ನಾವು ಯಾವುದೇ ಸಿನಿಮಾ ನೋಡಲು PVR ಸೇರಿದಂತೆ ಯಾವುದೇ ಮಾಲ್‌ಗಳಿಗೆ ಹೋದರೆ ಸಿನಿಮಾ ಶುರುವಾಗುವುದಕ್ಕೆ ಮುನ್ನ ಮತ್ತು ಇಂಟರ್‌ವೆಲ್‌ನಲ್ಲಿ ಜಾಹೀರಾತುಗಳ ಸುರಿಮಳೆಯೇ ಇರುತ್ತದೆ. ಒಮ್ಮೊಮ್ಮೆ ಅರ್ಧ ಗಂಟೆಯಷ್ಟು ಕಾಲ ಜಾಹೀರಾತುಗಳ ಪ್ರದರ್ಶನ ಇರುತ್ತದೆ. ಆದರೆ, ಸಿನಿಮಾ ನೋಡುವುದಕ್ಕೆ ಬರುವ ಪ್ರೇಕ್ಷಕ ಹಣವನ್ನು ಸಿನಿಮಾಗೆ ಕೊಟ್ಟಿರುತ್ತಾನೆಯೇ ಹೊರತು, ಜಾಹೀರಾತು ವೀಕ್ಷಣೆಗೆ ಅಲ್ಲ. ಇದನ್ನು ಪ್ರೇಕ್ಷಕರ ಮೇಲೆ PVR ಸೇರಿದಂತೆ ಇತರೆ ಮಾಲ್‌ಗಳು ಹೇರುತ್ತವೆ ಎನ್ನುವ ವಾದ ಇಂದು ನಿನ್ನೆಯದಲ್ಲ. ಆದರೆ ಇದನ್ನು ಪ್ರಶ್ನಿಸಿ ಕೋರ್ಟಿಗೆ ಹೋಗಿದ್ದವರೊಬ್ಬರು ನ್ಯಾಯಾಲಯದಲ್ಲಿ ಗೆದ್ದಿದ್ದಾರೆ. ಅಷ್ಟೇ ಅಲ್ಲ, ಕಾನೂನು ಸಮರ ಹೂಡಿದ್ದ ಪ್ರೇಕ್ಷಕನಿಗೆ 28 ಸಾವಿರ ರೂ. ಪರಿಹಾರ ಹಾಗೂ PVR INOXಗೆ ಒಂದು ಲಕ್ಷ ರೂ. ದಂಡ ವಿಧಿಸಲಾಗಿದೆ.
ಏನಿದು PVR INOX ಜಾಹೀರಾತು ದಂಡ ಪ್ರಕರಣ..?
2023ರಲ್ಲಿ ಸ್ಯಾಂ ಬಹದ್ದೂರ್ ಎಂಬ ಸಿನಿಮಾ ರಿಲೀಸ್ ಆಗಿತ್ತು. ಜನರಲ್ ಮಣೇಕ್ ಶಾ ಜೀವನಾಧಾರಿತ ಚಿತ್ರದಲ್ಲಿ ವಿಕ್ಕಿ ಕೌಶಲ್ ನಾಯಕನಾಗಿ ನಟಿಸಿದ್ದರು. ಸಿನಿಮಾ ನೋಡಲು PVR INOXಗೆ ಹೋಗಿದ್ದ ಅಭಿಷೇಕ್ ಎಂಬುವವರು 25-30 ನಿಮಿಷಗಳ ನಿರಂತರ ಜಾಹೀರಾತುಗಳಿಂದ ರೋಸಿ ಹೋಗಿದ್ದರು. ಆದರೆ ಸಿನಿಮಾ ನೋಡಿ ಬಂದ ಅಭಿಷೇಕ್ ಅಷ್ಟಕ್ಕೇ ಸುಮ್ಮನಾಗಲಿಲ್ಲ. ತಮ್ಮ ಶೆಡ್ಯೂಲ್ ಏರುಪೇರಾಯಿತು, ಪರಿಹಾರ ನೀಡಿ ಎಂದು ಗ್ರಾಹಕರ ಕೋರ್ಟ್ ಮೊರೆ ಹೋದರು. PVR INOX ಮತ್ತು ಬುಕ್ ಮೈ ಶೋಗಳ ವಿರುದ್ಧ ಪರಿಹಾರ ಕೋರಿ ದೂರು ದಾಖಲಿಸಿದರು. ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯ ಬುಕ್ ಮೈ ಶೋಗೂ ಇದಕ್ಕೂ ಸಂಬಂಧ ಇಲ್ಲ ಎಂದು ಹೇಳಿದೆ. ಆದರೆ PVR INOX ನವರಿಗೆ ಒಂದು ಲಕ್ಷ ರೂ. ದಂಡ ಹಾಗೂ ಅರ್ಜಿದಾರ ಅಭಿಷೇಕ್ ಅವರಿಗೆ 28 ಸಾವಿರ ರೂ. ಪರಿಹಾರ ನೀಡುವಂತೆ ಆದೇಶ ನೀಡಿದೆ. 20 ಸಾವಿರ ರೂ. ಗ್ರಾಹಕರಿಗೆ ಪರಿಹಾರ ಹಾಗೂ 8 ಸಾವಿರ ರೂ. ನ್ಯಾಯಾಲಯದ ವೆಚ್ಚವನ್ನು PVR INOX ಭರಿಸಬೇಕು ಎಂದು ಸೂಚಿಸಿದೆ.
PVR INOX ಜಾಹೀರಾತು. ಕೋರ್ಟ್ ಹೇಳಿದ್ದೇನು..?
ಈಗಿನ ಕಾಲದಲ್ಲಿ ಸಮಯಕ್ಕೆ ಹಣಕ್ಕಿಂತಲೂ ಹೆಚ್ಚು ಮೌಲ್ಯವಿದೆ. ಪ್ರತಿಯೊಬ್ಬರ ಸಮಯವೂ ಅತ್ಯಮೂಲ್ಯ. ಇನ್ನೊಬ್ಬರ ಸಮಯವನ್ನು ಹಾಳು ಮಾಡುವ ಅಧಿಕಾರ ಯಾರಿಗೂ ಇಲ್ಲ. 25-30 ನಿಮಿಷಗಳ ಕಾಲ ಏನನ್ನೂ ಮಾಡದೆ ಚಿತ್ರಮಂದಿರಗಳಲ್ಲಿ ಕೂರುವುದು, ಥಿಯೇಟರಿನವರು ಅವರಿಗೆ ಬೇಕಾದ್ದನ್ನು ತೋರಿಸುವಾಗ ಅದನ್ನು ಇಷ್ಟವಿಲ್ಲದಿದ್ದರೂ ನೋಡುವುದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ಲಾಭಕ್ಕಾಗಿ ಬೇರೆ ವ್ಯವಸ್ಥೆ ಮಾಡಿಕೊಳ್ಳಲಿ. ಮಲ್ಟಿಪ್ಲೆಕ್ಸುಗಳು ಟಿಕೆಟ್ ಕೊಡುವಾಗ ಸಿನಿಮಾ ಅವಧಿ ಎಷ್ಟಿರುತ್ತದೆಯೋ, ಎಷ್ಟು ಅವಧಿ ಎಂದು ಮುದ್ರಿಸಿರುತ್ತಾರೋ ಅಷ್ಟನ್ನೇ ತೋರಿಸಬೇಕು.
ಕೋರ್ಟ್ ವಾದ ಪ್ರತಿವಾದ ಏನಿತ್ತು..?
PVR INOXನವರು ಇದು ಜಾಗೃತಿ ಮೂಡಿಸುವ ಜಾಹೀರಾತುಗಳು ಎಂದು ವಾದಿಸಿತ್ತು. ಇದಕ್ಕೆ ಸರ್ಕಾರ ಉತ್ತರ ನೀಡಿದ್ದು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಸಾರ್ವಜನಿಕ ಜಾಗೃತಿ ಜಾಹೀರಾತುಗಳು 10 ನಿಮಿಷ ಮಾತ್ರ ಇದೆ ಎಂದು ಹೇಳಿತ್ತು. ಅಲ್ಲದೆ ಸಿನಿಮಾ ಶುರುವಾಗುತ್ತದೆ ಎಂದು ಟಿಕೆಟ್‌ನಲ್ಲಿ ಮುದ್ರಿಸಿರುವ ಸಮಯಕ್ಕೆ 10 ನಿಮಿಷ ಮುನ್ನ ತೋರಿಸಬೇಕು. ಸಿನಿಮಾ ಅವಧಿಗೂ, ಇದಕ್ಕೂ ಸಂಬಂಧ ಇಲ್ಲ ಎಂದು ಹೇಳಿತ್ತು. ಆದರೆ ಪ್ರಸಾರವಾಗುವ ಶೇ.95ರಷ್ಟು ಜಾಹೀರಾತುಗಳು ಜಾಗೃತಿ ಮೂಡಿಸುವ ಜಾಹೀರಾತುಗಳಲ್ಲ. ಕಮರ್ಷಿಯಲ್ ಜಾಹೀರಾತುಗಳು ಎನ್ನುವುದು ವಿಚಾರಣೆಯಲ್ಲಿ ಗೊತ್ತಾಗಿದೆ.
ಇನ್ನು PVR INOX ದೂರುದಾರ ಅಭಿಷೇಕ್ ಪೈರಸಿ ಲಾ ಉಲ್ಲಂಘನೆ ಮಾಡಿದ್ದು, ಚಿತ್ರಮಂದಿರದಲ್ಲಿ ಚಿತ್ರೀಕರಣ ಮಾಡಿರುವುದು ಅಪರಾಧ ಎಂದೂ ಹೇಳಿತ್ತು. ಇದಕ್ಕೆ ಕೋರ್ಟ್ ಸ್ಪಷ್ಟನೆ ನೀಡಿ ದೂರುದಾರ ಅಭಿಷೇಕ್ ಚಿತ್ರಮಂದಿರದಲ್ಲಿ ಪ್ರಸಾರವಾದ ಜಾಹೀರಾತುಗಳನ್ನಷ್ಟೇ ಚಿತ್ರೀಕರಣ ಮಾಡಿದ್ದು, ಸಿನಿಮಾ ಚಿತ್ರೀಕರಣ ಮಾಡಿಲ್ಲ. ಹೀಗಾಗಿ ಇದರಲ್ಲಿ ಪೈರಸಿ ಆಕ್ಟ್ ಉಲ್ಲಂಘನೆ ಆಗಿಲ್ಲ ಎಂದು ಹೇಳಿ PVR INOX ವಾದವನ್ನು ತಳ್ಳಿಹಾಕಿತು.
ಇನ್ನು PVR INOX ಪರ ವಕೀಲರು ಲೇಟ್ ಆಗಿ ಬರುವ ಪ್ರೇಕ್ಷಕರಿಗೆ ಅನುಕೂಲವಾಗಲಿ ಎಂದು ಜಾಹೀರಾತು ಪ್ರದರ್ಶನ ಮಾಡುತ್ತೇವೆ ಎಂಬ ವಾದವನ್ನೂ ತಳ್ಳಿ ಹಾಕಿದ ನ್ಯಾಯಾಲಯ, ಟಿಕೆಟ್‌ನಲ್ಲಿ ಮುದ್ರಿಸಲ್ಪಟ್ಟ ಸರಿಯಾದ ಸಮಯಕ್ಕೆ ಸಿನಿಮಾ ಶುರು ಮಾಡಬೇಕು. PVR INOX ವಾದ ಒಪ್ಪುವಂತಿಲ್ಲ ಎಂದು ಹೇಳಿ PVR INOX ವಾದವನನ್ನು ತಳ್ಳಿ ಹಾಕಿತು.
ಅಂತಿಮ ಫಲಿತಾಂಶ ಏನು..?
ಈ ಪ್ರಕರಣದಲ್ಲಿ ತೀರ್ಪು ನೀಡಿರುವ ಗ್ರಾಹಕರ ನ್ಯಾಯಾಲಯ, ಪ್ರೇಕ್ಷಕರ ಹಣ ಮತ್ತು ಸಮಯದ ಮೌಲ್ಯವನ್ನು ಎತ್ತಿ ಹಿಡಿದಿದೆ. ಇನ್ನು ಮುಂದೆ PVR INOX ಸೇರಿದಂತೆ ಯಾವುದೇ ಮಲ್ಟಿಪ್ಲೆಕ್ಸ್ ಸಿನಿಮಾ ಸ್ಕ್ರೀನ್‌ಗಳಲ್ಲಿ ಕಮರ್ಷಿಯಲ್ ಜಾಹೀರಾತುಗಳ ಪ್ರಸಾರಕ್ಕೆ ಬ್ರೇಕ್ ಹಾಕುವಂತೆ ಸೂಚಿಸಿದೆ. ಗ್ರಾಹಕರ ನ್ಯಾಯಾಲಯದ ಪ್ರಕಾರ ಸರ್ಕಾರದ ಜಾಗೃತಿ ಮೂಡಿಸುವ ಜಾಹೀರಾತುಗಳಿಗೆ ಯಾವುದೇ ನಿರ್ಬಂಧ ಹೇರಿಲ್ಲ. ಆದರೆ ಅಲ್ಲಿಯೂ ಕೂಡಾ ಸಿನಿಮಾ ಶುರುವಾಗುವ 10 ನಿಮಿಷ ಅಷ್ಟೇ ಜಾಹೀರಾತು ಪ್ರಸಾರ ಮಾಡಬಹುದು.