ಅಮೆರಿಕ, ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ಪರಿಸ್ಥಿತಿ ಹಾಗೂ ಸೌದಿ ಅರೇಬಿಯಾ ಮೇಲೆ ಹೌತಿಗಳ ದಾಳಿಯ ಪರಿಣಾಮ ಡ್ರೈ ಫ್ರೂಟ್ಸ್‌ಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಯುದ್ಧದ ಪರಿಣಾಮ ಆಮದು ಮತ್ತು ಸಾಗಣೆ ವೆಚ್ಚ ಹೆಚ್ಚಾಗಿದ್ದು, ಇದರ ನೇರ ಹೊಡೆತ ಮಾರುಕಟ್ಟೆಯ ಮೇಲೆ ಬಿದ್ದಿದೆ. ಬೆಲೆ ಏರಿಕೆಯಿಂದ ಗ್ರಾಹಕರು ಡ್ರೈ ಫ್ರೂಟ್ಸ್ ಖರೀದಿಸಲು ಹಿಂದೇಟು ಹಾಕುತ್ತಿದ್ದು, ವ್ಯಾಪಾರ ವಹಿವಾಟಿನ ಮೇಲೂ ಪರಿಣಾಮ ಬೀರುತ್ತಿದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಡ್ರೈ ಫ್ರೂಟ್ಸ್‌ಗೆ ಸಾಮಾನ್ಯವಾಗಿ ಭಾರೀ ಬೇಡಿಕೆ ಇರುತ್ತದೆ. ಅದರಲ್ಲೂ ಕಾರ್ಪೊರೇಟ್ ಕಂಪನಿಗಳು ಉದ್ಯೋಗಿಗಳು ಹಾಗೂ ಗ್ರಾಹಕರಿಗೆ ನೀಡುವ ಗಿಫ್ಟ್ ಬಾಕ್ಸ್‌ಗಳಿಗೆ ದೊಡ್ಡ ಪ್ರಮಾಣದಲ್ಲಿ ಡ್ರೈ ಫ್ರೂಟ್ಸ್ ಖರೀದಿಸುತ್ತವೆ. ಆದರೆ, ಈ ಬಾರಿ ಬೆಲೆ ಏರಿಕೆಯಿಂದಾಗಿ ಹಲವು ಕಂಪನಿಗಳು ಡ್ರೈ ಫ್ರೂಟ್ಸ್ ಬದಲಿಗೆ ವಿವಿಧ ಬಗೆಯ ಸೀಡ್ಸ್‌ಗಳನ್ನು ಗಿಫ್ಟ್ ಬಾಕ್ಸ್‌ಗಳಲ್ಲಿ ಸೇರಿಸಲು ಮುಂದಾಗಿವೆ.
ಪಿಸ್ತಾ, ಬಾದಾಮಿ ಬೆಲೆ ಗಗನಕ್ಕೇರಿಕೆ
ಮಾರುಕಟ್ಟೆಯಲ್ಲಿ ಡ್ರೈ ಫ್ರೂಟ್ಸ್ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಕೆ.ಜಿ.ಗೆ ಸುಮಾರು ₹1,800 ಇದ್ದ ಸಾಮಾನ್ಯ ಪಿಸ್ತಾ ಬೆಲೆ ಇದೀಗ ₹2,800ಕ್ಕೆ ಏರಿಕೆಯಾಗಿದೆ. ₹2,500 ಇದ್ದ ಮಮ್ರಾ ಬಾದಾಮಿ ಬೆಲೆ ₹4,000ಕ್ಕೆ ತಲುಪಿದೆ. ಇದೇ ರೀತಿ ₹1,200 ಇದ್ದ ಅಂಜೂರದ ಬೆಲೆ ₹1,800ಕ್ಕೆ ಹೆಚ್ಚಾಗಿದೆ.
₹900 ಇದ್ದ ಕ್ಯಾಲಿಫೋರ್ನಿಯಾ ಬಾದಾಮಿ ಬೆಲೆ ಈಗ ₹1,200 ಆಗಿದ್ದು, ವಾಲ್‌ನಟ್ ಬೆಲೆ ₹900ರಿಂದ ₹1,400ಕ್ಕೆ ಏರಿಕೆಯಾಗಿದೆ. ಗೋಡಂಬಿ ಬೆಲೆ ₹800ರಿಂದ ₹950ಕ್ಕೆ ಹೆಚ್ಚಾದರೆ, ಒಣದ್ರಾಕ್ಷಿ ಬೆಲೆ ಕೆ.ಜಿ.ಗೆ ₹350ರಿಂದ ₹600ಕ್ಕೆ ಏರಿಕೆಯಾಗಿದೆ.
ಗಿಫ್ಟ್ ಬಾಕ್ಸ್‌ಗಳಲ್ಲಿ ಸೀಡ್ಸ್‌ಗೆ ಬೇಡಿಕೆ
ಡ್ರೈ ಫ್ರೂಟ್ಸ್ ಬೆಲೆ ಏರಿಕೆಯಿಂದಾಗಿ ದೀಪಾವಳಿ ಗಿಫ್ಟ್ ಬಾಕ್ಸ್‌ಗಳಲ್ಲೂ ಬದಲಾವಣೆ ಕಂಡುಬರುತ್ತಿದೆ. ಈ ಹಿಂದೆ ಬಾದಾಮಿ, ಗೋಡಂಬಿ, ಪಿಸ್ತಾ, ಅಂಜೂರ ಸೇರಿದಂತೆ ಹಲವು ಡ್ರೈ ಫ್ರೂಟ್ಸ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸಲಾಗುತ್ತಿತ್ತು. ಆದರೆ ಈ ಬಾರಿ ಕುಂಬಳಕಾಯಿ ಬೀಜ, ಚಿಯಾ ಬೀಜ, ಸೂರ್ಯಕಾಂತಿ ಬೀಜ ಹಾಗೂ ಮಖಾನಾಗಳಿಗೆ ಬೇಡಿಕೆ ಹೆಚ್ಚಾಗಿದೆ. ಪರ್ಯಾಯ ಉತ್ಪನ್ನಗಳ ಬೇಡಿಕೆ ಹೆಚ್ಚಾದ ಪರಿಣಾಮ ಅವುಗಳ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ.
ಸಾಗಣೆ ವೆಚ್ಚದಲ್ಲಿ ಭಾರೀ ಹೆಚ್ಚಳ
ಇರಾನ್ ಮತ್ತು ಅಫಘಾನಿಸ್ತಾನದಿಂದ ಬಾದಾಮಿ, ಅಂಜೂರ ಹಾಗೂ ಪಿಸ್ತಾದಂತಹ ಡ್ರೈ ಫ್ರೂಟ್ಸ್‌ಗಳು ಸೌದಿ ಅರೇಬಿಯಾ ಮಾರ್ಗವಾಗಿ ಭಾರತಕ್ಕೆ ಬರುತ್ತಿದ್ದವು. ಆದರೆ ಯುದ್ಧ ಹಾಗೂ ದಾಳಿಗಳ ಹಿನ್ನೆಲೆಯಲ್ಲಿ ಸಾಗಣೆ ಮಾರ್ಗಗಳಲ್ಲಿ ಬದಲಾವಣೆಯಾಗಿದ್ದು, ಹಡಗುಗಳು ಸುತ್ತು ಮಾರ್ಗದಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾಗಣೆ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ.
ಈ ಹಿಂದೆ 20 ಅಡಿ ಕಂಟೈನರ್ ಸಾಗಣೆಗೆ ಸುಮಾರು 1,500 ಡಾಲರ್ ವೆಚ್ಚವಾಗುತ್ತಿತ್ತು. ಇದೀಗ ಅದೇ ವೆಚ್ಚ ಸುಮಾರು 4,000 ಡಾಲರ್‌ಗೆ ಏರಿಕೆಯಾಗಿದೆ ಎನ್ನಲಾಗಿದೆ. ಸಾಗಣೆ ವೆಚ್ಚದ ಈ ಹೆಚ್ಚಳವೂ ಡ್ರೈ ಫ್ರೂಟ್ಸ್ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.





