ಡೆಹ್ರಾಡೂನ್: ಉತ್ತರಾಖಂಡ್ನ ಸಚಿವೆ ರೇಖಾ ಆರ್ಯ ಅವರ ಮೇಲೆ ಹಲ್ಲೆ ನಡೆಸಿ, ಜಾತಿ ಆಧಾರಿತ ಅವಹೇಳನಕಾರಿ ನಿಂದನೆ ಮಾಡಿದ ಆರೋಪದ ಹಿನ್ನೆಲೆ ಅವರ ಪತಿ ಲಾಲ್ ಸಾಹು ಅಲಿಯಾಸ್ ಪಪ್ಪು ಗಿರಿಧಾರಿ ಲಾಲ್ನನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಝಾನ್ಸಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಉತ್ತರಾಖಂಡ್ಗೆ ಕರೆತಂದಿದ್ದಾರೆ. ನಕಲಿ ದಾಖಲೆ ಸೃಷ್ಟಿ ಹಾಗೂ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಗಂಭೀರ ಆರೋಪಗಳು ಆತನ ವಿರುದ್ಧ ದಾಖಲಾಗಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಡೆಹ್ರಾಡೂನ್ ಎಸ್ಎಸ್ಪಿ ಪ್ರಮೇಂದ್ರ ದೋಭಾಲ್, ಗಿರಿಧಾರಿ ಲಾಲ್ನನ್ನು ನಕಲಿ ದಾಖಲೆ ಸೃಷ್ಟಿ ಮತ್ತು ಎಸ್ಸಿ/ಎಸ್ಟಿ ಕಾಯ್ದೆಯಡಿ ದಾಖಲಾಗಿರುವ ಆರೋಪಗಳ ಹಿನ್ನೆಲೆ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಇದೇ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಸತ್ಯೇಂದ್ರ ಠಾಕೂರ್ನನ್ನು ಉಧಮ್ ಸಿಂಗ್ ನಗರ ಜಿಲ್ಲೆಯ ಕಿಚ್ಚಾ ಸಮೀಪ ಬಂಧಿಸಲಾಗಿದೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಝಾನ್ಸಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಖಾಸಗಿ ವಿಶ್ವವಿದ್ಯಾಲಯವೊಂದರ ಆವರಣದ ಹೊರಭಾಗದಲ್ಲಿ ಗಿರಿಧಾರಿ ಲಾಲ್ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಶುಕ್ರವಾರ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ. ಬಳಿಕ ಉತ್ತರಾಖಂಡ್ಗೆ ಕರೆತಂದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಗಿರಿಧಾರಿ ಲಾಲ್ ವಿರುದ್ಧ ಈಗಾಗಲೇ 44ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕೆಲವು ಪ್ರಕರಣಗಳಲ್ಲಿ ಆತ ಶಿಕ್ಷೆಗೊಳಗಾಗಿದ್ದು, ಇನ್ನು ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ. ಪ್ರಸ್ತುತ ಪ್ರಕರಣದ ತನಿಖೆಯ ವೇಳೆ ಇತರ ವ್ಯಕ್ತಿಗಳ ಪಾತ್ರವೂ ಬೆಳಕಿಗೆ ಬಂದರೆ ಅವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮ ಸಂಬಂಧದ ವಿಚಾರವಾಗಿ ಪತಿ ವಿರುದ್ಧ ಆರೋಪ
ಸಚಿವೆ ರೇಖಾ ಆರ್ಯ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಮ್ಮ ಪತಿಯ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಪತಿಯ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿತ್ತು. ಅವರಿಗೆ ಇತರ ಮಹಿಳೆಯರೊಂದಿಗೆ ಅಕ್ರಮ ಸಂಬಂಧಗಳಿರುವ ವಿಚಾರ ತಿಳಿದುಬಂದಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ವಿಚಾರವಾಗಿ ಪತಿಯನ್ನು ಪ್ರಶ್ನಿಸಿ ಆಕ್ಷೇಪ ವ್ಯಕ್ತಪಡಿಸಿದಾಗ, ಆರಂಭದಲ್ಲಿ ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಮೌಖಿಕವಾಗಿ ಹಾಗೂ ಲಿಖಿತವಾಗಿ ಕ್ಷಮೆಯಾಚಿಸಿದ್ದರು. ಆದರೆ, ಕ್ಷಮೆ ಕೇಳಿದ ಬಳಿಕವೂ ಅದೇ ರೀತಿಯ ವರ್ತನೆ ಮುಂದುವರಿಸಿದ್ದರು ಎಂದು ರೇಖಾ ಆರ್ಯ ಆರೋಪಿಸಿದ್ದಾರೆ.
ಪತಿಯ ಇತರ ಸಂಬಂಧಗಳನ್ನು ವಿರೋಧಿಸಿದ ಕಾರಣಕ್ಕೆ ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸಲಾಗಿದೆ. ಅವಾಚ್ಯ ಶಬ್ದಗಳಿಂದ ನಿಂದಿಸುವುದರ ಜೊತೆಗೆ ಕೊಲೆ ಬೆದರಿಕೆಯನ್ನೂ ಹಾಕಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಅಧಿಕೃತ ನಿವಾಸದಲ್ಲಿಯೇ ಸಿಬ್ಬಂದಿಯ ಸಮ್ಮುಖದಲ್ಲಿ ಜಾತಿ ಆಧಾರಿತ ಅವಹೇಳನಕಾರಿ ಪದಗಳನ್ನು ಬಳಸಿ ನಿಂದಿಸಲಾಗುತ್ತಿತ್ತು ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.
ನಕಲಿ ಸಹಿ, ದಾಖಲೆ ಸೃಷ್ಟಿ ಆರೋಪ
ಈ ಪ್ರಕರಣದಲ್ಲಿ ನಕಲಿ ದಾಖಲೆಗಳ ಸೃಷ್ಟಿಯ ಆರೋಪವೂ ಪ್ರಮುಖವಾಗಿದೆ. ಸಂಬಂಧಪಟ್ಟ ಕಂಪನಿಗಳ ನಿರ್ದೇಶಕ ಹುದ್ದೆಯಿಂದ ರೇಖಾ ಆರ್ಯ ಅವರನ್ನು ತೆಗೆದುಹಾಕಲಾಗಿದೆ ಎಂದು ತೋರಿಸಲು ಗಿರಿಧಾರಿ ಲಾಲ್ ನಕಲಿ ಸಹಿ ಹಾಗೂ ದಾಖಲೆಗಳನ್ನು ಬಳಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಆ ಹುದ್ದೆಗೆ ಸತ್ಯೇಂದ್ರ ಠಾಕೂರ್ ಅವರನ್ನು ನೇಮಿಸಲು ಪ್ರಯತ್ನಿಸಲಾಗಿದೆ ಎಂಬುದಾಗಿಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.





