ಬೆಂಗಳೂರು, ಆಗಸ್ಟ್ 12: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ (CCB) ಪೊಲೀಸರು ದಿಢೀರ್ ದಾಳಿ ನಡೆಸಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ ಸೇರಿದಂತೆ ವಿವಿಧೆಡೆ 10ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದ್ದಾರೆ. ಕೈದಿಗಳಿಗೆ ರಾಜಾತಿಥ್ಯ ನೀಡಿ ಫೈವ್ ಸ್ಟಾರ್ ಹೋಟೆಲ್‌ನಂತೆ ಮಾರ್ಪಟ್ಟಿದ್ದ ಆ ಜೈಲಿನಲ್ಲಿ ಇನ್ನೂ ಅಕ್ರಮ ಚಟುವಟಿಕೆಗಳು ಮುಂದುವರಿದೆ ಎಂಬ ಅನುಮಾನ ಮೂಡಿದ್ದು ಈ ದಾಳಿ ಕಾರಣವಾಗಿದೆ.
ಸಿಸಿಬಿ ದಾಳಿಯ ಹಿನ್ನೆಲೆ
ಪ್ರತಿ ಠಾಣಾ ವ್ಯಾಪ್ತಿಯಲ್ಲಿ ರೌಡಿ ನಿಗ್ರಹ ಪಡೆ ರಚನೆಯಾಗಿರುವ ಹಿನ್ನೆಲೆ, ಜೈಲಿನಲ್ಲಿರುವ ರೌಡಿಗಳು ಹೊರಗಿನ ರೌಡಿಗಳೊಂದಿಗೆ ಸಂಪರ್ಕದಲ್ಲಿರುವ ಮಾಹಿತಿ ಮತ್ತು ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ದೂರುಗಳು ಬಂದಿದ್ದವು. ಹೀಗಾಗಿ ಡಿಸಿಪಿ ಹರಿಬಾಬು ಮತ್ತು ಇಮಾಮ್ ಖಾಸೀಂ ನೇತೃತ್ವದಲ್ಲಿ ಸಿಸಿಬಿ ತಂಡವು ಕಾರ್ಯಾಚರಣೆ ನಡೆಸಿತು.
ದಾಳಿಯ ವಿವರ
ನಿನ್ನೆ (ಆಗಸ್ಟ್ 11) ರಾತ್ರಿ 8ರ ವರೆಗೆ 90ಕ್ಕೂ ಹೆಚ್ಚು ಸಿಸಿಬಿ ಪೊಲೀಸರು ಜೈಲಿನ ಪ್ರತಿ ಬ್ಯಾರಕ್‌ನಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೈದಿಗಳ ಬಳಿ ಇದ್ದ ಸುಮಾರು 10ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೊಬೈಲ್ ಫೋನ್‌ಗಳ ಜೊತೆಗೆ ಚಾರ್ಜರ್‌ಗಳು, ಇಯರ್ಫೋನ್‌ಗಳು ಹಾಗೂ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲೂ ಮೊಬೈಲ್ ಪತ್ತೆ
ಅತ್ಯಾಚಾರ ಪ್ರಕರಣದಲ್ಲಿ ಆರೋಪ ಸಾಬೀತಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲೂ ಮೊಬೈಲ್ ಪತ್ತೆಯಾಗಿದೆ. ಪ್ರಜ್ವಲ್ ಅವರು ಆ್ಯಂಡ್ರಾಯ್ಡ್ ಮೊಬೈಲ್ ಬಳಸುತ್ತಿರುವ ಬಗ್ಗೆ ಅನುಮಾನ ಹಿನ್ನೆಲೆ ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಜೈಲಿನೊಳಗೆ ಕೈದಿಗಳು ಮೊಬೈಲ್ ಬಳಸಲು ಹೇಗೆ ಅವಕಾಶ ಸಿಕ್ಕಿತು ಎಂಬುದರ ಕುರಿತು ಪೊಲೀಸರು ಪತ್ತೆ ಮಾಡಿದ ಮೊಬೈಲ್‌ಗಳ ಡೇಟಾವನ್ನು ಪರಿಶೀಲಿಸುತ್ತಿದ್ದಾರೆ.
ಈ ಹಿಂದೆಯೂ ಸಿಕ್ಕಿಬಿದ್ದಿತ್ತುಮೊಬೈಲ್
ಪರಪ್ಪನ ಅಗ್ರಹಾರ ಜೈಲು ಈ ಹಿಂದೆಯೂ ಕೈದಿಗಳಿಗೆ ಫೈವ್ ಸ್ಟಾರ್ ಹೋಟೆಲ್‌ನಂತೆ ಮಾರ್ಪಟ್ಟಿತ್ತು ಎಂದು ವರದಿಯಾಗಿತ್ತು. ಅಂದು ನಡೆದ ಬೃಹತ್ ಕಾರ್ಯಾಚರಣೆ ವೇಳೆ ಕೈದಿಗಳ ಬಳಿಯಿಂದ ವಿವಿಧ ಬಗೆಯ ಶೂಗಳು, ದಿಂಬುಗಳು, ಪಾತ್ರೆಗಳು, ಅಡುಗೆ ಸಾಮಗ್ರಿಗಳು, ಚೇರ್ಗಳು, ಫೋನ್‌ಗಳು, ಸಿಮ್ ಕಾರ್ಡ್‌ಗಳು, ಚಾರ್ಜರ್ ಗಳು ಮತ್ತು ಇಯರ್ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಕೈದಿಗಳ ಅಕ್ರಮ ಸಂಪರ್ಕದ ಆತಂಕ
ಜೈಲಿನೊಳಗೆ ಮೊಬೈಲ್ಗಳು ಪತ್ತೆಯಾಗಿರುವುದು ಗಂಭೀರ ವಿಚಾರವಾಗಿದೆ. ಕೈದಿಗಳು ಹೊರಗಿನ ತಮ್ಮ ಸಂಪರ್ಕಗಳೊಂದಿಗೆ ಮಾತನಾಡುವುದು, ಅಕ್ರಮ ಚಟುವಟಿಕೆಗಳಿಗೆ ಸೂಚನೆ ನೀಡುವುದು, ಸಾಕ್ಷಿ ನಾಶಪಡಿಸುವುದು ಮತ್ತು ಹೊಸ ಅಪರಾಧಗಳಿಗೆ ಯೋಜನೆ ರೂಪಿಸುವ ಸಾಧ್ಯತೆ ಇರುವುದರಿಂದ, ಜೈಲು ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ಪ್ರಶ್ನೆಗಳು ಹುಟ್ಟಿವೆ.





