ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ನೇತೃತ್ವದ ಇಂಡಿಯಾ ಬ್ಲಾಕ್ ರ್ಯಾಲಿ ಇದೀಗ ರಾಜಕೀಯ ವಿವಾದದ ಜೊತೆಗೆ ವ್ಯಾಪಾರ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ. ರಾಮಲೀಲಾ ಮೈದಾನದಲ್ಲಿ ನವೆಂಬರ್ 1ರಂದು ನಡೆದ ರ್ಯಾಲಿಯಿಂದಾಗಿ ದೆಹಲಿಯ ವ್ಯಾಪಾರಿಗಳಿಗೆ ಸುಮಾರು ₹11,000 ಕೋಟಿ ರೂಪಾಯಿ ಮೌಲ್ಯದ ವಹಿವಾಟು ನಷ್ಟವಾಗಿದೆ ಎಂದು ದೆಹಲಿಯ ವ್ಯಾಪಾರ ಮತ್ತು ಕೈಗಾರಿಕಾ ಮಂಡಳಿ (CTI) ಅಂದಾಜಿಸಿದೆ. ದೀಪಾವಳಿ ಹಬ್ಬದ ನಂತರದ ಪ್ರಮುಖ ಶಾಪಿಂಗ್ ಸಮಯದಲ್ಲಿ ರ್ಯಾಲಿ ನಡೆದಿದ್ದರಿಂದ ಮಾರುಕಟ್ಟೆಗಳ ವ್ಯಾಪಾರ ಚಟುವಟಿಕೆಗಳಿಗೆ ಹೊಡೆತ ಬಿದ್ದಿದೆ ಎಂಬುದು ವ್ಯಾಪಾರ ಸಂಘಟನೆಯ ಆರೋಪ.
ಇನ್ನೊಂದೆಡೆ, ದೆಹಲಿಯ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ. ಹೀಗಾಗಿ ವ್ಯಾಪಾರ ನಷ್ಟದ ವಿಚಾರ ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿದೆ.
ಚಿಲ್ಲರೆ, ಸಗಟು ವ್ಯಾಪಾರಕ್ಕೆ ₹8,800 ಕೋಟಿ ನಷ್ಟ
CTI ಅಧ್ಯಕ್ಷ ಬ್ರಿಜೇಶ್ ಗೋಯಲ್ ಅವರ ಪ್ರಕಾರ, ನವೆಂಬರ್ 1ರಂದು ದೆಹಲಿಯಲ್ಲಿ ಒಟ್ಟಾರೆ ಸುಮಾರು ₹11,000 ಕೋಟಿ ಮೌಲ್ಯದ ವ್ಯಾಪಾರ ವಹಿವಾಟು ನಷ್ಟವಾಗಿದೆ. ಈ ಪೈಕಿ ಚಿಲ್ಲರೆ ಮತ್ತು ಸಗಟು ವ್ಯಾಪಾರ ಕ್ಷೇತ್ರದಲ್ಲಿಯೇ ಸುಮಾರು ₹8,800 ಕೋಟಿ ನಷ್ಟವಾಗಿರುವುದಾಗಿ ಸಂಘಟನೆ ಅಂದಾಜಿಸಿದೆ.
ರಾಮಲೀಲಾ ಮೈದಾನದ ಸುತ್ತಮುತ್ತಲಿನ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಪ್ರಮುಖ ಮಾರುಕಟ್ಟೆಗಳಲ್ಲಿ ವ್ಯಾಪಾರ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿದ್ದವು ಎಂದು CTI ಹೇಳಿದೆ. ಕಾಶ್ಮೀರಿ ಗೇಟ್, ಚಾಂದಿನಿ ಚೌಕ್, ಚಾವ್ರಿ ಬಜಾರ್, ಖಾರಿ ಬಾವೊಲಿ, ಸದರ್ ಬಜಾರ್, ದರಿಯಾಗಂಜ್, ಕನ್ನಾಟ್ ಪ್ಲೇಸ್, ಪಾಲಿಕಾ ಬಜಾರ್ ಹಾಗೂ ಕರೋಲ್ ಬಾಗ್ ಸೇರಿದಂತೆ ಹಲವು ಪ್ರಮುಖ ವಾಣಿಜ್ಯ ಪ್ರದೇಶಗಳು ಇದರಿಂದ ಪರಿಣಾಮ ಎದುರಿಸಿವೆ ಎಂದು ತಿಳಿಸಿದೆ.
ಈ ಮಾರುಕಟ್ಟೆಗಳಲ್ಲಿ ಸುಮಾರು ಮೂರು ಲಕ್ಷ ಅಂಗಡಿಗಳಿದ್ದು, ಅವುಗಳ ಪೈಕಿ 2.5 ಲಕ್ಷ ಅಂಗಡಿಗಳು ಮುಚ್ಚಿದ್ದವು ಎಂಬುದು CTI ನೀಡಿರುವ ಅಂದಾಜು. ಇದರಿಂದ ಶೇ.80ರಷ್ಟು ವ್ಯಾಪಾರ ಚಟುವಟಿಕೆ ಸ್ಥಗಿತಗೊಂಡಿದೆ ಎಂದು ಸಂಘಟನೆ ಹೇಳಿದೆ.
ಸರಕು ಸಾಗಣೆ, ಹೋಟೆಲ್ ಉದ್ಯಮಕ್ಕೂ ಹೊಡೆತ
ರ್ಯಾಲಿಯ ಹಿನ್ನೆಲೆಯಲ್ಲಿ ರಸ್ತೆ ಸಂಚಾರ ನಿರ್ಬಂಧಗಳು ಮತ್ತು ಜನಸಂದಣಿಯಿಂದ ಸರಕು ಸಾಗಣೆ ಹಾಗೂ ಲಾಜಿಸ್ಟಿಕ್ಸ್ ಚಟುವಟಿಕೆಗಳಿಗೂ ಅಡ್ಡಿಯಾಗಿದೆ ಎಂದು CTI ಆರೋಪಿಸಿದೆ. ಸುಮಾರು 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸರಕುಗಳ ಚಲನೆಗೆ ತೊಂದರೆಯಾಗಿದ್ದರಿಂದ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಸುಮಾರು ₹1,500 ಕೋಟಿ ಮೌಲ್ಯದ ವಹಿವಾಟು ನಷ್ಟವಾಗಿದೆ ಎಂದು ಅಂದಾಜಿಸಿದೆ.
ಇನ್ನು ಹೋಟೆಲ್, ರೆಸ್ಟೋರೆಂಟ್ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೂ ಹೊಡೆತ ಬಿದ್ದಿದೆ ಎನ್ನಲಾಗಿದೆ. ಈ ವಲಯದಲ್ಲಿ ಸುಮಾರು ₹500 ಕೋಟಿ ನಷ್ಟವಾಗಿರುವುದಾಗಿ CTI ತಿಳಿಸಿದೆ. ಕನ್ನಾಟ್ ಪ್ಲೇಸ್, ಕರೋಲ್ ಬಾಗ್, ಪಹರ್ಗಂಜ್, ಚಾಂದಿನಿ ಚೌಕ್ ಹಾಗೂ ದರಿಯಾಗಂಜ್ ಪ್ರದೇಶಗಳಲ್ಲಿನ 2,000ಕ್ಕೂ ಹೆಚ್ಚು ಹೋಟೆಲ್ಗಳು, ರೆಸ್ಟೋರೆಂಟ್ಗಳು, ಅತಿಥಿಗೃಹಗಳು ಮತ್ತು ಧಾಬಾಗಳಲ್ಲಿ ಬುಕಿಂಗ್ಗಳು ರದ್ದಾಗಿದ್ದವು ಎಂದು ಸಂಘಟನೆ ಹೇಳಿದೆ.
ರ್ಯಾಲಿ ಮುಂದೂಡುವಂತೆ ಮನವಿ ಮಾಡಿದ್ದ ವ್ಯಾಪಾರಿಗಳು
ದೀಪಾವಳಿ ಹಬ್ಬದ ನಂತರ ರ್ಯಾಲಿ ಆಯೋಜಿಸುವಂತೆ ವ್ಯಾಪಾರಿಗಳ ಸಂಘವು ಈ ಹಿಂದೆಯೇ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ ನಾಯಕರಿಗೆ ಪತ್ರ ಬರೆದಿತ್ತು ಎನ್ನಲಾಗಿದೆ. ಹಬ್ಬದ ಸಮಯದಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗುವುದರಿಂದ ಮಾರುಕಟ್ಟೆಗಳಲ್ಲಿ ವ್ಯಾಪಾರ ಚಟುವಟಿಕೆಗಳು ಗರಿಗೆದರಿರುತ್ತವೆ. ಇಂತಹ ಸಂದರ್ಭದಲ್ಲಿ ದೊಡ್ಡ ರ್ಯಾಲಿ ನಡೆದರೆ ಅಂಗಡಿಗಳ ವಹಿವಾಟಿಗೆ ತೊಂದರೆಯಾಗಬಹುದು ಎಂಬ ಕಾರಣ ನೀಡಿ ರ್ಯಾಲಿಯನ್ನು ಮುಂದೂಡುವಂತೆ ಮನವಿ ಮಾಡಲಾಗಿತ್ತು ಎಂದು CTI ತಿಳಿಸಿದೆ.
‘ಅಂಗಡಿಗಳನ್ನು ಬಿಜೆಪಿ ಬಲವಂತವಾಗಿ ಮುಚ್ಚಿಸಿದೆ’: ರಾಹುಲ್ ಗಾಂಧಿ
ಇನ್ನೊಂದೆಡೆ, ವ್ಯಾಪಾರ ನಷ್ಟದ ಆರೋಪಕ್ಕೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ದೆಹಲಿಯಲ್ಲಿ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಲಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರ್ಯಾಲಿಗೆ ಆಗಮಿಸುವವರು ಸ್ಥಳೀಯ ಮಾರುಕಟ್ಟೆಗಳಲ್ಲಿ ಶಾಪಿಂಗ್ ಮಾಡುವಂತೆ ತಾವು ಮನವಿ ಮಾಡಿದ್ದೆವು. ಆದರೆ ಕನ್ನಾಟ್ ಪ್ಲೇಸ್ಗೆ ಭೇಟಿ ನೀಡಿದಾಗ ಪ್ರತಿಯೊಂದು ಅಂಗಡಿಯನ್ನೂ ಬಿಜೆಪಿ ಬಲವಂತವಾಗಿ ಮುಚ್ಚಿಸಿದೆ ಎಂದು ವಿಡಿಯೋವೊಂದರಲ್ಲಿ ಆರೋಪಿಸಿದ್ದಾರೆ.





