ನವದೆಹಲಿ ಸೆ.12: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ ಶೃಂಗಸಭೆಗೆ ಇಂದು ನವದೆಹಲಿಯಲ್ಲಿ ಅಧಿಕೃತ ಚಾಲನೆ ಸಿಗಲಿದೆ. ನಿನ್ನೆ ಸದಸ್ಯ ರಾಷ್ಟ್ರಗಳ ನಾಯಕರ ದ್ವಿಪಕ್ಷೀಯ ಮಾತುಕತೆಗಳು ಹಾಗೂ ಪೂರ್ವಭಾವಿ ಕಾರ್ಯಕ್ರಮಗಳು ನಡೆದಿದ್ದು, ಇಂದಿನಿಂದ ಬ್ರಿಕ್ಸ್ ನಾಯಕರ ಅಧಿಕೃತ ಸಭೆಗಳು ಆರಂಭವಾಗಲಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಹಲವು ರಾಷ್ಟ್ರಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗಿನ ಭೇಟಿ ವಿಶೇಷ ಕುತೂಹಲ ಮೂಡಿಸಿದೆ.
ಇಂದಿನ ಮೊದಲ ಅಧಿವೇಶನದಲ್ಲಿ ಜಾಗತಿಕ ಆಡಳಿತ ಮತ್ತು ಬಹುಪಕ್ಷೀಯತೆಯನ್ನು ಬಲಪಡಿಸುವುದು ಪ್ರಮುಖ ಚರ್ಚಾ ವಿಷಯವಾಗಲಿದೆ. ಸದಸ್ಯ ರಾಷ್ಟ್ರಗಳ ನಾಯಕರು ಕ್ಲೋಸ್‌ಡೋರ್ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಿದ್ದಾರೆ. ನಂತರ ‘ಇಂಡಿಯಾ ಇನೋವೇಟ್ಸ್’ ಪ್ರದರ್ಶನಕ್ಕೆ ಭೇಟಿ ನೀಡಲಿದ್ದು, ಭಾರತ ಮಂಟಪದಲ್ಲಿ ಅಧಿಕೃತ ಗ್ರೂಪ್ ಫೋಟೋ ಹಾಗೂ ಸಸಿ ನೆಡುವ ಕಾರ್ಯಕ್ರಮ ನಡೆಯಲಿದೆ. ಸಂಜೆ ಪ್ರಧಾನಿ ಮೋದಿ ಆಯೋಜಿಸುವ ಗಾಲಾ ಡಿನ್ನರ್‌ನಲ್ಲಿ ಜಾಗತಿಕ ನಾಯಕರು ಭಾಗವಹಿಸಲಿದ್ದಾರೆ.
ಮೋದಿ ಸರಣಿ ದ್ವಿಪಕ್ಷೀಯ ಸಭೆ
ಬ್ರಿಕ್ಸ್ ಶೃಂಗಸಭೆಯ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಹಲವು ರಾಷ್ಟ್ರಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಇಥಿಯೋಪಿಯಾ ಪ್ರಧಾನಿ ಅಬಿಯ್ ಅಹ್ಮದ್, 10.30ಕ್ಕೆ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ, 11 ಗಂಟೆಗೆ ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಹಾಗೂ 11.30ಕ್ಕೆ ವಿಯೆಟ್ನಾಂ ಪ್ರಧಾನಿ ಲೆ ಮಿನ್ ಹಂಗ್ ಅವರೊಂದಿಗೆ ಸಭೆ ನಿಗದಿಯಾಗಿದೆ.
ಸಂಜೆ 5.45ಕ್ಕೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಲಿದ್ದಾರೆ. ಗಾಲ್ವಾನ್ ಘರ್ಷಣೆಯ ಬಳಿಕ ಭಾರತಕ್ಕೆ ಜಿನ್‌ಪಿಂಗ್ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಮಾತುಕತೆಗೆ ಹೆಚ್ಚಿನ ಮಹತ್ವ ಸಿಕ್ಕಿದೆ. ಗಡಿ ವಿವಾದ, ವ್ಯಾಪಾರ, ಹೂಡಿಕೆ ಹಾಗೂ ದ್ವಿಪಕ್ಷೀಯ ಸಂಬಂಧಗಳಲ್ಲಿನ ಭಿನ್ನಾಭಿಪ್ರಾಯಗಳ ನಿರ್ವಹಣೆ ಪ್ರಮುಖ ವಿಚಾರಗಳಾಗುವ ಸಾಧ್ಯತೆಯಿದೆ.
ಮುರ್ಮು–ಇರಾನ್ ಅಧ್ಯಕ್ಷ ಭೇಟಿ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಳಗ್ಗೆ 11.30ಕ್ಕೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರನ್ನು ಭೇಟಿ ಮಾಡಲಿದ್ದಾರೆ. ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತ–ಇರಾನ್ ಸಂಬಂಧಗಳ ದೃಷ್ಟಿಯಿಂದ ಈ ಸಭೆಯೂ ಮಹತ್ವ ಪಡೆದಿದೆ.
ಇಂದಿನ ಸಭೆಗಳ ಬಳಿಕ ಬ್ರಿಕ್ಸ್ ಶೃಂಗಸಭೆಯ ಕಾರ್ಯಕ್ರಮಗಳು ನಾಳೆಯೂ ಮುಂದುವರಿಯಲಿವೆ. ಅಂತಿಮವಾಗಿ ಹಲವು ಸುತ್ತಿನ ಚರ್ಚೆಗಳ ಬಳಿಕ ನವದೆಹಲಿಯ ಘೋಷಣೆಗೆ ಸದಸ್ಯ ರಾಷ್ಟ್ರಗಳು ಸಹಿ ಹಾಕುವ ಮೂಲಕ ಶೃಂಗಸಭೆ ಮುಕ್ತಾಯಗೊಳ್ಳಲಿದೆ.





