ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ 75ನೇ ಜನ್ಮ ಜಯಂತಿ ವಿಶೇಷ ಅಭಿಮಾನಿಗಳು ಹಾಗೂ ಚಿತ್ರರಂಗ ಒಗ್ಗಟ್ಟಾಗಿ ವಿಷ್ಣು ಅಮೃತ ಮಹೋತ್ಸವವನ್ನ ಬಹಳ ಅದ್ಧೂರಿಯಾಗಿ ಹಮ್ಮಿಕೊಂಡಿತ್ತು. ಅದರಲ್ಲಿ ಸಾವಿರಾರು ಮಂದಿ ಫ್ಯಾನ್ಸ್ ಜೊತೆ ಕನ್ನಡ ಚಿತ್ರರಂಗದ ಹಿರಿಯ ಹಾಗೂ ಕಿರಿಯ ಕಲಾವಿದರು, ತಂತ್ರಜ್ಞರಿಗೆ ಪರಭಾಷಾ ಸ್ಟಾರ್ಸ್ ಕೂಡ ಸಾಥ್ ನೀಡಿದ್ದಾರೆ. ಅರ್ಧ ಕಿಲೋ ಮೀಟರ್ ಕನ್ನಡ ಧ್ವಜದ ಮೆರವಣಿಗೆ ಮೂಲಕ ದಾಖಲೆ ಕೂಡ ಬರೆದಿದೆ ಈ ಕಾರ್ಯಕ್ರಮ. ಅದ್ರ ಹೈಲೈಟ್ಸ್ ಇಲ್ಲಿದೆ ನೋಡಿ.
- ಡಾ. ವಿಷ್ಣು ಅಮೃತ ಮಹೋತ್ಸವ.. ನಾನ್‌ಸ್ಟಾಪ್ ಕಾರ್ಯಕ್ರಮ
- ಅಭಿಮಾನಿಗಳಿಗೆ ಚಿತ್ರರಂಗ.. ಪರಭಾಷಾ ಸ್ಟಾರ್ಸ್ ಕೂಡ ಬೆಂಬಲ
- ಸಾಹಸಸಿಂಹ ಭಾವಚಿತ್ರದ ಅರ್ಧ ಕಿಮೀ ಕನ್ನಡ ಧ್ವಜ ಮೆರವಣಿಗೆ
- 200 ಚಿತ್ರಗಳ ಪಯಣದ ವಿಶೇಷ ಗ್ಯಾಲರಿ.. ಇದು ದಾದಾ ಹಬ್ಬ
ಅಭಿನಯ ಭಾರ್ಗವ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಬರೀ ಹೆಸರಲ್ಲ. ಚಿತ್ರರಂಗದ ಶಕ್ತಿ. ಅದೇ ಕಾರಣದಿಂದ ವಿಷ್ಣುವರ್ಧನ್ ಅವರ ಅನುಪಸ್ಥಿತಿಯಲ್ಲೂ ಅಭಿಮಾನಿಗಳು ಬಹಳ ವಿಜೃಂಭಣೆಯಿಂದ ಅಮೃತ ಮಹೋತ್ಸವವನ್ನ ಹಮ್ಮಿಕೊಂಡಿದ್ದಾರೆ. ಅವ್ರ 75ನೇ ಹುಟ್ಟು ಹಬ್ಬದ ವಿಶೇಷ ನಾಯಂಡಹಳ್ಳಿ ಜಂಕ್ಷನ್ ಬಳಿ ಇರೋ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಸಾವಿರಾರು ಮಂದಿ ಸಮಕ್ಷಮದಲ್ಲಿ ಈ ಅದ್ಧೂರಿ ಕಾರ್ಯಕ್ರಮ ನೆರವೇರಿದೆ. ವೀರಕಪುತ್ರ ಶ್ರೀನಿವಾಸ್ ಮುಂದಾಳತ್ವದಲ್ಲಿ ನಡೆದ ಈ ಅರ್ಐಪೂರ್ಣ ಹಾಗೂ ಅವಿಸ್ಮರಣೀಯ ಮಹೋತ್ಸವಕ್ಕೆ ಶ್ರೀನಾಥ್ ಚಾಲನೆ ನೀಡಿದ್ದು ವಿಶೇಷ.
ವೀರಕಪುತ್ರ ಶ್ರೀನಿವಾಸ್‌ಗೆ ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲಾ, ಎಸ್ ವಿ ರಾಜೇಂದ್ರ ಸಿಂಗ್ ಬಾಬು, ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಚಿತ್ರರಂಗದ ಎಲ್ಲಾ ಅಂಗಸಂಸ್ಥೆಗಳು ಬೆಂಬಲ ನೀಡಿವೆ. ಸುಹಾಸಿನಿ, ಖುಷ್ಬೂ, ರೇವತಿ ಸೇರಿದಂತೆ ಸಾಕಷ್ಟು ಮಂದಿ ಪರಭಾಷಾ ತಾರೆಯರು ಸಾಥ್ ನೀಡಿದ್ದಾರೆ. ಶಿವರಾಜ್‌ಕುಮಾರ್, ರಮೇಶ್ ಅರವಿಂದ್, ದುನಿಯಾ ವಿಜಯ್, ಉಮಾಶ್ರೀ, ಶರಣ್, ಶ್ರುತಿ, ಮಾಳವಿಕಾ, ರಮೇಶ್ ಭಟ್, ಭವ್ಯ, ಅವಿನಾಶ್, ಅಭಿಜಿತ್, ಶ್ರೀನಿವಾಸ ಮೂರ್ತಿ, ಮುಖ್ಯಮಂತ್ರಿ ಚಂದ್ರು, ಸಿಹಿಕಹಿ ಚಂದ್ರು, ನಾಗತಿಹಳ್ಳಿ ಚಂದ್ರಶೇಖರ್, ಟಿ ಎಸ್ ನಾಗಾಭರಣ.. ಹೀಗೆ ಇಡೀ ಚಂದನವನ ಅದಕ್ಕೆ ಸಾಕ್ಷಿಯಾಗಿದ್ದು ವಿಶೇಷ. ಅದ್ರಲ್ಲೂ ಹಾಡು ಹಾಡೋ ಮೂಲಕ ವಿಷ್ಣುನ ಸ್ಮರಿಸಿದ್ರು ಶಿವಣ್ಣ
ಇನ್ನೂ ಮುಂಜಾನೆ 8 ಗಂಟೆಗೆ ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ನೈಸ್ ರಸ್ತೆ ಮೂಲಕ ವಿಷ್ಣು ಅಮೃತ ಮಹೋತ್ಸವ ವೇದಿಕೆ ತನಕ ಸುಮಾರು ಅರ್ಧ ಕಿಲೋ ಮೀಟರ್ ವಿಷ್ಣುವರ್ಧನ್ ಭಾವಚಿತ್ರವಿದ್ದ ಕನ್ನಡದ ಧ್ವಜದ ಮೆರವಣಿಗೆ ಕೂಡ ನಡೆಯಿತು. ಸಾವಿರಾರು ಮಂದಿ ಅಭಿಮಾನಿಗಳು ಅದರಲ್ಲಿ ಭಾಗಿಯಾಗಿದ್ದರು. ಅಲ್ಲದೆ, ಕಾರ್ಯಕ್ರಮದ ಅಂಗಳದಲ್ಲಿ ವಿಷ್ಣು ನಟನೆಯ ಸುಮಾರು 200 ಸಿನಿಮಾಗಳ ಪಯಣವನ್ನ ನೆನೆಯುವಂತಹ ಗ್ಯಾಲರಿ ಕೂಡ ನಿರ್ಮಾಣ ಆಗಿತ್ತು.
ಕೆ ಕಲ್ಯಾಣ್, ವಿಜಯ್ ಪ್ರಕಾಶ್, ರವಿಶಂಕರ್, ರಾಜೇಶ್ ಕೃಷ್ಣನ್, ಅರ್ಚನಾ ಉಡುಪರಂತಹ ಖ್ಯಾತ ಗಾಯಕರುಗಳು ಗಾನ ನಮನ ಸಲ್ಲಿಸಿದ್ದು ವಿಶೇಷ. ಇದರಲ್ಲಿ ವಿಷ್ಣು ಕುಟುಂಬಸ್ಥರು ಕೂಡ ಗೈರಾಗಿದ್ದಾರೆ. ಇವೆಲ್ಲವುಗಳ ನಡುವೆ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ಅಭಿಮಾನಿಗಳಿಗೆ ಊಟ, ತಿಂಡಿ ವ್ಯವಸ್ಥೆ ಮಾಡಿದಿರೋದು ಅವ್ಯವಸ್ಥೆ ಅನಿಸಿತು. ಅಲ್ಲದೆ.. ಒಳಗಡೆ 5 ಸಾವಿರ ಆಸನಗಳಿದ್ದು, ನಾಲ್ಕು ಸಾವಿರ ಮಂದಿಗೆ ತಲಾ ಐದು ಸಾವಿರ ರೂಪಾಯಿ ಪಾಸ್ ಹಾಗೂ 500 ಮಂದಿಗೆ ತಲಾ 25 ಸಾವಿರ ರೂಪಾಯಿ ಪಾಸ್ ನೀಡಿ, ಇದ್ರಿಂದ ದುಡ್ಡು ಮಾಡುವ ಕಾರ್ಯ ಮಾಡಿದ್ದಾರೆ ಆಯೋಜಕರು ಅನ್ನೋ ಮಾತುಗಳು ಕೂಡ ಕೇಳಿಬಂದಿವೆ. ವಿಷ್ಣುವರ್ಧನ್ ಹೆಸರಲ್ಲಿ ದುಡ್ಡು ಮಾಡುವ ದರ್ದು ಅವರಿಗೇನಿದೆ..? ಅಥವಾ ಕರ್ನಾಟಕ ರತ್ನನನ್ನ ಮಾರಾಟಕ್ಕೆ ಇಟ್ರಾ ಇವರುಗಳು ಅನ್ನೋ ಪ್ರಶ್ನೆ ಭುಗಿಲೆದ್ದಿದೆ. ಇದಕ್ಕೆಲ್ಲಾ ಆಯೋಕರೇ ಉತ್ತರಿಸಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





