ನೆಲಮಂಗಲ: ಕಳೆದ ಕೆಲವು ದಿನಗಳಿಂದ ಸುಡುತ್ತಿದ್ದ ಬಿಸಿಲಿಗೆ ನೆಲಮಂಗಲ ಭಾಗದಲ್ಲಿ ಮಳೆ ತಂಪೆರೆದಿದೆ. ಆದರೆ, ಈ ಮಳೆ ರೈತನೊಬ್ಬನ ಬಾಳಲ್ಲಿ ಕಣ್ಣೀರು ತಂದಿದೆ. ನೆಲಮಂಗಲ ತಾಲೂಕಿನ ಮರಳಕುಂಟೆ ಗ್ರಾಮದಲ್ಲಿ ಬಿರುಗಾಳಿ ಗುಡುಗು ಸಹಿತ ಭಾರಿ ಮಳೆಯ ವೇಳೆ ಸಿಡಿಲು ಬಡಿದು ಹಸು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮರಳಕುಂಟೆ ಗ್ರಾಮದ ರೈತ ವೀರಣ್ಣ ಎಂಬುವವರಿಗೆ ಸೇರಿದ ಹಸು, ಜೀವನಕ್ಕೆ ಆಧಾರವಾಗಿದ್ದ ಹಸುವನ್ನು ಕಳೆದುಕೊಂಡ ವೀರಣ್ಣ ಈಗ ಕಂಗಾಲಾಗಿದ್ದಾರೆ. ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದ ರೈತ ಕುಟುಂಬಕ್ಕೆ ಈ ಸಿಡಿಲಿನ ಆಘಾತ ತುಂಬಲಾರದ ನಷ್ಟವನ್ನುಂಟುಮಾಡಿದೆ.
ಅಕಾಲಿಕವಾಗಿ ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸಿದರು. ದೃಷ್ಟಿ ಮಂದವಾಗುವಷ್ಟು ಸುರಿದ ಮಳೆಗೆ ದ್ವಿಚಕ್ರ ವಾಹನ ಸವಾರರು ಮಳೆಯಲ್ಲೇ ನೆನೆಯುತ್ತಾ ಸಂಚರಿಸಬೇಕಾಯಿತು.
ಬಿಸಿಲಿನ ಧಗೆಯಿಂದ ಬೆಂದಿದ್ದ ಜನರಿಗೆ ಮಳೆ ಸಮಾಧಾನ ತಂದಿದ್ದರೂ, ರೈತನ ಹಸು ಬಲಿಯಾಗಿರುವುದು ಮರಳಕುಂಟೆ ಗ್ರಾಮಸ್ಥರಲ್ಲಿ ವಿಷಾದ ಮೂಡಿಸಿದೆ.





