ಬೆಂಗಳೂರು ಸೆ.12: ಮೆಜೆಸ್ಟಿಕ್ ರೈಲ್ವೇ ನಿಲ್ದಾಣದ ಯಾರ್ಡ್‌ನಲ್ಲಿ ನಿಂತಿದ್ದ ಖಾಲಿ ರೈಲು ಬೋಗಿಗೆ ಬೆಂಕಿ ಹೊತ್ತಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಿಗರೇಟ್ ಸೇದಿ ಬೋಗಿಯೊಳಗೆ ಎಸೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಬಂಧಿತ ಆರೋಪಿಯನ್ನು ಮಹಾರಾಷ್ಟ್ರದ ನಾಸಿಕ್ ಮೂಲದ ರವಿ ಬೋವಾರ್ಕ್ ತಿರ್ಮ (40) ಎಂದು ಗುರುತಿಸಲಾಗಿದೆ. ಆರೋಪಿ ಬೆಂಗಳೂರಿನಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಯಾವುದೇ ನಿರ್ದಿಷ್ಟ ವಸತಿ ವ್ಯವಸ್ಥೆ ಇಲ್ಲದೆ ಕಲ್ಯಾಣ ಮಂಟಪಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಲಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 6ರಂದು ಆರೋಪಿ ಮೆಜೆಸ್ಟಿಕ್ ರೈಲ್ವೇ ಯಾರ್ಡ್‌ನಲ್ಲಿ ನಿಂತಿದ್ದ ಖಾಲಿ ಬೋಗಿಯೊಳಗೆ ಪ್ರವೇಶಿಸಿದ್ದ. ಅಲ್ಲಿ ಸಿಗರೇಟ್ ಸೇದಿದ್ದ ಆತ, ಬಳಿಕ ಅದನ್ನು ಅಲ್ಲಿಯೇ ಎಸೆದು ಹೊರಗೆ ಹೋಗಿದ್ದ ಎನ್ನಲಾಗಿದೆ. ಸಿಗರೇಟ್‌ನಿಂದ ಉಂಟಾದ ಬೆಂಕಿಯ ಕಿಡಿ ಬೋಗಿಯಲ್ಲಿದ್ದ ವಸ್ತುಗಳಿಗೆ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ.
ಬೆಂಕಿ ಹಾಗೂ ದಟ್ಟ ಹೊಗೆ ಕಾಣಿಸಿಕೊಂಡಿದ್ದರಿಂದ ಆತ ಭಯಗೊಂಡು ಸ್ಥಳದಿಂದ ಪರಾರಿಯಾಗಿದ್ದ. ಘಟನೆ ಗಮನಕ್ಕೆ ಬಂದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಆರಂಭದಲ್ಲಿ ರೈಲು ಬೋಗಿಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಪ್ರಕರಣದ ತನಿಖೆ ಕೈಗೊಂಡ ರೈಲ್ವೆ ಪೊಲೀಸರು ಯಾರ್ಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ.
ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಅನುಮಾನಾಸ್ಪದ ವ್ಯಕ್ತಿಯ ಚಲನವಲನಗಳನ್ನು ಪತ್ತೆಹಚ್ಚಿದ್ದಾರೆ. ಬಳಿಕ ತನಿಖೆಯನ್ನು ಮುಂದುವರಿಸಿದಾಗ ರವಿ ಬೋವಾರ್ಕ್ ತಿರ್ಮನ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣದ ಕುರಿತು ಮಹತ್ವದ ಮಾಹಿತಿ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿ ಸಿಗರೇಟ್‌ಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಬೆಂಕಿ ಅವಘಡ ಸಂಭವಿಸುವ ಅಪಾಯವಿದೆ. ಮೆಜೆಸ್ಟಿಕ್ ರೈಲ್ವೇ ಯಾರ್ಡ್‌ನಲ್ಲಿನ ಈ ಘಟನೆ ಕೂಡ ನಿರ್ಲಕ್ಷ್ಯದಿಂದ ಸಂಭವಿಸಿದ ಅಗ್ನಿ ಅವಘಡಕ್ಕೆ ಉದಾಹರಣೆಯಾಗಿದೆ.
ಸದ್ಯ ರೈಲ್ವೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.





