ಲಂಬೋದರ 2.0 ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರೀಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿರುವ ನಟ ಹಾಗೂ ಯುವ ರಾಜಕಾರಣಿ ಅನಿಲ್ ಶೆಟ್ಟಿ ಸಮಾಜಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತಮ್ಮದೇ ನವ ಬೆಂಗಳೂರು ಫೌಂಡೇಶನ್ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಕನಸ್ಸಿಗೆ ಸಾಥ್ ಕೊಟ್ಟಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಅನಿಲ್ ಶೆಟ್ಟಿಯವರು ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ನವ ಬೆಂಗಳೂರು ಫೌಂಡೇಷನ್ ಮೂಲಕ ಕಳೆದ ಹತ್ತು ವರ್ಷಗಳಿಂದ ವಿದ್ಯಾರ್ಥಿಗಳಿಗೆ ವೇತನ ನೀಡುತ್ತಾ ಬಂದಿದ್ದಾರೆ. ಇದರ ಮುಂದುವರಿದ ಭಾಗವಾಗಿ ನಿನ್ನೆ ಬೆಂಗಳೂರಿನ ಕೋರಮಂಗಲದ ಸತ್ಯಸಾಯಿ ಸದನದಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಲರ್ಷಿಪದ ವಿತರಣೆ ಮಾಡಲಾಯಿತು.
ನವ ಬೆಂಗಳೂರು ಫೌಂಡೇಷನ್ ಹಾಗೂ ಅಸ್ಟ್ಫೋಟಾಕ್ ಫೌಂಡೇಷನ್ ವತಿಯಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವೇತನ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಮಾನುಷಿ ಚಿಲ್ಲರ್ ಹಾಗೂ ಅನಿಲ್ ಶೆಟ್ಟಿ ವಿದ್ಯಾರ್ಥಿಗಳಿಗೆ ವೇತನ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಯ ನಗರ ಶಾಸಕ ಸಿಕೆ ರಾಮಮೂರ್ತಿ, ಎಂಎಲ್ಸಿ ಗೋಪಿನಾಥ್ ರೆಡ್ಡಿ ಹಾಗೂ ನಿರ್ದೇಶಕ ಸಿಂಪಲ್ ಸುನಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಮೆರಿಕದಲ್ಲಿ ಡಾ. ರಾಜ್‌ಕುಮಾರ್ ಸೂಪರ್ ಹಿಟ್ ಹಾಡು ಹಾಡಿದ ಮೋಹನ್‌ಲಾಲ್: ವಿಡಿಯೋ ವೈರಲ್
ಮುಂಬೈ/ಕೊಚ್ಚಿ: ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್‌ಲಾಲ್ ಅವರು ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ. ಅದೂ ಅಪ್ಪಟ ಕನ್ನಡಿಗನ ರೀತಿಯಲ್ಲಿ ಡಾ. ರಾಜ್‌ಕುಮಾರ್ ಅವರ ಗೀತೆಯೊಂದನ್ನು ಹಾಡಿ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ಈ ವಿಡಿಯೋ ನೋಡಿ ಅಭಿಮಾನಿಗಳು ‘ಅಚ್ಚರಿಯಾಯಿತು’ ಎಂದು ಬಾಯಿ ಬಿಟ್ಟಿದ್ದಾರೆ.
ಅಮೆರಿಕದ ವೇದಿಕೆಯಲ್ಲಿ ಕನ್ನಡದ ಸವಿ
ಅಮೆರಿಕದಲ್ಲಿ ನಡೆದ ಒಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೋಹನ್‌ಲಾಲ್ ಭಾಗವಹಿಸಿದ್ದರು. ಅವರು ವೇದಿಕೆಯ ಮೇಲೆ ಲೈವ್ ಆಗಿ ‘ಎಂದೆಂದೂ ನಿನ್ನನು ಮರೆತು ಬದುಕಿರಲಾರೆ…’ ಗೀತೆಯನ್ನು ಹಾಡಿದರು. ಈ ಹಾಡು 1974ರಲ್ಲಿ ತೆರೆಕಂಡ ‘ಎರಡು ಕನಸು’ ಚಿತ್ರದ್ದಾಗಿದ್ದು, ಡಾ. ರಾಜ್‌ಕುಮಾರ್ ಮತ್ತು ಮಂಜುಳಾ ನಟನೆಯ ಈ ಚಿತ್ರದ ಹಾಡು ಇಂದಿಗೂ ಎವರ್ಗ್ರೀನ್ ಆಗಿದೆ. ಪಿ.ಬಿ. ಶ್ರೀನಿವಾಸ್ ಮತ್ತು ವಾಣಿ ಜಯರಾಮ್ ಧ್ವನಿ ನೀಡಿರುವ ಈ ಗೀತೆಯನ್ನು ಮೋಹನ್‌ಲಾಲ್ ತಮ್ಮದೇ ಆದ ಸುಮಧುರ ಕಂಠದಿಂದ ಹಾಡಿದ್ದಾರೆ. ಸಾಹಿತ್ಯವನ್ನು ನೋಡದೆಯೇ, ಯಾವುದೇ ತಡಮಾಡದೆ ಅಪ್ಪಟ ಕನ್ನಡಿಗನಂತೆ ಹಾಡಿರುವುದು ಎಲ್ಲರಿಗೂ ಆಶ್ಚರ್ಯ ತಂದಿದೆ.
‘ಎಂದೆಂದೂ’ ಪ್ರೀತಿಯ ಹಾಡು
ಮೋಹನ್‌ಲಾಲ್ ಅವರಿಗೆ ಡಾ. ರಾಜ್‌ಕುಮಾರ್ ಎಂದರೆ ಅಪಾರ ಅಭಿಮಾನ. ಅವರ ಹಾಡುಗಳನ್ನು ಕೇಳಲು ಅವರು ಎಂದಿಗೂ ಹಿಂದೇಟು ಹಾಕುವುದಿಲ್ಲ. ಈ ಮೊದಲು ಈ ಹಾಡನ್ನು ನೋಡುತ್ತಾ ಅವರು ಆನಂದಿಸಿದ ವಿಡಿಯೋ ವೈರಲ್ ಆಗಿತ್ತು. ನೆಟ್ಟಿಗರು ಆಗಲೇ ‘ಮೋಹನ್‌ಲಾಲ್ ಅವರಿಗೆ ಕನ್ನಡದ ಬಗ್ಗೆ ಎಷ್ಟು ಪ್ರೀತಿ’ ಎಂದು ಚರ್ಚಿಸಿದ್ದರು. ಈ ಬಾರಿಯಂತೂ ಅವರು ಸಾಹಿತ್ಯವನ್ನು ಗುನುಗುವುದನ್ನು ಮೀರಿ, ವೇದಿಕೆಯ ಮೇಲೆ ಲೈವ್ ಆಗಿಯೇ ಹಾಡಿದ್ದಾರೆ.
ಡಾ. ರಾಜ್‌ಕುಮಾರ್ ಹುಟ್ಟುಹಬ್ಬದ ವಿಶೇಷ
ಏಪ್ರಿಲ್ 24 ರಂದು ಡಾ. ರಾಜ್‌ಕುಮಾರ್ ಅವರ ಜನ್ಮದಿನ. ಅಣ್ಣಾವ್ರ ಹುಟ್ಟುಹಬ್ಬದ ಸಂದರ್ಭದಲ್ಲಿಯೇ ಮೋಹನ್‌ಲಾಲ್ ಅವರ ಈ ವಿಡಿಯೋ ವೈರಲ್ ಆಗುತ್ತಿರುವುದು ಇನ್ನಷ್ಟು ವಿಶೇಷವಾಗಿದೆ. ರಾಜ್‌ಕುಮಾರ್ ಅವರ ಮೇಲಿನ ಪ್ರೀತಿಗೆ ಮೋಹನ್‌ಲಾಲ್ ಸಲ್ಲಿಸಿದ ಈ ಗೌರವ ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ‘ಮೋಹನ್‌ಲಾಲ್ ಸಲಾಮ್’ ಎಂದೂ, ‘ನಿಜಕ್ಕೂ ಕನ್ನಡದ ಮಗ’ ಎಂದೂ ಕಮೆಂಟುಗಳು ಮೂಡಿಬರುತ್ತಿವೆ.





