ಸ್ವಾತಂತ್ರ್ಯ ಸಂಗ್ರಾಮದ ಕಥಾನಕ ರಣಬಾಲಿ ಸಿನಿಮಾದ ಮತ್ತೊಂದು ಹೈ-ವೋಲ್ಟೇಜ್ ಟೀಸರ್ ರಿವೀಲ್ ಆಗಿದೆ. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ, ಕಾಟ ಕೊಟ್ಟವ್ರ ರುಂಡಗಳನ್ನ ಚೆಂಡಾಡಿ, ರಕ್ತದೋಕುಳಿ ಹರಿಸಿದ ರಣಬಾಲಿಯ ಆ ದೃಶ್ಯಚಿತ್ತಾರ ನೋಡುಗರ ಮೈ ನಡುಗಿಸುವಂತಿದೆ. ಬೆಳ್ಳಿತೆರೆ ಬೆಳಗಲು ಬರ್ತಿರೋ 80 ಲಕ್ಷ ಭಾರತೀಯರ ಬಲಿ ಪಡೆದ ಆ ಭಯಾನಕ ನಗ್ನಸತ್ಯದ ಕಥೆ ನಿಮ್ಮ ಮುಂದೆ.
- 80ಲಕ್ಷ ಭಾರತೀಯರ ಬಲಿ.. ಬ್ರಿಟಿಷರ ಸಿಂಹಸ್ವಪ್ನ ರಣಬಾಲಿ
- ಸ್ವತಂತ್ರ ಸಂಗ್ರಾಮದ ಕಥೆ ರಣಬಾಲಿಯಲ್ಲಿ ವಿಜಯ್-ರಶ್ಮಿಕಾ
- ಡೆಕ್ಕನ್ ಪ್ರಸ್ಥಭೂಮಿಯ ಭೀಕರ ಕ್ಷಾಮದ ಕುರಿತ ನೈಜ ಚಿತ್ರಣ
- ಬ್ರಿಟಿಷರ ದಬ್ಬಾಳಿಕೆಗೆ ಜೀವ ತೆತ್ತ 80 ಲಕ್ಷಕ್ಕೂ ಅಧಿಕ ಮಂದಿ..!
ಇದು ಟಾಲಿವುಡ್ನಲ್ಲಿ ತಯಾರಾಗ್ತಿರೋ ಸ್ವತಂತ್ರಪೂರ್ವ ಭಾರತದ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಕಾಲಘಟ್ಟದ ಕುರಿತ ರಣಬಾಲಿ ಸಿನಿಮಾದ ಟೀಸರ್ ಝಲಕ್. ಬಹಳ ಸಮೃದ್ಧವಾಗಿದ್ದ ನಮ್ಮ ಇಂಡಿಯಾದ ಸಂಪತ್ತನ ಲೂಟಿ ಮಾಡಿದ ಬ್ರಿಟಿಷರು, ಅಕ್ಷರಶಃ ಭಾರತೀಯರ ರಕ್ತ ಬಗೆದುಬಿಟ್ಟಿದ್ದರು. ಕ್ಷಾಮ ಬಂದಾಗ ತುತ್ತು ಅನ್ನ ನೀಡದೆ, ಮಾನವೀಯತೆಯನ್ನ ಕೂಡ ಮರೆತು, ರಾಕ್ಷಸ ಪ್ರವೃತ್ತಿ ತೋರಿದ್ರು.
ಅದರಲ್ಲೂ ಡೆಕ್ಕನ್ ಪ್ರಸ್ಥಭೂಮಿಯಾದ ಮದ್ರಾಸ್, ಬಾಂಬೆ, ಮೈಸೂರು, ಹೈದ್ರಾಬಾದ್ ಸಂಸ್ಥಾನಗಳು ಭೀಕರ ಕ್ಷಾಮಕ್ಕೆ ತುತ್ತಾಗಿ, ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡರು. ಕರ್ನಾಟಕದ ಇತಿಹಾಸಲ್ಲಿ ಅದನ್ನ ಧಾತು ಈಶ್ವರಿ ಕ್ಷಾಮ ಅಂತಲೇ ಕರೆಯಲಾಗುತ್ತೆ. 1876ರಿಂದ 1878ರ ತನಕ ಮೂರು ವರ್ಷಗಳ ಮಹಾ ಕ್ಷಾಮಕ್ಕೆ ಜನ, ಜಾನುವಾರುಗಳು ಅನ್ನ, ದವಸ ಧಾನ್ಯ, ನೀರು, ಮೇವಿಲ್ಲದೆ ಎಲ್ಲೆಂದರಲ್ಲೇ ಅಸ್ಥಪಂಜರಗಳಾಗಿದ್ದು ಸುಳ್ಳಲ್ಲ.
ನಮ್ಮ ದೇಶದ ಅಪಾರ ಸಂಪತ್ತನ್ನ ದೋಚಿದ ಬ್ರಿಟಿಷರು, ತೆರಿಗೆ ರೂಪದಲ್ಲಿ ಬೆಳೆದ ದವಸ ಧಾನ್ಯಗಳನ್ನ ಕೂಡ ಮುಟ್ಟುಗೋಲು ಹಾಕಿಕೊಳ್ತಿದ್ರು. ಆದ್ರೆ ಅದೇ ಜನ ತಿನ್ನೋಕೆ ಆಹಾರ ಇಲ್ಲದೆ ನರಳುವಾಗ ತುತ್ತು ಅನ್ನ ನೀಡದೆ, ಅವ್ರ ಕತ್ಯು ಹಿಸುಕಿ ಕೊಲ್ಲುವ ಮೂಲಕ ಅಮಾನವೀಯತೆ ತೋರಿದ್ರು ಆ ಬ್ರಿಟಿಷ್ ನಾಯಿಗಳು. ಆಗ ಅವ್ರ ದಬ್ಬಾಳಿಕೆಯ ಹುಟ್ಟಡಗಿಸಲು ಹುಟ್ಟಿ ಬಂದವನೇ ರಣಬಾಲಿ. ಅಕ್ಷರಶಃ ಅವ್ರ ನಿದ್ದೆಗೆಡಿಸಿದ ಸ್ವತಂತ್ರ ಯೋಧ. ಎಲ್ಲಿ ಬ್ರಿಟಿಷರ ಅಟ್ಟಹಾಸ, ಅರಾಜಕತೆ ಹೆಚ್ಚಾಗಿರುತ್ತೋ ಅಲ್ಲಿ ರಣಬಾಲಿಯ ಕತ್ತಿ ನೆತ್ತರು ಹರಿಸುತ್ತೆ.
ನಿರ್ದೇಶಕ ರಾಹುಲ್.. ಇತಿಹಾಸದಲ್ಲಿ ಹುದುಗಿಹೋಗಿರೋ ಅಂತಹ ನೈಜ ಘಟನೆಗೆ ಸಿನಿಮಾರೂಪ ಕೊಡ್ತಿದ್ದು, ವಿಜಯ್ ದೇವರಕೊಂಡ ರಣಬಾಲಿಯಾಗಿ ರೌದ್ರಾವತಾರ ತಾಳಿದ್ದಾರೆ. ಇನ್ನೂ ಜಯಮ್ಮನಾಗಿ ರಶ್ಮಿಕಾ ಮಂದಣ್ಣ ಆ ರಣಬಾಲಿಯ ಧರ್ಮಪತ್ನಿಯಾಗಿದ್ದುಕೊಂಡೇ ಆಕೆಯೂ ಹೋರಾಟದ ಭಾಗವಾಗ್ತಾಳೆ. ಹಾಲಿವುಡ್ ನಟ ಅರ್ನಾಲ್ಡ್ ಓಸ್ಲೋ ಇಲ್ಲಿ ಖಡಕ್ ಖಳನಾಯಕನಾಗಿ ಕಾಣಿಸಿಕೊಂಡಿದ್ದು, ಬ್ರಿಟಿಷ್ ಅಧಿಕಾರಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಸಿನಿಮಾ ಬಹುತೇಕ ಕಂಪ್ಲೀಟ್ ಆಗಿದ್ದು, ಕೊನೆಯ ಹಂತ ತಲುಪಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಈ ಕರುಳು ಕಿವುಚೋ ಎಮೋಷನಲ್ ಕಮ್ ಬ್ರಿಟಿಷರ ವಿರುದ್ಧದ ಹೋರಾಟದ ಕ್ರಾಂತಿಕ ಕಿಚ್ಚಿನ ಮಾಸ್ ಮಿಕ್ಸ್ ಸಿನಿಮಾ, ಅಕ್ಟೋಬರ್ 16ಕ್ಕೆ ವರ್ಲ್ಡ್ವೈಡ್ ಐದೈದು ಪ್ರಮುಖ ಭಾಷೆಗಳಲ್ಲಿ ತೆರೆಗೆ ಬರ್ತಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





