ಬೀದರ್‌ನಲ್ಲಿ ಒಂದೇ ದಿನ ಇಬ್ಬರು ವ್ಯಕ್ತಿಗಳು ಹೃದಯಾಘಾತದಿಂದ ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ. ಸರಕಾರಿ ಡಿಗ್ರಿ ಕಾಲೇಜಿನ ಅತಿಥಿ ಉಪನ್ಯಾಸಕ ಡಾ. ರವಿಕುಮಾರ್ (42) ಮತ್ತು ಆರೋಗ್ಯ ಇಲಾಖೆಯ ಕ್ಷಯರೋಗ ಕಚೇರಿಯ ಸಿಬ್ಬಂದಿ ಶಿವರಾಜ್ (52) ಮೃತ ದುರ್ದೈವಿಗಳು.
ಹುಲಸೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಅತಿಥಿ ಉಪನ್ಯಾಸಕರಾಗಿ ಕಳೆದ ಆರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಡಾ. ರವಿಕುಮಾರ್‌ಗೆ ಕರ್ತವ್ಯಕ್ಕೆಂದು ಬಸವಕಲ್ಯಾಣದಿಂದ ಹುಲಸೂರಿಗೆ ತೆರಳುವ ವೇಳೆ ಇದ್ದಕ್ಕಿದ್ದಂತೆ ಎದೆ ಮತ್ತು ಸೊಂಟದ ನೋವು ಕಾಣಿಸಿಕೊಂಡಿತು. ಅವರು ಈ ಬಗ್ಗೆ ಸಹೋದ್ಯೋಗಿಗೆ ತಿಳಿಸಿದಾಗ, ಕೂಡಲೇ ಕಾಲೇಜಿಗೆ ಬರುವುದನ್ನು ಬಿಟ್ಟು ವೈದ್ಯರನ್ನು ಭೇಟಿಯಾಗುವಂತೆ ಸಲಹೆ ಪಡೆದಿದ್ದಾರೆ.
ಬಸವಕಲ್ಯಾಣದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳುವ ಮಾರ್ಗದಲ್ಲೇ ಡಾ. ರವಿಕುಮಾರ್‌ಗೆ ತೀವ್ರ ಹೃದಯಾಘಾತವಾಗಿ ಸಾವನ್ನಪ್ಪಿದರು.
ಇದೇ ದಿನ, ಬೀದರ್‌ನ ಕ್ಷಯರೋಗ ಕೇಂದ್ರದಲ್ಲಿ ಡಿ-ದರ್ಜೆ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವರಾಜ್ (52) ಕೂಡ ಹೃದಯಾಘಾತಕ್ಕೆ ಬಲಿಯಾದರು. ಬೀದರ್‌ನ ನಗರ ನಿವಾಸಿಯಾಗಿದ್ದ ಶಿವರಾಜ್‌ಗೆ ಬೆಳಿಗ್ಗೆ ಎದೆನೋವು ಕಾಣಿಸಿಕೊಂಡಿತು. ಕೂಡಲೇ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ವೇಳೆ ಅವರು ಕೊನೆಯುಸಿರೆಳೆದರು. ಶಿವರಾಜ್ ಕೂಡ ದೀರ್ಘಕಾಲದಿಂದ ಕ್ಷಯರೋಗ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಒಂದೇ ದಿನ ಎರಡು ಹೃದಯಾಘಾತದ ಘಟನೆಗಳು ಬೀದರ್‌ನಲ್ಲಿ ಆತಂಕ ಮೂಡಿಸಿವೆ. ಈ ದುರಂತ ಘಟನೆಗಳು ಆರೋಗ್ಯ ಜಾಗೃತಿಯ ಅಗತ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿವೆ.





