ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರಕ್ಕೆ ಇಂದಿಗೆ ನೂರು ದಿನಗಳು ಪೂರ್ಣಗೊಂಡಿವೆ. ಈ ಸಂದರ್ಭದಲ್ಲಿ ನಾಡಿನ ಜನರನ್ನುದ್ದೇಶಿಸಿ ಮುಖ್ಯಮಂತ್ರಿಗಳು ವಿಶೇಷ ಪತ್ರ ಬರೆದಿದ್ದು, ಅದರಲ್ಲಿ ಜನರ ನಂಬಿಕೆ, ಸರ್ಕಾರದ ಹೊಣೆಗಾರಿಕೆ ಮತ್ತು ಮುಂದಿನ ದಿನಗಳ ಕಾರ್ಯಯೋಜನೆಗಳ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.
ಜನರ ನಂಬಿಕೆಯೇ ದೊಡ್ಡದು
ಪತ್ರದಲ್ಲಿ ಮುಖ್ಯಮಂತ್ರಿಗಳು, “ಮುಖ್ಯಮಂತ್ರಿಯಾಗಿ ರಾಜ್ಯದ ಜನತೆಯ ಸೇವೆ ಮಾಡುವ ಅವಕಾಶ ನನಗೆ ದೊರೆತು ಇಂದಿಗೆ ನೂರು ದಿನಗಳು ಪೂರೈಸಿವೆ. ಈ ನೂರು ದಿನಗಳು ಕೇವಲ ಒಂದು ಅವಧಿಯ ಲೆಕ್ಕವಲ್ಲ. ಕೋಟ್ಯಂತರ ಕನ್ನಡಿಗರ ಬದುಕಿನಲ್ಲಿ ಬದಲಾವಣೆ ತರಬೇಕೆಂಬ ಹೊಣೆಗಾರಿಕೆಯನ್ನು ಇನ್ನಷ್ಟು ಆಳವಾಗಿ ಅರಿಯುವ ನೂರು ದಿನಗಳಾಗಿವೆ. ಜನರ ನಂಬಿಕೆ ಮತ್ತು ವಿಶ್ವಾಸದ ಮುಂದೆ ಅಧಿಕಾರ ಚಿಕ್ಕದು. ಜನರ ನಿರೀಕ್ಷೆಗಳ ಮುಂದೆ ಹುದ್ದೆ ಚಿಕ್ಕದು. ನಮ್ಮ ಮುಂದೆ ಇರುವ ಸವಾಲು, ಜವಾಬ್ದಾರಿ, ಹೊಣೆಗಾರಿಕೆ ಮಾತ್ರ ದೊಡ್ಡದು” ಎಂದು ಭಾವನಾತ್ಮಕವಾಗಿ ತಿಳಿಸಿದ್ದಾರೆ.
ಸಿದ್ದರಾಮಯ್ಯನವರ ಆಡಳಿತ ಮಾದರಿ
ಸಿದ್ದರಾಮಯ್ಯನವರು ನಮ್ಮ ನಾಡಿಗೆ ಸಾಮಾಜಿಕ ನ್ಯಾಯದ ಗಟ್ಟಿಯಾದ ಅಡಿಪಾಯ ಹಾಕಿಕೊಟ್ಟಿದ್ದಾರೆ. ಸರ್ಕಾರ ಎಂದರೆ ಎಲ್ಲರಿಗಾಗಿ ಇರಬೇಕು, ಅದರಲ್ಲೂ ಶೋಷಿತರ, ದಮನಿತರ ಪರವಾಗಿ ಗಟ್ಟಿಯಾಗಿ ನಿಲ್ಲಬೇಕು ಎನ್ನುವುದನ್ನು ಅವರು ತಮ್ಮ ಆಡಳಿತದ ಮೂಲಕ ಸಾಧಿಸಿ ತೋರಿಸಿದ್ದಾರೆ. ಇದೇ ಬದ್ಧತೆ ಮತ್ತು ಕಾಳಜಿಯನ್ನು ನಾನೂ ಮುಂದುವರೆಸುತ್ತಿದ್ದೇನೆ ಎಂದು ಸಿಎಂ ಹೇಳಿದ್ದಾರೆ.
ಐದು ಗ್ಯಾರಂಟಿಗಳ ಯಶಸ್ಸು
ನಮ್ಮ ಐದು ಗ್ಯಾರಂಟಿಗಳು ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕ ಚೈತನ್ಯ, ಬದುಕಿಗೆ ನೆಮ್ಮದಿ ಮತ್ತು ಭದ್ರತೆಯನ್ನು ನೀಡಿವೆ. ಆದರೆ ಸರ್ಕಾರದ ಹೊಣೆಗಾರಿಕೆ ಇಷ್ಟಕ್ಕೇ ಮುಗಿಯುವುದಿಲ್ಲ. ಜನರಿಗೆ ಇಂದು ಏನು ಸಿಕ್ಕಿದೆ ಎನ್ನುವುದಕ್ಕಿಂತ, ನಾಳೆ ಅವರಿಗೆ ಇನ್ನೇನು ಬೇಕು ಎಂಬುದನ್ನು ಅರಿತು ಕೆಲಸ ಮಾಡುವುದು ನಮ್ಮ ದೃಷ್ಟಿಕೋನ ಮತ್ತು ಗುರಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರ ನೇತೃತ್ವದ ಸರ್ಕಾರಕ್ಕೆ ಇಂದಿಗೆ ನೂರು ದಿನಗಳು.
ಈ 100 ದಿನಗಳ ಸೇವೆಯ ಸಂದರ್ಭದಲ್ಲಿ, ನಾಡಿನ ಜನರನ್ನುದ್ದೇಶಿಸಿ ಸನ್ಮಾನ್ಯ ಮುಖ್ಯಮಂತ್ರಿಗಳು ಬರೆದಿರುವ ವಿಶೇಷ ಪತ್ರ ಇಲ್ಲಿದೆ. pic.twitter.com/U76j22X61R
— CM of Karnataka (@CMofKarnataka) September 10, 2026
ಜನರ ಧ್ವನಿಗೆ ಸ್ಪಂದನೆ
ಜನತೆಯ ನಿರೀಕ್ಷೆಗಳು ದೊಡ್ಡವು ಎಂಬುದು ನನಗೆ ಗೊತ್ತಿದೆ. ಅವು ದೊಡ್ಡದಾಗಿಯೇ ಇರಬೇಕು. ನಮ್ಮ ಸರ್ಕಾರ ಜನತೆಯ ಧ್ವನಿಯನ್ನು, ಜನರ ಕೂಗನ್ನು ವಿನಮ್ರತೆಯಿಂದ ಕೇಳಿಸಿಕೊಳ್ಳುತ್ತದೆ. ಜನತೆಯ ಸಾಮೂಹಿಕ ಬೇಡಿಕೆ ಮತ್ತು ಸಲಹೆಗಳನ್ನು ಸದಾ ಮುಕ್ತವಾಗಿ ಸ್ವೀಕರಿಸುತ್ತದೆ ಮತ್ತು ಪೂರಕವಾಗಿ ವರ್ತಿಸುತ್ತದೆ. ಜನತೆಗೆ ಇಷ್ಟವಿಲ್ಲದ್ದನ್ನು ಮುಲಾಜಿಲ್ಲದೆ ಹಿಂದಕ್ಕೆ ಪಡೆಯುತ್ತದೆ ಎನ್ನುವುದನ್ನು ನಮ್ಮ ಸರ್ಕಾರ ಸಾಬೀತು ಮಾಡಿದೆ ಎಂದು ಸಿಎಂ ಹೇಳಿದ್ದಾರೆ.
ದೃಢ ಕರ್ನಾಟಕ ನನ್ನ ಸಂಕಲ್ಪ. ಸಾಮಾಜಿಕವಾಗಿ, ಆರ್ಥಿಕವಾಗಿ, ಆಧುನಿಕವಾಗಿ ದೃಢವಾದ ಮಾದರಿ ಹೆಜ್ಜೆಗಳನ್ನು ನಾವು ಇಡುತ್ತೇವೆ. ನನ್ನ ಸರ್ಕಾರದ ಎದುರಿಗೆ ದೊಡ್ಡ ಸವಾಲುಗಳಿವೆ. ನಮ್ಮ ಅನ್ನದಾತರು ಬರಕ್ಕೆ ಸಿಲುಕಿದ್ದಾರೆ. ಈ ನೂರು ದಿನಗಳ ನಮ್ಮ ನಡೆ ಮುಂದಿನ 500 ದಿನಗಳಲ್ಲಿ ಸಾಗಬೇಕಾದ ಹಾದಿಗೆ ದಿಕ್ಕೂಚಿಯಾಗಿದೆ. ಕರ್ನಾಟಕ ಅವಕಾಶಗಳಿಗಾಗಿ ಕಾಯುವುದಿಲ್ಲ, ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶತದಿನೋತ್ಸವ ಕಾರ್ಯಕ್ರಮ
ಈ ಸಂಭ್ರಮದ ಹಿನ್ನೆಲೆ ಇಂದು ವಿಧಾನಸೌಧದ ಬ್ಯಾಂಕ್ವೇಟ್ ಹಾಲ್ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಸಚಿವರು, ಶಾಸಕರು ಭಾಗಿಯಾಗಲಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೂ ಭಾಗಿಯಾಗಿದ್ದು, ಸುಮಾರು 100 ರಿಂದ 150 ಜನ ಫಲಾನುಭವಿಗಳು ಪಾಲ್ಗೊಳ್ಳಲಿದ್ದಾರೆ.
ಸಿಎಂ ಅವರು ಫಲಾನುಭವಿಗಳ ಜೊತೆ ನೇರ ಸಂವಾದ ನಡೆಸಲಿದ್ದು, ಗ್ಯಾರಂಟಿಗಳು ಜನರಿಗೆ ಎಷ್ಟು ಅನುಕೂಲವಾಗಿವೆ ಮತ್ತು ಆರ್ಥಿಕವಾಗಿ ಎಷ್ಟು ಸಹಾಯಕವಾಗಿವೆ ಎಂಬ ಬಗ್ಗೆ ಚರ್ಚಿಸಲಿದ್ದಾರೆ. 100 ದಿನದ ಸಂಭ್ರಮದ ಬೆನ್ನಲ್ಲೇ ಮಹಿಳೆಯರು, ಯುವಕರು ಮತ್ತು ರೈತರನ್ನು ಗುರಿಯಾಗಿಸಿಕೊಂಡು ಹೊಸ ಯೋಜನೆಯೊಂದನ್ನು ಸಿಎಂ ಘೋಷಿಸುವ ಸಾಧ್ಯತೆಯಿದೆ.





