ಸ್ಯಾಂಡಲ್ವುಡ್ನಿಂದ ಟಾಲಿವುಡ್ವರೆಗೆ ತಮ್ಮ ಖಡಕ್ ನಟನೆಯಿಂದಲೇ ಸದ್ದು ಮಾಡ್ತಿರೋ ನಮ್ಮ ಕನ್ನಡದ ಹೆಮ್ಮೆಯ ನಟ, ಈಗ ಹೊಸ ಐಷಾರಾಮಿ ರಥವೇರಿ ಸಂಭ್ರಮಿಸುತ್ತಿದ್ದಾರೆ. ಸಾಲು ಸಾಲು ಹಿಟ್ ಸಿನಿಮಾಗಳ ಸಕ್ಸಸ್ ಬೆನ್ನಲ್ಲೇ ಮನೆಗೆ ಬಂದ ಆ ಡ್ರೀಮ್ ಕಾರು ಯಾವುದು..? ಟಾಲಿವುಡ್ ದಿಗ್ಗಜರನ್ನೇ ಫಿದಾ ಮಾಡಿದ್ದ ಪ್ರಮೋದ್ ಪಂಜು ಹೊಸ ಪಯಣದ ರೋಚಕ ಅಪ್ಡೇಟ್ ಇಲ್ಲಿದೆ ನೋಡಿ.
- ಲೆನಿನ್ ಸಕ್ಸಸ್.. ಹಲ್ಕಾ ಡಾನ್ ಪ್ರಮೋದ್ ಮನೆಗೆ ಥಾರ್
- ರತ್ನನ್ ಪ್ರಪಂಚದಿಂದ ಥಾರ್ ರಾಕ್ಸ್ವರೆಗೆ ಪ್ರಮೋದ್ ಜರ್ನಿ
- ಹೊಸ ರಸ್ತೆ.. ಹೊಸ ಪಯಣ.. ನಾಗಾರ್ಜುನ ಮೆಚ್ಚಿದ ನಟ
- ಕನ್ನಡ-ತೆಲುಗು ಡಾನ್ ಆಗಿ ಪ್ರಮೋದ್ ಪಂಜು ಅಬ್ಬರ..!
ಸ್ಯಾಂಡಲ್ವುಡ್ನಿಂದ ಟಾಲಿವುಡ್ವರೆಗೆ ತಮ್ಮ ಅಭಿನಯದ ಮೂಲಕ ಸದ್ದು ಮಾಡುತ್ತಿರೋ ನಟ ಪ್ರಮೋದ್ ಪಂಜು, ಈಗ ಮತ್ತೊಂದು ಸುದ್ದಿಯ ಮೂಲಕ ಸುದ್ದಿಯಲ್ಲಿದ್ದಾರೆ. ಟಾಲಿವುಡ್ ಅಂಗಳದಲ್ಲಿ ಬಿಡುಗಡೆಯಾಗಿ ಭರ್ಜರಿ ಸಕ್ಸಸ್ ಕಂಡ ಅಖಿಲ್ ಅಕ್ಕಿನೇನಿ ನಟನೆಯ ಲೆನಿನ್ ಸಿನಿಮಾದ ಯಶಸ್ಸಿನ ಗುಂಗಿನಲ್ಲಿರುವ ಪ್ರಮೋದ್, ಇದೀಗ ಬ್ರ್ಯಾಂಡ್ ನ್ಯೂ ಮಹೀಂದ್ರಾ ‘ಥಾರ್ ರಾಕ್ಸ್’ ಐಷಾರಾಮಿ ಕಾರನ್ನು ಮನೆಗೆ ತಂದು ಸಂಭ್ರಮಿಸಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದಲ್ಲಿ ಬಾಚಿ ರಾಜ ಮನ್ನಾರ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರಮೋದ್ ತೆಲುಗು ಚಿತ್ರರಂಗಕ್ಕೆ ಭರ್ಜರಿಯಾಗಿ ಪದಾರ್ಪಣೆ ಮಾಡಿದ್ದರು. ರತ್ನನ್ ಪ್ರಪಂಚ ಸಿನಿಮಾದ ಅದ್ಭುತ ಅಭಿನಯಕ್ಕೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದ ಪ್ರಮೋದ್ ಅವರ ನಟನೆಯನ್ನು ಸ್ವತಃ ಟಾಲಿವುಡ್ ಕಿಂಗ್ ನಾಗಾರ್ಜುನ ಅವರೇ ಮೆಚ್ಚಿಕೊಂಡಿದ್ದರು. ರತ್ನನ್ ಪ್ರಪಂಚ ನೋಡಿ ಫಿದಾ ಆಗಿದ್ದ ನಾಗಾರ್ಜುನ, ಸ್ವತಃ ಆಫರ್ ನೀಡಿ ಲೆನಿನ್ ಚಿತ್ರಕ್ಕೆ ಕರೆಸಿಕೊಂಡಿದ್ದರು. ಆ ಸಿನಿಮಾದಲ್ಲಿ ವಸಂತ್ ಎಂಬ ಪವರ್ಫುಲ್ ಪಾತ್ರಕ್ಕೆ ಜೀವ ತುಂಬಿದ ಪ್ರಮೋದ್, ತೆಲುಗು ಪ್ರೇಕ್ಷಕರ ಮನ ಗೆದ್ದು ಸೈ ಎನಿಸಿಕೊಂಡಿದ್ದರು.
ಸದ್ಯ ಲೆನಿನ್ ಸಿನಿಮಾದ ಸಕ್ಸಸ್ ಬೆನ್ನಲ್ಲೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಕಾರಿನ ಫೋಟೋಗಳನ್ನು ಹಂಚಿಕೊಂಡಿರುವ ಪ್ರಮೋದ್, “ಹೊಸ ರಸ್ತೆ, ಹೊಸ ಪಯಣ.. ಹೊಸ ರಥ ಸಾಗಲು ಸಜ್ಜಾಗಿದೆ ನನ್ನ ಕಲೆ ಮತ್ತು ಕೆಲಸವನ್ನು ಪ್ರೀತಿಸಿ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ಕಾಮೆಂಟ್ ಬಾಕ್ಸ್ನಲ್ಲಿ ಅಭಿನಂದನೆಗಳು ಹೇಳುತ್ತಾ ನಿಮ್ಮ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಇದು, ಕನ್ನಡದಲ್ಲೂ ಪವರ್ ಫುಲ್ ಪಾತ್ರಗಳು ನಿಮನ್ನ ಹುಡುಕಿಕೊಂಡು ಬರಲಿ ಅಣ್ಣಾ ಎಂದು ಶುಭಾ ಹಾರೈಸುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ನಟನಾಗಿ, ವಿಲನ್ ಆಗಿ ಕಮಾಲ್ ಮಾಡಿದ್ದ ಪ್ರಮೋದ್, ಈಗ ತೆಲುಗಿನಲ್ಲೂ ಭದ್ರ ನೆಲೆ ಕಂಡುಕೊಳ್ಳುತ್ತಿದ್ದಾರೆ. ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ, ಪ್ರಶಸ್ತಿಗಳ ಜೊತೆಗೆ ಈಗ ದುಬಾರಿ ಥಾರ್ ರಾಕ್ಸ್ ರಥವನ್ನೇ ಏರಿ ಮುನ್ನುಗ್ಗುತ್ತಿರುವ ಇವರ ಗ್ರಾಫ್ ದಿನದಿಂದ ದಿನಕ್ಕೆ ಏರುತ್ತಲೇ ಇದೆ.
ಸದ್ಯಕ್ಕೆ ಪ್ರಮೋದ್ ‘ಹಲ್ಕಾಡಾನ್’ ಎನ್ನುವ ಹೊಸ ಮಾಸ್ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ದ್ವಿಭಾಷಾ ಆಕ್ಷನ್-ಕಾಮಿಡಿ ಚಿತ್ರವಾಗಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಪ್ರಮೋದ್ ಡಾನ್ ಎಂಬ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಕೆ.ಪಿ. ಶ್ರೀಕಾಂತ್ ನಿರ್ಮಾಣ ಹಾಗೂ ಚಲಾ ನಿರ್ದೇಶನದ ಈ ಚಿತ್ರದಲ್ಲಿ ಅಮೃತಾ ಅಯ್ಯಂಗಾರ್ ನಾಯಕಿಯಾಗಿದ್ದು, ಸಾಯಿಕುಮಾರ್ ಮತ್ತು ಜಾನ್ ವಿಜಯ್ ಅವರಂತಹ ಘಟಾನುಘಟಿ ನಟರು ಕಾಣಿಸಿಕೊಳ್ಳುತ್ತಿದ್ದಾರೆ.
ಸ್ಯಾಂಡಲ್ವುಡ್ನಿಂದ ಆರಂಭವಾದ ಪ್ರಮೋದ್ ಅವರ ಈ ಯಶಸ್ಸಿನ ಪಯಣ ಹೀಗೆಯೇ ಮುಂದುವರಿಯಲಿ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





