ವಿಜಯನಗರ ಸೆ. 12: ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಗೌರಿ ಗಣೇಶ ಹಬ್ಬವನ್ನು ಜನ ಬಹಳ ಅದ್ದೂರಿಯಾಗಿ ಆಚರಿಸುತ್ತಾರೆ. ಗಣೇಶ ಹಬ್ಬದಂದು ಮನೆ-ಮನೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಮೂರ್ತಿ ಇಟ್ಟು ಪೂಜೆ ಸಲ್ಲಿಸುತ್ತಾರೆ. ಹೀಗೆ ಪೂಜಿಸಲ್ಪಟ್ಟ ಗಣೇಶವನ್ನು ಕೊನೆಯಲ್ಲಿ ನೀರಿನಲ್ಲಿ ಬಿಡುತ್ತಾರೆ ಕೊನೆಯದಿನದಂದು ಸಂಗೀತ-ನೃತ್ಯಗಳ ಮೂಲಕ ಬಹಳ ವಿಜೃಂಭನೆಯಿಂದ ಆಚರಿಸಲಾಗುತ್ತಿದೆ.
ಈ ಸಮಯದಲ್ಲಿ ಡಿಜೆ ಬಳಕೆ ಸಾಮಾನ್ಯವಾಗಿರುತ್ತದೆ. ಇಂತಹ ಡಿಜೆಗಳಿಂದ ಶಬ್ಧ ಮಾಲಿನ್ಯ ಅಥವಾ ಜನ ಸಾಮಾನ್ಯರಿಗೆ ಕಿರಿ-ಕಿರಿ ಉಂಟಾಗುವ ವಾತಾವರಣವೂ ನಿರ್ಮಾಣವಾಗುತ್ತದೆ. ಅದಕ್ಕಾಗಿ ಗೌರಿ-ಗಣೇಶ ಹಬ್ಬದ ಆಚರಣೆಗೆ ವಿಜಯನಗರ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಹಬ್ಬದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಡಿಜೆ ಬಳಕೆಗೆ ಅವಕಾಶ ನೀಡುವುದಿಲ್ಲ ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಎಸ್. ಖಡಕ್ ಸೂಚನೆ ನೀಡಿದ್ದಾರೆ.
ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಎಸ್ಪಿ ಜಾಹ್ನವಿ, ಜಿಲ್ಲೆಯಾದ್ಯಂತ ಡಿಜೆ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಹಬ್ಬದ ಮೆರವಣಿಗೆ ಹಾಗೂ ಕಾರ್ಯಕ್ರಮಗಳಲ್ಲಿ ಸಾಂಪ್ರದಾಯಿಕ ವಾದ್ಯಮೇಳಗಳಿಗೆ ಅವಕಾಶವಿದೆ. ಆದರೆ ಡಿಜೆ ಬಳಕೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
“ಯಾವುದೇ ಕಾರಣಕ್ಕೂ ಡಿಜೆ ಬುಕ್ ಮಾಡಬೇಡಿ. ಡಿಜೆ ಬುಕ್ ಮಾಡಿ, ನಂತರ ನಾವು ಅವಕಾಶ ನೀಡದಿದ್ದರೆ ಅದು ನಿಮಗೇ ಸಮಸ್ಯೆಯಾಗಲಿದೆ” ಎಂದು ಎಸ್ಪಿ ಜಾಹ್ನವಿ ಸೂಚಿಸಿದ್ದಾರೆ.
ಹಬ್ಬದ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ, ವಿಸರ್ಜನೆ ಹಾಗೂ ಮೆರವಣಿಗೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.
ಡಿಜೆ ಸೌಂಡ್‌ನಿಂದ ಉಂಟಾಗಬಹುದಾದ ಶಬ್ದ ಮಾಲಿನ್ಯ, ಸಾರ್ವಜನಿಕರಿಗೆ ಆಗುವ ತೊಂದರೆ ಹಾಗೂ ಕಾನೂನು ಸುವ್ಯವಸ್ಥೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಗಣೇಶೋತ್ಸವ ಆಯೋಜಕರು ಹಾಗೂ ಸಾರ್ವಜನಿಕರು ಪೊಲೀಸರ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಎಸ್ಪಿ ಜಾಹ್ನವಿ ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆಯಾದ್ಯಂತ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಡಿಜೆ ಸಂಪೂರ್ಣ ಬ್ಯಾನ್ ಆಗಿರಲಿದೆ. ನಿಯಮ ಉಲ್ಲಂಘಿಸಿ ಡಿಜೆ ಬಳಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯೂ ಇದೆ. ಹೀಗಾಗಿ ಹಬ್ಬದ ಆಯೋಜಕರು ಮುಂಚಿತವಾಗಿಯೇ ಪೊಲೀಸರ ಸೂಚನೆಗಳನ್ನು ಪಾಲಿಸಿ, ಶಾಂತಿಯುತವಾಗಿ ಹಬ್ಬ ಆಚರಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.





