ಯಾದಗಿರಿ: ಬೆಂಗಳೂರು ಮತ್ತು ಮುಂಬೈ ನಡುವೆ ಆರಂಭವಾಗಿರುವ ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ ರೈಲಿನ ಸೇವೆಯಿಂದ ಯಾದಗಿರಿ ಜಿಲ್ಲೆಯ ಜನರಿಗೆ ಸಂತಸ ಮೂಡಿದೆ. ಯಾದಗಿರಿ ರೈಲು ನಿಲ್ದಾಣದಲ್ಲಿ ಈ ರೈಲಿನ ನಿಲುಗಡೆಗೆ ಶಾಸಕ ಶರಣಗೌಡ ಕಂದಕೂರು ಹಾಗೂ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಚಾಲನೆ ನೀಡಲಾಯಿತು.
ಯಾದಗಿರಿ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಹಾಗೂ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಹಸಿರು ನಿಶಾನೆ ತೋರುವ ಮೂಲಕ ವಂದೇ ಭಾರತ್ ರೈಲಿನ ನಿಲುಗಡೆಗೆ ಚಾಲನೆ ನೀಡಿದರು. ಈ ವೇಳೆ ಸ್ಥಳೀಯ ಮುಖಂಡರು ಹಾಗೂ ರೈಲ್ವೆ ಪ್ರಯಾಣಿಕರು ಉಪಸ್ಥಿತರಿದ್ದು, ಹೊಸ ರೈಲು ಸೇವೆಯನ್ನು ಸಂಭ್ರಮದಿಂದ ಸ್ವಾಗತಿಸಿದರು.
ಯಾದಗಿರಿ ಜನರಿಗೆ ಪ್ರಯಾಣದ ಹೊಸ ಆಯ್ಕೆ
ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭವಾಗಿರುವುದು ಉತ್ತರ ಕರ್ನಾಟಕದ ಪ್ರಯಾಣಿಕರ ಪಾಲಿಗೆ ಮಹತ್ವದ ಬೆಳವಣಿಗೆಯಾಗಿದೆ. ಯಾದಗಿರಿ ನಿಲ್ದಾಣದಲ್ಲೂ ರೈಲಿಗೆ ನಿಲುಗಡೆ ಕಲ್ಪಿಸಿರುವುದರಿಂದ ಜಿಲ್ಲೆಯ ಜನರಿಗೆ ದೂರದ ನಗರಗಳಿಗೆ ಪ್ರಯಾಣಿಸಲು ಅನುಕೂಲವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು, ಕೇಂದ್ರ ಸರ್ಕಾರದ ಅವಧಿಯಲ್ಲಿ ರೈಲ್ವೆ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರು ಹೊಸ ವಂದೇ ಭಾರತ್ ರೈಲು ಸೇವೆ ಆರಂಭಿಸುವುದರ ಜೊತೆಗೆ ಯಾದಗಿರಿಯಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಿರುವುದು ಸಂತಸದ ವಿಚಾರ ಎಂದರು.
ಸೋಮಣ್ಣ ಅವರ ಕಾಳಜಿಗೆ ಶಾಸಕರ ಮೆಚ್ಚುಗೆ
ನಮ್ಮ ಭಾಗದ ಜನರ ಬೇಡಿಕೆಗಳಿಗೆ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಸ್ಪಂದಿಸುತ್ತಿದ್ದಾರೆ. ಯಾದಗಿರಿ ಸೇರಿದಂತೆ ಈ ಭಾಗದ ಅಭಿವೃದ್ಧಿಗೆ ಅವರು ಹಲವು ಕೊಡುಗೆಗಳನ್ನು ನೀಡಿದ್ದು, ರೈಲು ನಿಲುಗಡೆಗೆ ಅವಕಾಶ ಕಲ್ಪಿಸಿರುವುದು ಜನರಿಗೆ ಅನುಕೂಲವಾಗಲಿದೆ ಎಂದು ಶರಣಗೌಡ ಕಂದಕೂರು ಹೇಳಿದರು.
ರೈಲು ನಿಲುಗಡೆಗೆ ಬಿಜೆಪಿ ಮುಖಂಡರ ಸಂತಸ
ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ರಾಚನಗೌಡ ಮುದ್ನಾಳ ಅವರು, ಯಾದಗಿರಿಯಲ್ಲಿ ವಂದೇ ಭಾರತ್ ರೈಲಿನ ನಿಲುಗಡೆ ಕಲ್ಪಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಜಿಲ್ಲೆಯ ಜನರಿಗೆ ಆಧುನಿಕ ರೈಲು ಸೇವೆಯ ಪ್ರಯೋಜನ ದೊರೆಯಲಿದ್ದು, ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಧಾರಿಸಲು ಇದು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.





