ನವದೆಹಲಿ: ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಂಭವಿಸಿದ ಗಂಭೀರ ಕಾಕ್‌ಪಿಟ್ ಘಟನೆಯ ಬಳಿಕ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಧೈರ್ಯ ಮತ್ತು ವೃತ್ತಿಪರತೆಯ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಫ್ಲೈದುಬೈನ FZ1073 ವಿಮಾನದಲ್ಲಿ ಪೈಲಟ್‌ಗಳ ನಡುವೆ ಗಲಾಟೆ ಉಂಟಾದ ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣಕ್ಕೆ ತುರ್ತು ಮಾರ್ಗ ಬದಲಾವಣೆ ಮಾಡಿ ಸುರಕ್ಷಿತವಾಗಿ ಇಳಿಸಲಾಯಿತು. ವಿಮಾನದಲ್ಲಿದ್ದ 174 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.
ಗಾಯಗೊಂಡರೂ ಧೈರ್ಯ ಕಳೆದುಕೊಳ್ಳದ ಭಾರತೀಯ ಪೈಲಟ್
ಸೆಪ್ಟೆಂಬರ್ 30ರಂದು ನಡೆದ ಈ ಘಟನೆಯಲ್ಲಿ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ, ವಿಮಾನದ ಸಹ ಪೈಲಟ್ ಕಾಕ್‌ಪಿಟ್‌ನಲ್ಲಿ ಮಚ್ಚರ್ ಅವರ ಮೇಲೆ ದಾಳಿ ನಡೆಸಿದ್ದಾನೆ. ಈ ಸಂದರ್ಭದಲ್ಲಿ ವಿಮಾನದ ಎತ್ತರದಲ್ಲಿ ಏಕಾಏಕಿ ಭಾರಿ ಕುಸಿತ ಕಂಡುಬಂದಿದ್ದು, ತುರ್ತು ಪರಿಸ್ಥಿತಿಯ ಸಂಕೇತಗಳನ್ನು ರವಾನಿಸಲಾಯಿತು.
ಗಂಭೀರವಾಗಿ ಗಾಯಗೊಂಡಿದ್ದರೂ ಮಚ್ಚರ್ ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಕಾಕ್‌ಪಿಟ್‌ನ ಬಾಗಿಲು ತೆರೆಯಲು ನೆರವಾದರು ಎಂದು ವರದಿಗಳು ತಿಳಿಸಿವೆ. ಬಳಿಕ ಸಿಬ್ಬಂದಿ ಹಾಗೂ ಪ್ರಯಾಣಿಕರು ಸೇರಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಹಕರಿಸಿದ್ದಾರೆ. ವಿಮಾನವನ್ನು ತಬೂಕ್‌ಗೆ ತಿರುಗಿಸಿ ಸುರಕ್ಷಿತವಾಗಿ ಇಳಿಸಲಾಯಿತು.
ಕೆಲವೇ ಕ್ಷಣಗಳಲ್ಲಿ 14 ಸಾವಿರ ಅಡಿಗೂ ಹೆಚ್ಚು ಕುಸಿತ
ಘಟನೆಯ ಸಂದರ್ಭದಲ್ಲಿ ವಿಮಾನ ಅತ್ಯಂತ ವೇಗವಾಗಿ ಎತ್ತರ ಕಳೆದುಕೊಂಡಿರುವುದು ಫ್ಲೈಟ್-ಟ್ರ್ಯಾಕಿಂಗ್ ಮಾಹಿತಿಯಿಂದ ತಿಳಿದುಬಂದಿದೆ. ವರದಿಗಳ ಪ್ರಕಾರ, ವಿಮಾನವು ಸುಮಾರು 14,300 ಅಡಿ ಎತ್ತರವನ್ನು ಅಲ್ಪಾವಧಿಯಲ್ಲೇ ಕಳೆದುಕೊಂಡಿತ್ತು. ಇದರಿಂದ ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಆತಂಕ ಉಂಟಾಗಿತ್ತು. ನಂತರ ತುರ್ತು ಪರಿಸ್ಥಿತಿಯನ್ನು ಘೋಷಿಸಿ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್‌ಗೆ ತಿರುಗಿಸಲಾಯಿತು.
ತಬೂಕ್ ವಿಮಾನ ನಿಲ್ದಾಣದಲ್ಲಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆದ ಬಳಿಕ ಮಚ್ಚರ್ ಸೇರಿದಂತೆ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಚ್ಚರ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಪ್ರಧಾನಿ ಮೋದಿ ಮೆಚ್ಚುಗೆ
ಘಟನೆಯಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ತೋರಿದ ಧೈರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಗಂಭೀರ ಅಪಾಯದ ನಡುವೆಯೂ ಅವರು ತೋರಿದ ಧೈರ್ಯ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಕೈಗೊಂಡ ಕ್ರಮಗಳನ್ನು ಪ್ರಧಾನಿ ಮೆಚ್ಚಿಕೊಂಡಿದ್ದು, ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ಈ ಘಟನೆಯ ಬಳಿಕ ಮಚ್ಚರ್ ಅವರ ವೃತ್ತಿಜೀವನದ ಬಗ್ಗೆಯೂ ಮಾಹಿತಿ ಹೊರಬಂದಿದೆ. ಅವರು ಈ ಹಿಂದೆ ಸ್ಪೈಸ್‌ಜೆಟ್‌ನಲ್ಲಿ ಸುಮಾರು 11 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2022ರಿಂದ ಫ್ಲೈದುಬೈನಲ್ಲಿ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ವೃತ್ತಿಪರ ಪ್ರೊಫೈಲ್ ಪ್ರಕಾರ, ಬೋಯಿಂಗ್ 737 ವಿಮಾನಗಳಲ್ಲಿ ಸುಮಾರು 9,750 ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ ಎಂದು ವರದಿಯಾಗಿದೆ.
Captain Smit Machchhar is a HERO.
In the face of the gravest danger and despite being seriously injured, he showed immense courage and an unwavering resolve to protect the lives of others.
His valour helped save hundreds of lives and avert a great tragedy.
India is proud of…
— Narendra Modi (@narendramodi) October 1, 2026
ತಬೂಕ್‌ನಲ್ಲಿ ಸುರಕ್ಷಿತ ಲ್ಯಾಂಡಿಂಗ್
ವಿಮಾನದಲ್ಲಿ ಉಂಟಾದ ತುರ್ತು ಪರಿಸ್ಥಿತಿಯ ಬಳಿಕ ತಬೂಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತ ಲ್ಯಾಂಡಿಂಗ್ ನಡೆಸಲಾಯಿತು. ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದು, ನಂತರ ಅವರ ಮುಂದಿನ ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಯಿತು ಎಂದು ವರದಿಯಾಗಿದೆ.
ಘಟನೆಯ ನಿಖರ ಕಾರಣ, ಕಾಕ್‌ಪಿಟ್‌ನಲ್ಲಿ ಸಂಘರ್ಷಕ್ಕೆ ಕಾರಣವಾದ ಅಂಶಗಳು ಹಾಗೂ ಸಹ ಪೈಲಟ್‌ನ ಉದ್ದೇಶದ ಕುರಿತು ತನಿಖೆ ನಡೆಯುತ್ತಿದೆ. ಫ್ಲೈದುಬೈ ಕೂಡ ಘಟನೆ ಕುರಿತು ಅಧಿಕೃತ ತನಿಖೆ ಪೂರ್ಣಗೊಳ್ಳುವವರೆಗೆ ಊಹಾಪೋಹಗಳಿಗೆ ಅವಕಾಶ ನೀಡದಂತೆ ಮನವಿ ಮಾಡಿದೆ.





