಾರ್ಥದ ಹಂತ ತಲುಪಿದೆ. ಬಿಗ್‌ಬಾಸ್ ಮನೆಯಲ್ಲಿನ ಪರಿಚಯವೇ ಇವರಿಬ್ಬರ ಬದುಕಿನಲ್ಲಿ ಇಂತಹ ಸುಂದರ ತಿರುವು ನೀಡಿರುವುದು ಅಭಿಮಾನಿಗಳಿಗೂ ಖುಷಿ ತಂದಿದೆ.
ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ
ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಶಿಶಿರ್ ಮತ್ತು ಐಶ್ವರ್ಯ ಅವರನ್ನು ನೋಡಿದ್ದ ಅಭಿಮಾನಿಗಳು, ಈ ಜೋಡಿಯ ನಿಶ್ಚಿತಾರ್ಥದ ಸುದ್ದಿಯಿಂದ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರಿಗೂ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಸ್ನೇಹದಿಂದ ಶುರುವಾಗಿ ಪ್ರೀತಿಯಾಗಿ ಅರಳಿದ ಇವರ ಸಂಬಂಧ ಇದೀಗ ಮದುವೆಯತ್ತ ಸಾಗುತ್ತಿರುವುದು ಅಭಿಮಾನಿಗಳ ಗಮನ ಸೆಳೆದಿದೆ.





