ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿದ ಆರೋಪಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಪ್ರಕರಣಕ್ಕೆ ಇದೀಗ ಮತ್ತೊಂದು ತಿರುವು ಸಿಕ್ಕಿದೆ. ಈ ಪ್ರಕರಣದಲ್ಲಿ ನಟ ಧನ್ವೀರ್‌ಗೆ ಸಂಕಷ್ಟ ಹೆಚ್ಚಾಗುವ ಸಾಧ್ಯತೆಯಿದೆ. ನಟ ಧನ್ವೀರ್ ಅವರ ಮೊಬೈಲ್ ಫೋನ್‌ನಿಂದ ವಿಡಿಯೋ ವೈರಲ್ ಆಗಿರುವುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಲಭ್ಯವಾಗಿವೆ ಎನ್ನಲಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿ ಕೇಂದ್ರ ಅಪರಾಧ ವಿಭಾಗದ (CCB) ಪೊಲೀಸರ ಕೈ ಸೇರಿದೆ.
ವಿಡಿಯೋ ವೈರಲ್ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಸಿಬಿ ಪೊಲೀಸರು ಈ ಹಿಂದೆ ನಟ ಧನ್ವೀರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಅವರ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿತ್ತು. ಆದರೆ ಪ್ರಾಥಮಿಕ ಪರಿಶೀಲನೆಯಲ್ಲಿ ವೈರಲ್ ವಿಡಿಯೋಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಮೊಬೈಲ್‌ನಿಂದ ಅಳಿಸಲಾಗಿರುವ ಮಾಹಿತಿಯನ್ನು ಮರುಪಡೆಯಲು ಪೊಲೀಸರು ಫೋನ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.
FSL ವರದಿಯಲ್ಲಿ ಮೊಬೈಲ್ ರಿಸೆಟ್ ಮಾಡಿರುವ ಮಾಹಿತಿ?
ಇದೀಗ ಸಿಸಿಬಿ ಪೊಲೀಸರಿಗೆ ಲಭ್ಯವಾಗಿರುವ FSL ವರದಿಯಲ್ಲಿ ಧನ್ವೀರ್ ಅವರ ಮೊಬೈಲ್ ಫೋನ್ ರಿಸೆಟ್ ಮಾಡಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಅಲ್ಲದೆ, ಜೈಲಿನ ವಿಡಿಯೋಗಳು, ಇತರ ವ್ಯಕ್ತಿಗಳೊಂದಿಗಿನ ಸಂಪರ್ಕಕ್ಕೆ ಸಂಬಂಧಿಸಿದ ಮಾಹಿತಿ ಸೇರಿದಂತೆ ಮೊಬೈಲ್‌ನಲ್ಲಿದ್ದ ಕೆಲವು ಡೇಟಾವನ್ನು ಅಳಿಸಿರುವ ಸಾಧ್ಯತೆಯ ಬಗ್ಗೆಯೂ ತನಿಖಾಧಿಕಾರಿಗಳಿಗೆ ಮಾಹಿತಿ ದೊರೆತಿದೆ.
ಈ ಹಿನ್ನೆಲೆ ಸಾಕ್ಷ್ಯ ನಾಶಪಡಿಸಿರುವ ಅನುಮಾನವೂ ವ್ಯಕ್ತವಾಗಿದೆ. ಮೊಬೈಲ್‌ನಿಂದ ಮಾಹಿತಿ ಅಳಿಸಿರುವುದರ ಹಿಂದಿನ ಉದ್ದೇಶವೇನು? ಜೈಲಿನ ವಿಡಿಯೋಗಳನ್ನು ಯಾರಿಂದ ಪಡೆದುಕೊಳ್ಳಲಾಗಿತ್ತು? ಅವುಗಳನ್ನು ವೈರಲ್ ಮಾಡುವಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.
ವಕೀಲರ ಹೇಳಿಕೆಯಿಂದ ತನಿಖೆಗೆ ಹೊಸ ತಿರುವು
ಈ ಹಿಂದೆ ವಿಚಾರಣೆ ವೇಳೆ ನಟ ಧನ್ವೀರ್ ಅವರು ವಕೀಲರೊಬ್ಬರು ತಮಗೆ ವಿಡಿಯೋ ಕಳುಹಿಸಿದ್ದರು ಎಂದು ಹೇಳಿದ್ದರು ಎನ್ನಲಾಗಿದೆ. ಈ ಹೇಳಿಕೆಯ ಆಧಾರದ ಮೇಲೆ ಸಂಬಂಧಪಟ್ಟ ವಕೀಲರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ ಧನ್ವೀರ್ ಅವರಿಗೆ ತಾವು ಯಾವುದೇ ವಿಡಿಯೋ ಹಂಚಿಕೊಂಡಿಲ್ಲ ಎಂದು ವಕೀಲರು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಇದೀಗ ವಕೀಲರ ಹೇಳಿಕೆ ಮತ್ತು FSL ವರದಿಯಲ್ಲಿನ ಅಂಶಗಳನ್ನು ಆಧರಿಸಿ ಪೊಲೀಸರು ಮುಂದಿನ ತನಿಖೆ ಚುರುಕುಗೊಳಿಸಿದ್ದಾರೆ. ಮೊಬೈಲ್‌ನಲ್ಲಿ ವಿಡಿಯೋಗಳು ಪತ್ತೆಯಾಗದಿರುವುದು ಮತ್ತು ಫೋನ್ ರಿಸೆಟ್ ಆಗಿರುವ ಅಂಶಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ನ್ಯಾಯಾಲಯದ ಗಮನಕ್ಕೆ ತರಲು ಸಿಸಿಬಿ ಸಿದ್ಧತೆ
FSL ವರದಿಯಲ್ಲಿ ಲಭ್ಯವಾಗಿರುವ ಮಾಹಿತಿಯನ್ನು ನ್ಯಾಯಾಲಯದ ಗಮನಕ್ಕೆ ತರಲು ಸಿಸಿಬಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಸಾಕ್ಷ್ಯ ನಾಶಪಡಿಸಿರುವ ಅನುಮಾನಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ಕೋರುವ ಸಾಧ್ಯತೆಯಿದೆ. ಅಲ್ಲದೆ, ನಟ ಧನ್ವೀರ್ ಅವರಿಗೆ ಮತ್ತೊಮ್ಮೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.
ಅಗತ್ಯವಿದ್ದಲ್ಲಿ ಬಂಧನ ವಾರಂಟ್ ಸೇರಿದಂತೆ ಕಾನೂನು ಪ್ರಕ್ರಿಯೆಗಳ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಏನಿದು ಪರಪ್ಪನ ಅಗ್ರಹಾರ ಜೈಲಿನ ರಾಜಾತಿಥ್ಯ ಪ್ರಕರಣ?
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮೊಬೈಲ್ ಫೋನ್ ಬಳಸುತ್ತಿರುವ ಹಾಗೂ ಡ್ಯಾನ್ಸ್ ಮಾಡುತ್ತಿರುವ ವಿಡಿಯೋಗಳು ಕಳೆದ ವರ್ಷ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಶಂಕಿತ ಉಗ್ರ ಜುಹಾದ್ ಹಮೀದ್, ಅತ್ಯಾಚಾರ ಪ್ರಕರಣದ ಅಪರಾಧಿ ಉಮೇಶ್ ರೆಡ್ಡಿ ಹಾಗೂ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ತರಣ್ ಸೇರಿದಂತೆ ಕೈದಿಗಳು ಜೈಲಿನೊಳಗೆ ಮೊಬೈಲ್ ಬಳಸುತ್ತಿರುವ ದೃಶ್ಯಗಳು ಭಾರಿ ಚರ್ಚೆಗೆ ಕಾರಣವಾಗಿದ್ದವು.
ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಳಿಕ ತನಿಖೆಯನ್ನು ಸಿಸಿಬಿ ಪೊಲೀಸರು ಕೈಗೆತ್ತಿಕೊಂಡಿದ್ದರು.
ತನಿಖೆಯ ಸಂದರ್ಭದಲ್ಲಿ ನಟ ಧನ್ವೀರ್ ಅವರು ವಿಡಿಯೋ ವೈರಲ್ ಮಾಡುವಲ್ಲಿ ಪಾತ್ರ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆ ನಡೆಸಿ ಮೊಬೈಲ್ ವಶಕ್ಕೆ ಪಡೆಯಲಾಗಿತ್ತು.





