ಬೆಂಗಳೂರು: ಕನ್ನಡ ಚಿತ್ರರಂಗ ಹಾಗೂ ಸಂಗೀತ ಕ್ಷೇತ್ರದಲ್ಲಿ ‘ಕನ್ನಡದ ಶಿವಮಣಿ’ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ಡ್ರಮ್ಮರ್ ಹಾಗೂ ಸಂಗೀತ ನಿರ್ದೇಶಕ ದೇವ್ ಅವರು ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಶನಿವಾರ ರಾತ್ರಿ ಸುಮಾರು 10 ಗಂಟೆ ವೇಳೆಗೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿದ್ದು, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದ ದೇವ್ ಅವರಿಗೆ ಇತ್ತೀಚೆಗೆ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಕಳೆದ ಜೂನ್‌ನಲ್ಲಿ ಅವರಿಗೆ ಸ್ಟ್ರೋಕ್ ಆಗಿತ್ತು ಎನ್ನಲಾಗಿದೆ. ಇದರ ಬೆನ್ನಲ್ಲೇ ಗ್ಯಾಂಗ್ರೀನ್ ಸಮಸ್ಯೆಯೂ ಉಲ್ಬಣಗೊಂಡಿದ್ದು, ವೈದ್ಯರ ಸಲಹೆಯಂತೆ ಶಸ್ತ್ರಚಿಕಿತ್ಸೆ ನಡೆಸಿ ಅವರ ಬಲಗಾಲನ್ನು ತೆಗೆಯಲಾಗಿತ್ತು. ನಂತರ ಸ್ಟ್ರೋಕ್ ಹಾಗೂ ಶಸ್ತ್ರಚಿಕಿತ್ಸೆಯ ಪರಿಣಾಮವಾಗಿ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು.
ಕಳೆದ ಎರಡು ತಿಂಗಳಿನಿಂದ ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ನಿರಂತರ ಚಿಕಿತ್ಸೆ ನೀಡಿದರೂ ಆರೋಗ್ಯದಲ್ಲಿ ಚೇತರಿಕೆ ಕಂಡುಬರದೆ ಶನಿವಾರ ರಾತ್ರಿ ನಿಧನರಾಗಿದ್ದಾರೆ.
ದೇವ್ ಅವರು ಆರಂಭದ ದಿನಗಳಲ್ಲಿ ವಾದ್ಯಮಂಡಳಿಗಳಲ್ಲಿ ಡ್ರಮ್ಸ್ ಒರೆಸುವ ಹಾಗೂ ವಾದ್ಯಗಳನ್ನು ಎತ್ತಿಡುವ ಕೆಲಸ ಮಾಡುತ್ತಿದ್ದ ಅವರು, ಸಂಗೀತದ ಮೇಲಿನ ಅಪಾರ ಆಸಕ್ತಿ ಮತ್ತು ಪರಿಶ್ರಮದಿಂದ ಹಂತ ಹಂತವಾಗಿ ತಮ್ಮದೇ ಆದ ಛಾಪು ಮೂಡಿಸಿದರು.
ನಂತರ ಕನ್ನಡ ಚಿತ್ರರಂಗದ ಪ್ರಮುಖ ಡ್ರಮ್ಮರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ತಮ್ಮ ವಿಶಿಷ್ಟವಾದ ಡ್ರಮ್ಮಿಂಗ್ ಶೈಲಿ ಹಾಗೂ ಲೈವ್ ಪರ್ಫಾರ್ಮೆನ್ಸ್‌ಗಳಿಂದ ಅವರು ‘ಕನ್ನಡದ ಶಿವಮಣಿ’ ಎಂಬ ಬಿರುದನ್ನು ಪಡೆದಿದ್ದರು.
ಭಾರತೀಯ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರ ತಂಡದಲ್ಲಿಯೂ ದೇವ್ ಡ್ರಮ್ಸ್ ನುಡಿಸಿದ್ದರು. ಕನ್ನಡದ ಪ್ರಮುಖ ಸಂಗೀತ ನಿರ್ದೇಶಕರಾದ ಹಂಸಲೇಖ, ಸಾಧುಕೋಕಿಲ, ಗುರುಕಿರಣ್ ಸೇರಿದಂತೆ ಹಲವು ಸಂಗೀತ ನಿರ್ದೇಶಕರೊಂದಿಗೆ ಅವರು ಕೆಲಸ ಮಾಡಿದ್ದರು. ಹಲವು ಸಿನಿಮಾಗಳು ಮತ್ತು ಸಂಗೀತ ಕಾರ್ಯಕ್ರಮಗಳಲ್ಲಿ ತಮ್ಮ ವಾದ್ಯಪ್ರತಿಭೆಯ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.
ಸಂಗೀತ ನಿರ್ದೇಶಕರಾಗಿಯೂ ಗುರುತು
ದೇವ್ ಅವರು ಕೇವಲ ಡ್ರಮ್ಮರ್ ಆಗಿ ಮಾತ್ರ ಸೀಮಿತರಾಗಿರಲಿಲ್ಲ. ಸಂಗೀತ ನಿರ್ದೇಶಕರಾಗಿಯೂ ತಮ್ಮ ಪ್ರತಿಭೆಯನ್ನು ಪರಿಚಯಿಸಿದ್ದರು. ‘5 ಈಡಿಯಟ್ಸ್’ ಹಾಗೂ ‘ಪ್ರೀತಿ ನೀ ಹಿಂಗ್ಯಾಕೆ’ ಸೇರಿದಂತೆ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ಹಲವು ಲೈವ್ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಸಂಗೀತ ಪ್ರಿಯರಿಂದ ಮೆಚ್ಚುಗೆ ಪಡೆದಿದ್ದರು.
RCB ಪಂದ್ಯಗಳಲ್ಲೂ ವಿಶಿಷ್ಟ ಗುರುತು
ದೇವ್ ಅವರ ಜನಪ್ರಿಯತೆ ಸಿನಿಮಾ ಹಾಗೂ ಸಂಗೀತ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯಗಳ ಸಂದರ್ಭದಲ್ಲಿ ಆರ್‌ಸಿಬಿ ತಂಡವನ್ನು ಬೆಂಬಲಿಸುತ್ತಾ ತಮ್ಮ ವಿಶಿಷ್ಟ ಲೈವ್ ಬೀಟ್ಸ್ ಮೂಲಕ ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸುತ್ತಿದ್ದರು.
ದೇವ್ ಅವರ ನಿಧನದಿಂದ ಕನ್ನಡ ಚಿತ್ರರಂಗ, ಸಂಗೀತ ಕ್ಷೇತ್ರ ಹಾಗೂ ಅವರನ್ನು ಪ್ರೀತಿಸುತ್ತಿದ್ದ ಅಭಿಮಾನಿಗಳು ಒಬ್ಬ ಪ್ರತಿಭಾವಂತ ಕಲಾವಿದನನ್ನು ಕಳೆದುಕೊಂಡಂತಾಗಿದೆ. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಸಂಗೀತ ಕ್ಷೇತ್ರದ ಕಲಾವಿದರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.





