ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಗಾಲಿ ಜನಾರ್ದನ ರೆಡ್ಡಿ ಇತ್ತೀಚೆಗೆ ಮತ್ತೊಮ್ಮೆ ಜೈಲು ಸೇರಿದ್ದು ಗೊತ್ತೇಯಿದೆ. ಸೀನಿಯರ್ ಜೈಲಲ್ಲಿದ್ರೆ, ಜೂನಿಯರ್ ಜನಾರ್ದನ್ ರೆಡ್ಡಿ ಕಿರೀಟಿ ಮಾತ್ರ ತನ್ನ ಸಿನಿಮಾ ಪ್ರಮೋಷನ್ಸ್‌ನಲ್ಲಿ ಬ್ಯುಸಿ ಆಗಿದ್ದಾರೆ. ಜೂನಿಯರ್‌ಗೆ ಕ್ರೇಜಿಸ್ಟಾರ್, ದೇವಿಶ್ರೀ ಪ್ರಸಾದ್ ಕೂಡ ಸಾಥ್ ನೀಡಿದ್ದಾರೆ.
- ಜೈಲಲ್ಲಿ ಸೀನಿಯರ್.. ಪ್ರಮೋಷನ್ಸ್‌ನಲ್ಲಿ ಜೂನಿಯರ್ ರೆಡ್ಡಿ
- ಶ್ರೀಲೀಲಾ ಬೇಬಿ ಹಿಂದೆ ಗಾಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ
- ಜೂನಿಯರ್‌ಗೆ ಕ್ರೇಜಿಸ್ಟಾರ್ & ರಾಕ್‌ಸ್ಟಾರ್ ದೇವಿಶ್ರೀ ಸಾಥ್
- ರಾಜಮೌಳಿ ಕ್ಲಾಪ್ ಮಾಡಿದ್ದ ಜೆನಿಲಿಯಾ- ಕಿರೀಟಿ ಪ್ರಾಜೆಕ್ಟ್
ಇದು ಗಣಿದಣಿ ಗಾಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ನಟನೆಯ ಚೊಚ್ಚಲ ಸಿನಿಮಾ ಜೂನಿಯರ್ ಆಲ್ಬಮ್‌ನ ಫಸ್ಟ್ ಸಾಂಗ್. ಹೌದು.. ಕ್ಯೂಟ್ ಕ್ವೀನ್ ಶ್ರೀಲೀಲಾ ಹಿಂದೆ ಬೇಬಿ ಬೇಬಿ ಅಂತ ಹಾಡ್ತಾ, ಕುಣಿಯೋ ಕಿರೀಟಿಯ ಈ ಹಾಡು ಯೂತ್‌ಫುಲ್ ಲವ್ ಡುಯೆಟ್ ಆಗಿದೆ. ರಾಕ್‌ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆಯ ಈ ಹಾಡಿಗೆ ಪವನ್ ಭಟ್ ಸಾಹಿತ್ಯವಿದೆ. ನಕುಲ್ ಅಭ್ಯಂಕರ್ ಗಾಯನದಲ್ಲಿ ಸಾಂಗ್ ಸಖತ್ ಕಲರ್‌ಫುಲ್ ಆಗಿ ಮೂಡಿಬಂದಿದೆ.
ಅಂದಹಾಗೆ ಇದು ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲದಲ್ಲಿ ತಯಾರಾಗ್ತಿದ್ದು, ಕನ್ನಡದ ಪ್ರತಿಭೆ ರಾಧಾಕೃಷ್ಣ ರೆಡ್ಡಿ ನಿರ್ದೇಶನವಿದ್ದು, ಇದನ್ನ ತೆಲುಗಿನ ಪ್ರತಿಷ್ಠಿತ ಪ್ರೊಡಕ್ಷನ್ ಬ್ಯಾನರ್ ವಾರಾಹಿ ಚಲನಚಿತ್ರಂನ ಸಾಯಿ ಕೊರಪಾಟಿ ನಿರ್ಮಾಣ ಮಾಡ್ತಿದ್ದಾರೆ.
ಕಿರೀಟಿ ಜೊತೆ ಶ್ರೀಲೀಲಾ, ಬೊಮ್ಮರಿಲ್ಲು ಖ್ಯಾತಿಯ ಹಾಸಿನಿ ಪಾತ್ರಧಾರಿ ಜೆನಿಲಿಯಾ, ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಬಹುದೊಡ್ಡ ತಾರಾಗಣ ಈ ಚಿತ್ರದಲ್ಲಿದೆ.
ಭಾರತ ಚಿತ್ರರಂಗದ ಸೆನ್ಸೇಷನಲ್ ಡೈರೆಕ್ಟರ್, ಬಾಹುಬಲಿ ಖ್ಯಾತಿಯ ರಾಜಮೌಳಿ ಕ್ಲಾಪ್ ಮಾಡಿ ಶುಭ ಕೋರಿದ್ದ ಜನಾರ್ದನ ರೆಡ್ಡಿ ಪುತ್ರ ಕಿರೀಟಿಗೆ ಅದಕ್ಕಿಂತ ದೊಡ್ಡ ಆಶೀರ್ವಾದ ಬೇರೇನೂ ಬೇಕಿರಲಿಲ್ಲ. ಬೆಂಗಳೂರಿನ ಪಂಚತಾರಾ ಖಾಸಗಿ ಹೋಟೆಲ್‌ನಲ್ಲಿ ಬಹಳ ಅದ್ದೂರಿಯಾಗು ಮುಹೂರ್ತ ನೆರವೇರಿಸಿದ್ದ ಚಿತ್ರತಂಡಕ್ಕೆ ಅಂದು ಗಣಿದಣಿ ಕೂಡ ಸಾಥ್ ನೀಡಿದ್ರು. ಮಗನನ್ನ ಹರಸಿ ಹಾರೈಸಿ ಅಂತ ಎಲ್ಲರಿಗೂ ಮನವಿ ಮಾಡಿದ್ರು.
ಆದ್ರೀಗ ಕಿರೀಟಿ ತಂದೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮತ್ತೆ ಜೈಲು ಪಾಲಾಗಿದ್ದಾರೆ. ಮಗ ಹೀರೋ ಆಗಿ ತೆರೆಗೆ ಬರೋದನ್ನ ನೋಡೋ ಅದೃಷ್ಠ ಅವರಿಗಿಲ್ಲ. ಆದ್ರೂ ಕಿರೀಟಿ ಮಾತ್ರ ತನ್ನ ಜೂನಿಯರ್ ಚಿತ್ರದ ಪ್ರಮೋಷನ್ಸ್‌ನಲ್ಲಿ ಲವಲವಿಕೆಯಿಂದ ಭಾಗಿ ಆಗ್ತಿದ್ದಾರೆ.

ಇನ್ನು ಜೂನಿಯರ್ ಚಿತ್ರದ ಸಾಂಗ್ ಲಾಂಚ್ ಮಾಡಿದಂತಹ ಕ್ರೇಜಿಸ್ಟಾರ್, ಕಿರೀಟಿ ತಾಳ್ಮೆಯನ್ನ ಕೊಂಡಾಡಿದ್ರು. ಇದೊಂದು ಹ್ಯಾಪಿ ಜರ್ನಿ ಸಿನಿಮಾ ಎಂದರು. ಸುಧಾರಾಣಿ ಗಂಡನ ಪಾತ್ರ ಮಾಡಿರೋ ರವಿಮಾಮ, ಜೆನಿಲಿಯಾ ನನ್ನ ಮಗಳು ಎಂದರು.
ಒಟ್ಟಾರೆ ಜೂನಿಯರ್ ಸಿನಿಮಾ ಇದೇ ಜುಲೈ 18ಕ್ಕೆ ವಿಶ್ವದಾದ್ಯಂತ ತೆರೆಗೆ ಬರ್ತಿದ್ದು, ರಿಲೀಸ್ ವೇಳೆಗೆ ಸೀನಿಯರ್ ಗಾಲಿ ಜನಾರ್ದನ ರೆಡ್ಡಿ ಹೊರಗೆ ಬರ್ತಾರಾ ಅನ್ನೋದು ಯಕ್ಷಪ್ರಶ್ನೆ. ಅದೇನೇ ಆಗಲಿ, ಸ್ಪಷ್ಟವಾಗಿ ಕನ್ನಡ ಮಾತನಾಡುವ, ನಮ್ಮ ನೆಲ, ಭಾಷೆ, ಸಂಸ್ಕೃತಿ ಬಗ್ಗೆ ಅಪಾರ ಗೌರವ ಇರೋ, ಡೆಡಿಕೇಟೆಡ್ ಕಿರೀಟಿಗೆ ಶುಭವಾಗಲಿ ಅಂತ ಹಾರೈಸೋಣ.





