ನವದೆಹಲಿ ಸೆ.12: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇಂದು ಶನಿವಾರ ನಸುಕಿನ ಜಾವ ನವದೆಹಲಿಗೆ ಆಗಮಿಸಿದ್ದಾರೆ. 2020ರ ಗಲ್ವಾನ್ ಘರ್ಷಣೆಯ ಬಳಿಕ ಹಲವು ವರ್ಷಗಳ ನಂತರ ಜಿನ್‌ಪಿಂಗ್ ಭಾರತಕ್ಕೆ ಭೇಟಿ ನೀಡಿರುವುದು ಉಭಯ ದೇಶಗಳ ಸಂಬಂಧದ ದೃಷ್ಟಿಯಿಂದ ಮಹತ್ವ ಪಡೆದಿದೆ. ಈ ಭೇಟಿಯ ಬೆನ್ನಲ್ಲೇ ಭಾರತ–ಚೀನಾ ನಡುವಿನ ಉನ್ನತ ಮಟ್ಟದ ಮಾತುಕತೆಗೆ ಹೊಸ ವೇದಿಕೆ ಸಿಕ್ಕಂತಾಗಿದೆ.
ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಪಶ್ಚಿಮ ಏಷ್ಯಾ ಮತ್ತು ಉಕ್ರೇನ್ ಸಂಘರ್ಷ, ವ್ಯಾಪಾರ ಉದ್ವಿಗ್ನತೆ, ಇಂಧನ ಭದ್ರತೆ ಸೇರಿದಂತೆ ಹಲವು ಸವಾಲುಗಳು ಎದುರಾಗಿವೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಬ್ರಿಕ್ಸ್ ಶೃಂಗಸಭೆಯಲ್ಲಿ ಜಾಗತಿಕ ಆಡಳಿತ, ಬಹುಪಕ್ಷೀಯತೆ, ವ್ಯಾಪಾರ, ಹೂಡಿಕೆ, ಇಂಧನ ಮತ್ತು ಆಹಾರ ಭದ್ರತೆ ಸೇರಿದಂತೆ ಹಲವು ಪ್ರಮುಖ ವಿಚಾರಗಳು ಚರ್ಚೆಯಾಗುವ ನಿರೀಕ್ಷೆಯಿದೆ.
ಮೋದಿ–ಜಿನ್‌ಪಿಂಗ್ ಭೇಟಿ ಹೈಲೈಟ್
ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮುಖಾಮುಖಿ ಮಾತುಕತೆ ನಡೆಸಲಿದ್ದಾರೆ. 2020ರ ಗಲ್ವಾನ್ ಘರ್ಷಣೆಯ ಬಳಿಕ ಭಾರತ–ಚೀನಾ ಸಂಬಂಧಗಳಲ್ಲಿ ಉಂಟಾದ ಉದ್ವಿಗ್ನತೆಯನ್ನು ಹಂತಹಂತವಾಗಿ ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿರುವ ಸಂದರ್ಭದಲ್ಲಿ ಈ ಭೇಟಿ ಮಹತ್ವ ಪಡೆದಿದೆ.
ಉಭಯ ದೇಶಗಳ ನಡುವೆ ವಿಮಾನ ಸೇವೆ ಪುನರಾರಂಭ, ವೀಸಾ ವ್ಯವಸ್ಥೆ ಸರಳೀಕರಣ ಹಾಗೂ ಉನ್ನತ ಮಟ್ಟದ ರಾಜತಾಂತ್ರಿಕ ಸಂಪರ್ಕ ಹೆಚ್ಚಿಸುವಂತಹ ಕ್ರಮಗಳು ಕೈಗೊಳ್ಳಲಾಗಿದೆ. ಆದರೆ ಸುಮಾರು 3,500 ಕಿಲೋಮೀಟರ್ ಉದ್ದದ ಗಡಿಯಲ್ಲಿ ಸೇನಾ ನಿಯೋಜನೆ ಸೇರಿದಂತೆ ಗಡಿ ವಿವಾದದ ಹಲವು ಸವಾಲುಗಳು ಇನ್ನೂ ಮುಂದುವರಿದಿವೆ.
ಹೀಗಾಗಿ ಮೋದಿ–ಜಿನ್‌ಪಿಂಗ್ ಮಾತುಕತೆಯಲ್ಲಿ ಗಡಿ ಪರಿಸ್ಥಿತಿ, ದ್ವಿಪಕ್ಷೀಯ ವ್ಯಾಪಾರ, ಹೂಡಿಕೆ ಹಾಗೂ ಭಾರತ–ಚೀನಾ ಸಂಬಂಧಗಳ ಮುಂದಿನ ದಿಕ್ಕು ಪ್ರಮುಖ ಚರ್ಚಾ ವಿಷಯಗಳಾಗುವ ಸಾಧ್ಯತೆಯಿದೆ.
ಹೆಚ್ಚಿನ ಸಂವಹನಕ್ಕೆ ಚೀನಾ ಒತ್ತು
ಜಿನ್‌ಪಿಂಗ್ ಭಾರತಕ್ಕೆ ಆಗಮಿಸುವ ಮುನ್ನ ಚೀನಾದ ಭಾರತದ ರಾಯಭಾರಿ ಝು ಫೆಹೋಂಗ್ ಅವರು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಸುಧಾರಿಸಲು ಬೀಜಿಂಗ್, ನವದೆಹಲಿಯೊಂದಿಗೆ ಕೆಲಸ ಮಾಡಲು ಸಿದ್ಧವಿದೆ ಎಂದು ಹೇಳಿದ್ದಾರೆ.
ಮೋದಿ ಮತ್ತು ಜಿನ್‌ಪಿಂಗ್ ಅವರ ಕಾರ್ಯತಂತ್ರದ ಮಾರ್ಗದರ್ಶನದಲ್ಲಿ ಭಾರತ–ಚೀನಾ ಸಂಬಂಧವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಉಭಯ ದೇಶಗಳು ಸಂವಹನ ಹೆಚ್ಚಿಸಬೇಕು, ಸಹಕಾರ ವಿಸ್ತರಿಸಬೇಕು ಮತ್ತು ಭಿನ್ನಾಭಿಪ್ರಾಯಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು ಎಂಬ ಸಂದೇಶವನ್ನೂ ಚೀನಾ ನೀಡಿದೆ.
ಒಟ್ಟಿನಲ್ಲಿ, ಬ್ರಿಕ್ಸ್ ಶೃಂಗಸಭೆಯ ವೇದಿಕೆಯಲ್ಲಿ ನಡೆಯಲಿರುವ ಮೋದಿ–ಜಿನ್‌ಪಿಂಗ್ ಮಾತುಕತೆ ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಹೊಸ ತಿರುವು ನೀಡುತ್ತದೆಯೇ ಎಂಬುದು ಇದೀಗ ಕುತೂಹಲ ಮೂಡಿಸಿದೆ.





