ಬೆಂಗಳೂರು: ಸಾಲು ಸಾಲು ಹಬ್ಬಗಳು ಬರುತ್ತಿರುವ ಹೊತ್ತಿನಲ್ಲೇ ಸಾರ್ವಜನಿಕರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಅಡುಗೆ ಎಣ್ಣೆ (Cooking Oil) ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಿ ಕೇಂದ್ರ ಸರ್ಕಾರ (Central Govt) ಆದೇಶ ಹೊರಡಿಸಿದೆ. ಹಬ್ಬದ ಸೀಸನ್ (Festival Season) ಹೊತ್ತಲ್ಲೇ ಕೇಂದ್ರ ಸರ್ಕಾರ, ತಾಳೆ ಎಣ್ಣೆ, ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆ ಸೇರಿದಂತೆ ಪ್ರಮುಖ ಅಡುಗೆ ಎಣ್ಣೆಗಳ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಿದೆ. ಇದರ ಬೆನ್ನಲ್ಲೇ ಅಡುಗೆ ಎಣ್ಣೆಗಳ ಬೆಲೆ ಕಡಿಮೆಯಾಗುವ ಸಾಧ್ಯತೆಯಿದೆ.
ಏನೆಲ್ಲ ಸುಂಕ ಕಡಿತ?
ಪಾಮ್ ಎಣ್ಣೆ ಮತ್ತು ಸೋಯಾ ಎಣ್ಣೆಯ ಮೇಲಿನ ಆಮದು ಸುಂಕವನ್ನು ಶೇ.10ರಿಂದ ಶೇ.5ಕ್ಕೆ ಇಳಿಸಲಾಗಿದೆ. ಸೂರ್ಯಕಾಂತಿ ಎಣ್ಣೆಯ ಮೇಲಿನ ಆಮದು ಸುಂಕವನ್ನು ಶೇ.10ರಿಂದ ಶೂನ್ಯಕ್ಕೆ ಇಳಿಸಲಾಗಿದೆ. ರಿಫೈನ್ಡ್ ಸೂರ್ಯಕಾಂತಿ ಎಣ್ಣೆ ಮೇಲಿನ ಶುಲ್ಕವನ್ನು ಶೇ.32.5ರಿಂದ ಶೇ.22.5ಕ್ಕೆ ಕಡಿತಗೊಳಿಸಲಾಗಿದೆ. ರಿಫೈನ್ಡ್ ಪಾಮ್ ಮತ್ತು ಸೋಯಾ ಎಣ್ಣೆ ಮೇಲಿನ ಶುಲ್ಕವನ್ನು ಶೇ.32.5ರಿಂದ ಶೇ.27.5ಕ್ಕೆ ಇಳಿಸಲಾಗಿದೆ. ಪಾಮ್ ಮತ್ತು ಸೋಯಾ ಎಣ್ಣೆಯ ಒಟ್ಟಾರೆ ಆಮದು ಶುಲ್ಕ ಶೇ.11ಕ್ಕೆ ಇಳಿಕೆಯಾಗಿದೆ. ಕಚ್ಚಾ ಸೂರ್ಯಕಾಂತಿ ಎಣ್ಣೆ ಆಮದು ಶುಲ್ಕ ಶೇ.16.5ರಿಂದ ಶೇ.5.5ಕ್ಕೆ ಇಳಿಕೆಯಾಗಿದೆ.
ಬೆಲೆ ಏರಿಕೆಯ ಹಿನ್ನೆಲೆ
ಕಳೆದ ಒಂದು ವರ್ಷದಲ್ಲಿ ಕೆಲ ಅಡುಗೆ ಎಣ್ಣೆಗಳ ಬೆಲೆ ಶೇ.20ರಷ್ಟು ಏರಿಕೆಯಾಗಿತ್ತು. ಸದ್ಯ ಆಮದು ಸುಂಕ ಕಡಿತಗೊಳಿಸಿರುವುದರಿಂದ ಹಬ್ಬದ ಸೀಸನ್‌ನಲ್ಲಿ ಅಡುಗೆ ಎಣ್ಣೆಯ ಬೆಲೆಯಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ. ಈ ನಿರ್ಧಾರವು ಸಾಮಾನ್ಯ ಜನರಿಗೆ, ಮಧ್ಯಮ ವರ್ಗದ ಕುಟುಂಬಗಳಿಗೆ ಮತ್ತು ಹೋಟೆಲ್ ಉದ್ಯಮಕ್ಕೆ ದೊಡ್ಡ ಪರಿಹಾರವಾಗಿದೆ.
ಭಾರತಕ್ಕೆ ಬೇಕಾಗುವ ಒಟ್ಟು ಅಡುಗೆ ಎಣ್ಣೆಯಲ್ಲಿ ಸುಮಾರು ಮೂರನೇ ಎರಡರಷ್ಟು ಭಾಗ ಆಮದು ಮೂಲಕವೇ ಬರುತ್ತದೆ. ಮಲೇಷ್ಯಾ, ಇಂಡೋನೇಷಿಯಾ, ಅರ್ಜೆಂಟಿನಾ, ರಷ್ಯಾ ಮತ್ತು ಉಕ್ರೇನ್ ದೇಶಗಳಿಂದ ಪಾಮ್ ಎಣ್ಣೆ, ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಸುಂಕ ಕಡಿತದಿಂದ ಸೂರ್ಯಕಾಂತಿ ಎಣ್ಣೆಗೆ ಹೆಚ್ಚಿನ ಲಾಭವಾಗಲಿದೆ. ಇದು ಎಣ್ಣೆ ತಯಾರಕರಿಗೆ ಹೆಚ್ಚು ಆಕರ್ಷಕವಾಗಲಿದೆ. ಜೊತೆಗೆ ಸೋಯಾ ಎಣ್ಣೆ ಹಾಗೂ ಪಾಮ್ ಎಣ್ಣೆಯ ಬದಲು ಜನರು ಸೂರ್ಯಕಾಂತಿ ಎಣ್ಣೆಯನ್ನು ಹೆಚ್ಚು ಬಳಸುವಂತೆ ಮಾಡಬಹುದಾಗಿದೆ.
ಗ್ರಾಹಕರಿಗೆ ಲಾಭ
ಆಮದು ಸುಂಕ ಕಡಿತದ ನೇರ ಲಾಭ ಗ್ರಾಹಕರಿಗೆ ಸಿಗಲಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೆಲೆ ಕಡಿಮೆಯಾಗುವುದರಿಂದ ಹಬ್ಬದ ಅಡುಗೆ ಮತ್ತು ಸಿಹಿತಿಂಡಿ ತಯಾರಿಕೆಗೆ ಜನರಿಗೆ ಅನುಕೂಲವಾಗಲಿದೆ. ಹೋಟೆಲ್, ರೆಸ್ಟೋರೆಂಟ್ ಮತ್ತು ಸಿಹಿತಿಂಡಿ ತಯಾರಕರಿಗೂ ಇದು ಲಾಭದಾಯಕವಾಗಲಿದೆ.
ಕೇಂದ್ರ ಸರ್ಕಾರದ ಉದ್ದೇಶ
ಹಬ್ಬದ ಸೀಸನ್‌ನಲ್ಲಿ ಬೆಲೆ ಏರಿಕೆಯನ್ನು ನಿಯಂತ್ರಿಸುವುದು ಮತ್ತು ಸಾಮಾನ್ಯ ಜನರಿಗೆ ಪರಿಹಾರ ನೀಡುವುದು ಕೇಂದ್ರ ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಆಮದು ಸುಂಕ ಕಡಿತದಿಂದ ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಾಗಿ, ಬೆಲೆ ಸ್ಥಿರವಾಗಿರಲಿದೆ. ಜೊತೆಗೆ ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.




