ಬೆಂಗಳೂರು: ದೀಪಾವಳಿ ಹಾಗೂ ಧನತ್ರಯೋದಶಿ ಹಬ್ಬದ ಪ್ರಯುಕ್ತ ಆನ್‌ಲೈನ್‌ನಲ್ಲಿ ಚಿನ್ನ ಖರೀದಿಸುವ ಗ್ರಾಹಕರಿಗೆ ಪ್ರಮುಖ ಕ್ವಿಕ್-ಕಾಮರ್ಸ್ ವೇದಿಕೆ ಇನ್‌ಸ್ಟಾಮಾರ್ಟ್ ಬಂಪರ್ ಆಫರ್ ಘೋಷಿಸಿದೆ. ಖ್ಯಾತ ಆಭರಣ ಮಳಿಗೆ ಕಲ್ಯಾಣ್ ಜ್ಯುವೆಲರ್ಸ್ ಜೊತೆ ಕೈಜೋಡಿಸಿರುವ ಸಂಸ್ಥೆ ಗ್ರಾಹಕರು ಮನೆಯಲ್ಲೇ ಕುಳಿತು ಕೇವಲ ಹತ್ತೇ ನಿಮಿಷಗಳಲ್ಲಿ ಚಿನ್ನದ ನಾಣ್ಯಗಳನ್ನು ಖರೀದಿಸುವ ಅವಕಾಶ ಕಲ್ಪಿಸಿದೆ.
ಧನತ್ರಯೋದಶಿ ಹಬ್ಬದ ದಿನ ಚಿನ್ನ ಮತ್ತು ಬೆಳ್ಳಿ ಖರೀದಿಸಿದರೆ ಸಂಪತ್ತು, ಶ್ರೇಯಸ್ಸು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಭಾರತೀಯರಲ್ಲಿದೆ. ಈ ಸಂಭ್ರಮವನ್ನು ಹೆಚ್ಚಿಸಲು ಇನ್‌ಸ್ಟಾಮಾರ್ಟ್ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ.
ನವೆಂಬರ್ 1 ರಿಂದ ನವೆಂಬರ್ 6ರವರೆಗೆ, ಇನ್‌ಸ್ಟಾಮಾರ್ಟ್ ಮೂಲಕ ಕಲ್ಯಾಣ್ ಜ್ಯುವೆಲರ್ಸ್ ಚಿನ್ನದ ನಾಣ್ಯ ಖರೀದಿಸುವ ಪ್ರತಿದಿನದ ಮೊದಲ 1000 ಗ್ರಾಹಕರಿಗೆ 1 ಗ್ರಾಂ ಬೆಳ್ಳಿ ನಾಣ್ಯ ಉಚಿತವಾಗಿ ಸಿಗಲಿದೆ.
ಅಷ್ಟೇ ಅಲ್ಲದೆ, ಪ್ರತಿಯೊಂದು ಚಿನ್ನದ ನಾಣ್ಯದ ಖರೀದಿಯ ಮೇಲೂ 5 ಗ್ರಾಂ ಬೆಳ್ಳಿ ನಾಣ್ಯದ ಮೌಲ್ಯದ ‘ಡಿಜಿಟಲ್ ಡಿಸ್ಕೌಂಟ್ ವೋಚರ್’ ಉಚಿತವಾಗಿ ಲಭ್ಯವಿದೆ. ಷರತ್ತುಗಳಿಗೆ ಒಳಪಟ್ಟು ಈ ವೋಚರ್ ಅನ್ನು ದೇಶಾದ್ಯಂತ ಇರುವ ಯಾವುದೇ ಕಲ್ಯಾಣ್ ಜ್ಯುವೆಲರ್ಸ್ ಮಳಿಗೆಗಳಲ್ಲಿ ಡಿಸೆಂಬರ್ 31, 2026ರ ಒಳಗೆ ಬಳಸಿಕೊಳ್ಳಬಹುದು.
ಇನ್‌ಸ್ಟಾಮಾರ್ಟ್‌ನಲ್ಲಿ ಹಬ್ಬದ ಸೀಸನ್‌ಗಾಗಿ 0.5 ಗ್ರಾಂ ನಿಂದ ಹಿಡಿದು 10 ಗ್ರಾಂ ವರೆಗಿನ ಚಿನ್ನದ ನಾಣ್ಯಗಳು ಹಾಗೂ 1 ಗ್ರಾಂ ನಿಂದ 100 ಗ್ರಾಂ ವರೆಗಿನ ಬೆಳ್ಳಿ ನಾಣ್ಯಗಳು ಲಭ್ಯವಿವೆ.
ಆನ್‌ಲೈನ್ ಚಿನ್ನ ಖರೀದಿಯಲ್ಲಿ ಬೆಂಗಳೂರಿಗರೇ ನಂ. 1
ಇತ್ತೀಚಿನ ದಿನಗಳಲ್ಲಿ ಶುಭ ಕಾರ್ಯಗಳಿಗೆ ಮತ್ತು ಉಡುಗೊರೆ ನೀಡಲು ಆನ್‌ಲೈನ್ ಮೂಲಕ ಚಿನ್ನ ಖರೀದಿಸುವ ಟ್ರೆಂಡ್ ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ ಇನ್‌ಸ್ಟಾಮಾರ್ಟ್‌ನಲ್ಲಿ ಚಿನ್ನದ ಖರೀದಿಯು ಶೇ.258 ರಷ್ಟು ಹಾಗೂ ಬೆಳ್ಳಿ ಖರೀದಿಯು ಶೇ.185 ರಷ್ಟು ಬೃಹತ್ ಏರಿಕೆ ಕಂಡಿದೆ.
ವಿಶೇಷವೆಂದರೆ, ಇನ್‌ಸ್ಟಾಮಾರ್ಟ್‌ನಲ್ಲಿ ಅತಿ ಹೆಚ್ಚು ಚಿನ್ನ-ಬೆಳ್ಳಿ ಖರೀದಿಸುವ ಟಾಪ್ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಮುಂಬೈ, ಹೈದರಾಬಾದ್, ಅಹಮದಾಬಾದ್ ಮತ್ತು ಲಕ್ನೋ ಇವೆ.
ಇತ್ತೀಚೆಗಷ್ಟೇ ಬೆಂಗಳೂರಿನ ಗ್ರಾಹಕರೊಬ್ಬರು ಒಂದೇ ದಿನದಲ್ಲಿ ಇನ್‌ಸ್ಟಾಮಾರ್ಟ್ ಮೂಲಕ ಬರೋಬ್ಬರಿ 2,52,459 ರೂ. ಮೌಲ್ಯದ 50 ಗ್ರಾಂ ಬೆಳ್ಳಿ ಗಟ್ಟಿಗಳು ಹಾಗೂ ಗಣೇಶ, ಲಕ್ಷ್ಮಿ ವಿನ್ಯಾಸದ ಚಿನ್ನದ ನಾಣ್ಯಗಳನ್ನು ಖರೀದಿಸಿ ಅಚ್ಚರಿ ಮೂಡಿಸಿದ್ದರು.
ಚಿಕ್ಕ ನಾಣ್ಯಗಳಿಗೆ ಭಾರಿ ಬೇಡಿಕೆ
ಕಳೆದ ವರ್ಷದ ಧನತ್ರಯೋದಶಿಯಂದು ಇನ್‌ಸ್ಟಾಮಾರ್ಟ್‌ನಲ್ಲಿ ಚಿನ್ನದ ಖರೀದಿಯಲ್ಲಿ ಶೇ.400 ರಷ್ಟು ಜಿಗಿತ ಕಂಡಿತ್ತು. ಈ ವರ್ಷದ ಅಕ್ಷಯ ತೃತೀಯ ದಿನದಂದು 0.5 ಗ್ರಾಂ, 1 ಗ್ರಾಂ ಮತ್ತು 2 ಗ್ರಾಂನ ಚಿಕ್ಕ ನಾಣ್ಯಗಳು ಅತಿ ಹೆಚ್ಚು ಮಾರಾಟವಾಗಿದ್ದವು. ಹಬ್ಬದ ದಿನಗಳಲ್ಲಿ ಶುಭ ಸೂಚಕವಾಗಿ ಸಣ್ಣ ಪ್ರಮಾಣದ ಚಿನ್ನವನ್ನು ಸುಲಭವಾಗಿ ಖರೀದಿಸಲು ಜನರು ಕ್ವಿಕ್ ಕಾಮರ್ಸ್ ಮೊರೆ ಹೋಗುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.





