ನವದೆಹಲಿ: ದಸರಾ ಮತ್ತು ದೀಪಾವಳಿ ಹಬ್ಬದ ಶಾಪಿಂಗ್ಗೆ ಸಿದ್ಧವಾಗುತ್ತಿರುವ ಗ್ರಾಹಕರಿಗೆ ಇದೀಗ ಬೆಲೆ ಏರಿಕೆಯ ಶಾಕ್ ಎದುರಾಗುವ ಸಾಧ್ಯತೆಯಿದೆ. ಪ್ರಮುಖ ಗೃಹೋಪಯೋಗಿ ಉಪಕರಣಗಳು ಹಾಗೂ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆ ಅಕ್ಟೋಬರ್ 1ರಿಂದ ಹೆಚ್ಚಳವಾಗುವ ಸಾಧ್ಯತೆ ಇದ್ದು, ಟಿವಿ, ಏರ್ ಕಂಡೀಷನರ್, ವಾಷಿಂಗ್ ಮೆಷಿನ್, ರೆಫ್ರಿಜರೇಟರ್ ಸೇರಿದಂತೆ ಹಲವು ಉತ್ಪನ್ನಗಳ ಖರೀದಿ ಮತ್ತಷ್ಟು ದುಬಾರಿಯಾಗಲಿದೆ.
ಪ್ರಸಕ್ತ ವರ್ಷದಲ್ಲಿ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ನಡೆಯುತ್ತಿರುವ ಮೂರನೇ ಸುತ್ತಿನ ಬೆಲೆ ಏರಿಕೆ ಇದಾಗಿದೆ ಎಂದು ವರದಿಯಾಗಿದೆ. ತಯಾರಿಕಾ ಕಂಪನಿಗಳು ಉತ್ಪಾದನಾ ವೆಚ್ಚದಲ್ಲಿನ ಹೆಚ್ಚಳವನ್ನು ಸರಿದೂಗಿಸಲು ಉತ್ಪನ್ನಗಳ ದರವನ್ನು ಹೆಚ್ಚಿಸಲು ಮುಂದಾಗಿವೆ. ಕೆಲವು ಕಂಪನಿಗಳು ಈಗಾಗಲೇ ಬೆಲೆ ಪರಿಷ್ಕರಣೆಯ ಸುಳಿವು ನೀಡಿದ್ದು, ಅಕ್ಟೋಬರ್ನಿಂದ ಗ್ರಾಹಕರಿಗೆ ಇದರ ನೇರ ಪರಿಣಾಮ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಶೇ.5ರಿಂದ 8ರವರೆಗೆ ದರ ಹೆಚ್ಚಳ?
ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ಬೆಲೆ ಒಟ್ಟಾರೆ ಶೇ.5ರಿಂದ 8ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಉತ್ಪನ್ನ ಮತ್ತು ಕಂಪನಿಯನ್ನು ಆಧರಿಸಿ ಬೆಲೆ ಏರಿಕೆಯ ಪ್ರಮಾಣದಲ್ಲಿ ವ್ಯತ್ಯಾಸವಾಗಬಹುದು. ವಿಶೇಷವಾಗಿ ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್ ಮತ್ತು ಎಸಿ ಸೇರಿದಂತೆ ಹೆಚ್ಚು ಬೇಡಿಕೆಯಿರುವ ಉತ್ಪನ್ನಗಳ ಮೇಲೆ ಇದರ ಪರಿಣಾಮ ಬೀರುವ ಸಾಧ್ಯತೆಯಿದೆ.
ಕಚ್ಚಾ ವಸ್ತುಗಳ ಬೆಲೆ ಏರಿಕೆ ಕಾರಣ
ಬೆಲೆ ಏರಿಕೆಗೆ ಪ್ರಮುಖ ಕಾರಣ ಉತ್ಪಾದನೆಯಲ್ಲಿ ಬಳಸುವ ಕಚ್ಚಾ ವಸ್ತುಗಳ ಬೆಲೆ ಹೆಚ್ಚಳ ಎನ್ನಲಾಗಿದೆ. ತಾಮ್ರ, ಅಲ್ಯೂಮಿನಿಯಂ, ಉಕ್ಕು ಹಾಗೂ ಕಚ್ಚಾ ತೈಲದ ಉಪಉತ್ಪನ್ನಗಳ ದರ ನಿರಂತರವಾಗಿ ಏರಿಕೆಯಾಗುತ್ತಿರುವುದು ಕಂಪನಿಗಳ ಉತ್ಪಾದನಾ ವೆಚ್ಚವನ್ನು ಹೆಚ್ಚಿಸಿದೆ.
ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ಪರಿಣಾಮ ಕರೆನ್ಸಿ ವಿನಿಮಯ ದರಗಳಲ್ಲಿ ಏರಿಳಿತ ಉಂಟಾಗಿದ್ದು, ಆಮದು ಮಾಡಿಕೊಳ್ಳುವ ಕಚ್ಚಾ ವಸ್ತುಗಳು ಮತ್ತು ಬಿಡಿಭಾಗಗಳ ವೆಚ್ಚದ ಮೇಲೂ ಪರಿಣಾಮ ಬೀರಿದೆ ಎಂದು ವರದಿಯಾಗಿದೆ.
ಹಬ್ಬದ ಸೀಸನ್ ಮೇಲೆ ಪರಿಣಾಮದ ಆತಂಕ
ಓಣಂನಿಂದ ಆರಂಭವಾಗಿ ದಸರಾ ಮತ್ತು ದೀಪಾವಳಿವರೆಗೆ ನಡೆಯುವ ಹಬ್ಬದ ಅವಧಿ ಗೃಹೋಪಯೋಗಿ ಉಪಕರಣಗಳ ತಯಾರಕರಿಗೆ ಅತ್ಯಂತ ಪ್ರಮುಖ ಮಾರಾಟದ ಸಮಯವಾಗಿದೆ. ಕಂಪನಿಗಳ ವಾರ್ಷಿಕ ಮಾರಾಟದಲ್ಲಿ ಈ ಅವಧಿಯ ಪಾಲು ಸುಮಾರು ಶೇ.30ರಿಂದ 40ರಷ್ಟಿರುತ್ತದೆ ಎನ್ನಲಾಗಿದೆ.
ಹೀಗಾಗಿ ಹಬ್ಬದ ಸಂದರ್ಭದಲ್ಲಿ ಬೆಲೆ ಏರಿಕೆಯಾದರೆ ಗ್ರಾಹಕರ ಖರೀದಿ ನಿರ್ಧಾರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಆದಾಗ್ಯೂ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲೇ ಹಲವು ಡೀಲರ್ಗಳು ಹಾಗೂ ವಿತರಕರು ಹಳೆಯ ದರದಲ್ಲಿ ಸಾಕಷ್ಟು ಪ್ರಮಾಣದ ದಾಸ್ತಾನು ಮಾಡಿಕೊಂಡಿರುವುದರಿಂದ ಆರಂಭಿಕ ಹಂತದಲ್ಲಿ ಬೆಲೆ ಏರಿಕೆಯ ಸಂಪೂರ್ಣ ಪರಿಣಾಮ ಗ್ರಾಹಕರಿಗೆ ತಕ್ಷಣ ಕಾಣಿಸಿಕೊಳ್ಳದಿರಬಹುದು ಎಂದು ಅಂದಾಜಿಸಲಾಗಿದೆ.
ಫ್ರಿಡ್ಜ್, ವಾಷಿಂಗ್ ಮೆಷಿನ್, ಟಿವಿ ದರ ಎಷ್ಟು ಹೆಚ್ಚಾಗಬಹುದು?
ವಾಷಿಂಗ್ ಮೆಷಿನ್, ರೆಫ್ರಿಜರೇಟರ್ ಮತ್ತು ಎಲ್ಇಡಿ ಟಿವಿಗಳ ಬೆಲೆ ಶೇ.3ರಿಂದ 4ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಬ್ಲೂ ಸ್ಟಾರ್, ಗೋದ್ರೇಜ್ ಅಪ್ಲೈಯನ್ಸಸ್, ಹೈಯರ್, ಡೈಕಿನ್ ಮತ್ತು ಸೂಪರ್ ಪ್ಲಾಸ್ಟ್ರಾನಿಕ್ಸ್ ಸೇರಿದಂತೆ ಕೆಲವು ಕಂಪನಿಗಳು ಈಗಾಗಲೇ ದರ ಹೆಚ್ಚಳದ ಸೂಚನೆ ನೀಡಿವೆ. ಕೆಲವು ಉತ್ಪನ್ನಗಳಲ್ಲಿ ಶೇ.4ರಿಂದ 10ರವರೆಗೆ ಹೆಚ್ಚಳವಾಗುವ ಸಾಧ್ಯತೆಯೂ ಇದೆ.
ಇನ್ನು ಟಿವಿ ವಿಭಾಗದಲ್ಲಿ ಬೆಲೆ ಏರಿಕೆಯ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ವಿಡಿಯೋಟೆಕ್ಸ್ ಪ್ರಕಾರ, ಸಣ್ಣ ಪರದೆಯ ಟಿವಿಗಳ ಬೆಲೆ ಶೇ.20ರವರೆಗೆ ಹಾಗೂ ದೊಡ್ಡ ಪರದೆಯ ಟಿವಿಗಳ ಬೆಲೆ ಶೇ.10ರವರೆಗೆ ಹೆಚ್ಚಾಗಬಹುದು. ಸೂಪರ್ ಪ್ಲಾಸ್ಟ್ರಾನಿಕ್ಸ್ ಕೂಡ ಅಕ್ಟೋಬರ್ ನಂತರ ಟಿವಿ ಬೆಲೆಯನ್ನು ಸುಮಾರು ಶೇ.7ರಷ್ಟು ಹೆಚ್ಚಿಸಲು ಯೋಜಿಸಿದೆ ಎಂದು ವರದಿಯಾಗಿದೆ.





