ಬೆಂಗಳೂರು: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಬಹುಭಾಷಾ ಚಲನಚಿತ್ರ ‘ಜೈ’ಯ ಅದ್ದೂರಿ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಕ್ಷಣಗಳ ಗಣನೆ ಆರಂಭವಾಗಿದೆ. ಈ ಭವ್ಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಾಲಿವುಡ್‌ನ ಖ್ಯಾತ ನಟ ಮತ್ತು ‘ಅಣ್ಣ’ ಎಂದೇ ಪ್ರೀತಿಯಿಂದ ಸಂಭೋದಿಸಲ್ಪಡುವ ಸುನೀಲ್ ಶೆಟ್ಟಿ ಅವರು ಆಗಮಿಸಲಿದ್ದಾರೆ. ಈ ಅದ್ಭುತ ಕಾರ್ಯಕ್ರಮವು ನವೆಂಬರ್ 7 ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಂತ್ರಿ ಮಾಲ್‌ನಲ್ಲಿ ನಡೆಯಲಿದೆ.
ಚಿತ್ರತಂಡವು ಈ ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ ಆಯೋಜಿಸಲು ಸಕಲ ಸಿದ್ಧತೆಗಳನ್ನು ಮಾಡಿದ್ದು, ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್ ತಾರೆಯರ ಸಂಗಮಕ್ಕೆ ಈ ಸಂದರ್ಭ ಸಾಕ್ಷಿಯಾಗಲಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ಬಾಲಿವುಡ್ ತಾರೆಯನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಕಾತುರದಿಂದ ಕಾಯುತ್ತಿದ್ದಾರೆ.
‘ಜೈ’ ಚಿತ್ರವು ಬಿಗ್ ಬಾಸ್ ಕನ್ನಡ ಸೀಸನ್ 9ರ ವಿಜೇತ ಮತ್ತು ಪ್ರತಿಭಾವಂತ ನಟ ರೂಪೇಶ್ ಶೆಟ್ಟಿ ಅವರು ನಟಿಸಿ, ನಿರ್ದೇಶಿಸಿರುವ ‘ಕನಸಿನ ಕೂಸು’. ಈಗಾಗಲೇ ತಮ್ಮ ವಿಭಿನ್ನ ಅಭಿನಯ ಶೈಲಿ ಮತ್ತು ಸಿನಿಮಾತ್ಮಕ ದೃಷ್ಟಿಯಿಂದ ಗಮನ ಸೆಳೆದಿರುವ ರೂಪೇಶ್, ‘ಜೈ’ ಚಿತ್ರದ ಮೂಲಕ ತಮ್ಮ ನಟನಾ ಮತ್ತು ನಿರ್ದೇಶನ ವೃತ್ತಿ ಜೀವಬದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಲು ಸಿದ್ಧರಿದ್ದಾರೆ. ಚಿತ್ರದ ನಾಯಕಿಯಾಗಿ ಅದ್ವಿತಿ ಶೆಟ್ಟಿ ತೆರೆ ಹಂಚಿಕೊಂಡಿದ್ದಾರೆ, ಇದರಿಂದ ಚಿತ್ರಕ್ಕೆ ಇನ್ನಷ್ಟು ಆಕರ್ಷಣೆ ಸೇರಿದೆ.
ಈ ಚಿತ್ರವು ವಿಶೇಷವಾಗಿ ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಿದೆ. ಚಿತ್ರವು ಕರಾವಳಿ ಸೊಗಡಿನ ಕಥಾಹಂದರವನ್ನು ಹೊಂದಿದ್ದು, ಆಕ್ಷನ್, ಕಾಮಿಡಿ ಮತ್ತು ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ. ‘ಜೈ’ ಚಿತ್ರವು ನವೆಂಬರ್ 14 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.
ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿರುವ ಸುನೀಲ್ ಶೆಟ್ಟಿ ಅವರು ಮೂಲತಃ ಕರಾವಳಿಯವರು (ಮಂಗಳೂರು). ಅವರಿಗೆ ತುಳು ಭಾಷೆ ಮತ್ತು ಸಂಸ್ಕೃತಿಯ ಮೇಲೆ ಅಪಾರ ಪ್ರೇಮ ಮತ್ತು ಅಭಿಮಾನವಿದೆ. ಈ ಅಭಿಮಾನದಿಂದಲೇ ಅವರು ‘ಜೈ’ ಚಿತ್ರದಲ್ಲಿ ಅತ್ಯಂತ ಪ್ರಮುಖವಾದ ಅತಿಥಿ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಇನ್ನಷ್ಟು ಸಂಭ್ರಮದ ವಿಷಯವೆಂದರೆ, ಈ ಪಾತ್ರಕ್ಕಾಗಿ ಅವರು ಯಾವುದೇ ಸಂಭಾವನೆಯನ್ನು ಪಡೆಯದೆ, ಕೇವಲ ಭಾಷಾಭಿಮಾನದಿಂದ ಮಾತ್ರ ನಟಿಸಿರುವುದು ಚಿತ್ರತಂಡ ಮತ್ತು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಚಿತ್ರದ ಬಿಡುಗಡೆಯ ಹೊಸ್ತಿಲಲ್ಲಿ ನಡೆಯುತ್ತಿರುವ ಈ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಖುದ್ದಾಗಿ ಹಾಜರಾಗುವ ಮೂಲಕ, ಸುನೀಲ್ ಶೆಟ್ಟಿ ಅವರು ಇಡೀ ‘ಜೈ’ ಚಿತ್ರತಂಡಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದಾರೆ. ನವೆಂಬರ್ 7ರ ಸಂಜೆ ನಡೆಯಲಿರುವ ಈ ಕಾರ್ಯಕ್ರಮವು ‘ಜೈ’ ಚಿತ್ರದ ಬಗ್ಗೆ ಇರುವ ನಿರೀಕ್ಷೆಯನ್ನು ಇಮ್ಮಡಿಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.





