ನವದೆಹಲಿ: ಭಾರತದ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ವಾಸ್ತುಶಿಲ್ಪ ಪರಂಪರೆಗೆ ಮತ್ತೊಂದು ಮಹತ್ವದ ಮಾನ್ಯತೆ ದೊರೆತಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಗೆ ಭಾರತದ ಐದು ಹೊಸ ತಾಣಗಳು ಸೇರ್ಪಡೆಯಾಗಿವೆ. ಮಧ್ಯಪ್ರದೇಶದ ಉದಯಗಿರಿ ಗುಹೆಗಳು, ಬಾಗ್ ಗುಹೆ ವರ್ಣಚಿತ್ರಗಳು, ಚಂಬಲ್ ಕಣಿವೆಯ ದೇವಾಲಯಗಳ ಸಮೂಹ, ಗಿನ್ನೋರ್‌ಗಢ್ ಹಾಗೂ ಭಾರತ-ದಕ್ಷಿಣ ಆಫ್ರಿಕಾದ ಸತ್ಯಾಗ್ರಹಕ್ಕೆ ಸಂಬಂಧಿಸಿದ ತಾಣಗಳ ಸರಣಿ ಈ ಪಟ್ಟಿಗೆ ಸೇರ್ಪಡೆಯಾಗಿದೆ.
ಈ ಐದು ಹೊಸ ಸೇರ್ಪಡೆಗಳೊಂದಿಗೆ ಯುನೆಸ್ಕೋದ ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಯಲ್ಲಿ ಭಾರತದ ತಾಣಗಳ ಸಂಖ್ಯೆ 78ಕ್ಕೆ ಏರಿಕೆಯಾಗಿದೆ ಎಂದು ಪತ್ರಿಕಾ ಮಾಹಿತಿ ಕಾರ್ಯಾಲಯದ ಸಾಂಸ್ಕೃತಿಕ ವಿಭಾಗ ತಿಳಿಸಿದೆ.
ಉದಯಗಿರಿ ಗುಹೆಗಳು
ಮಧ್ಯಪ್ರದೇಶದ ಉದಯಗಿರಿ ಗುಹೆಗಳು ಗುಪ್ತ ಸಾಮ್ರಾಜ್ಯದ ಕಾಲದ ಪ್ರಮುಖ ಐತಿಹಾಸಿಕ ಮತ್ತು ಧಾರ್ಮಿಕ ತಾಣಗಳಲ್ಲಿ ಒಂದಾಗಿದೆ. ಕ್ರಿ.ಶ. 4ನೇ ಶತಮಾನದ ಅಂತ್ಯದಿಂದ 5ನೇ ಶತಮಾನದ ಆರಂಭದ ಅವಧಿಯಲ್ಲಿ ಗುಪ್ತರ ಆಶ್ರಯದಲ್ಲಿ ಬಂಡೆಯನ್ನು ಕೊರೆದು ಈ ಗುಹೆಗಳನ್ನು ನಿರ್ಮಿಸಲಾಗಿದೆ ಎಂದು ಯುನೆಸ್ಕೋ ಮಾಹಿತಿ ತಿಳಿಸಿದೆ.
ಉದಯಗಿರಿ ಪ್ರದೇಶದಲ್ಲಿ ಒಟ್ಟು 20 ಗುಹೆಗಳು, ಶಿಲ್ಪಕಲಾ ಫಲಕಗಳು ಮತ್ತು ಶಾಸನಗಳಿವೆ. ಪ್ರಾಚೀನ ಸಂಚಾರ ಮಾರ್ಗಗಳು ಸೇರಿದಂತೆ ಹಲವು ಭೌಗೋಳಿಕ ಹಾಗೂ ಜಲವಿಜ್ಞಾನ ವೈಶಿಷ್ಟ್ಯಗಳನ್ನು ಹೊಂದಿರುವ ಈ ಪ್ರದೇಶವು ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದ ಸಾಂಸ್ಕೃತಿಕ ಭೂದೃಶ್ಯವಾಗಿಯೂ ಮಹತ್ವ ಪಡೆದಿದೆ.
ಬಾಗ್ ಗುಹೆಗಳ ಪ್ರಾಚೀನ ವರ್ಣಚಿತ್ರ
ಮಧ್ಯಪ್ರದೇಶದ ಬಾಗ್ನಿ ನದಿಯ ದಡದಲ್ಲಿರುವ ವಿಂಧ್ಯ ಪರ್ವತ ಶ್ರೇಣಿಯ ದಕ್ಷಿಣ ಇಳಿಜಾರಿನಲ್ಲಿ ಬಾಗ್ ಗುಹೆಗಳು ನೆಲೆಗೊಂಡಿವೆ. ಇಲ್ಲಿ ಒಟ್ಟು ಒಂಬತ್ತು ಬಂಡೆ ಕೊರೆದ ಬೌದ್ಧ ಗುಹೆಗಳ ಸಮೂಹವಿದೆ.
ಈ ಗುಹೆಗಳಲ್ಲಿರುವ ಪ್ರಾಚೀನ ವರ್ಣಚಿತ್ರಗಳು ಪ್ರಮುಖ ಆಕರ್ಷಣೆಯಾಗಿವೆ. ಪ್ರದೇಶದ ಭೌಗೋಳಿಕ ರಚನೆ ಹಾಗೂ ಗುಹೆಗಳ ಕಲಾತ್ಮಕ ವೈಶಿಷ್ಟ್ಯಗಳು ಈ ತಾಣಕ್ಕೆ ವಿಶೇಷ ಐತಿಹಾಸಿಕ ಮಹತ್ವ ನೀಡಿವೆ.
ಚಂಬಲ್ ಕಣಿವೆಯ ದೇವಾಲಯಗಳ ಸಮೂಹ
ಮಧ್ಯಪ್ರದೇಶದ ಚಂಬಲ್ ಕಣಿವೆಯಲ್ಲಿರುವ ಬಟೇಶ್ವರ್, ಪಡಾವಲಿ ಮತ್ತು ಕಕರ್ಮಠ್ ದೇವಾಲಯಗಳ ಸಮೂಹವೂ UNESCO ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಯಾಗಿದೆ.
ಪ್ರಾಚೀನ ದೇವಾಲಯ ವಾಸ್ತುಶಿಲ್ಪ, ಶಿಲ್ಪಕಲೆ ಮತ್ತು ಧಾರ್ಮಿಕ ಪರಂಪರೆಯ ದೃಷ್ಟಿಯಿಂದ ಈ ತಾಣಗಳು ಮಹತ್ವ ಹೊಂದಿವೆ. ವಿವಿಧ ಕಾಲಘಟ್ಟಗಳ ವಾಸ್ತುಶಿಲ್ಪದ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಲು ಈ ದೇವಾಲಯಗಳು ಪ್ರಮುಖವೆಂದು ಪರಿಗಣಿಸಲಾಗಿದೆ.
ಗಿನ್ನೋರ್‌ಗಢ್ ಕೋಟೆ
ಮಧ್ಯಪ್ರದೇಶದ ಗಿನ್ನೋರ್‌ಗಢ್ ಕೋಟೆಯೂ ಈ ಪಟ್ಟಿಗೆ ಸೇರ್ಪಡೆಯಾಗಿದೆ. ರಾಜ್ ಗೊಂಡ್ ಆಡಳಿತಗಾರರ ಪ್ರಮುಖ ಕೋಟೆ ಹಾಗೂ ರಾಜಧಾನಿಯಾಗಿದ್ದ ಈ ತಾಣವು ಪ್ರದೇಶದ ಇತಿಹಾಸ, ಆಡಳಿತ ವ್ಯವಸ್ಥೆ ಮತ್ತು ರಾಜಕೀಯ ಪರಂಪರೆಯೊಂದಿಗೆ ನಿಕಟ ಸಂಬಂಧ ಹೊಂದಿದೆ.
ಸತ್ಯಾಗ್ರಹದ ಪರಂಪರೆಗೆ ಜಾಗತಿಕ ಮಾನ್ಯತೆ
ಮಹಾತ್ಮ ಗಾಂಧಿಯವರ ಸತ್ಯಾಗ್ರಹ ಪರಿಕಲ್ಪನೆಯ ಬೆಳವಣಿಗೆಯನ್ನು ಪ್ರತಿಬಿಂಬಿಸುವ ಭಾರತ ಮತ್ತು ದಕ್ಷಿಣ ಆಫ್ರಿಕಾದ ತಾಣಗಳನ್ನು ಒಳಗೊಂಡ ಸರಣಿ ಅಂತಾರಾಷ್ಟ್ರೀಯ ಆಸ್ತಿಯ ಪ್ರಸ್ತಾವನೆಯೂ UNESCO ತಾತ್ಕಾಲಿಕ ಪಟ್ಟಿಗೆ ಸೇರಿದೆ.
ಸತ್ಯಾಗ್ರಹದ ಪರಿಕಲ್ಪನೆ ದಕ್ಷಿಣ ಆಫ್ರಿಕಾದಲ್ಲಿ ರೂಪುಗೊಂಡು, ನಂತರ ಭಾರತದಲ್ಲಿ ಪ್ರಯೋಗ, ವಿಸ್ತರಣೆ ಹಾಗೂ ಸಾಂಸ್ಥಿಕ ರೂಪ ಪಡೆದ ಬೆಳವಣಿಗೆಯನ್ನು ಈ ತಾಣಗಳ ಸರಣಿ ಪ್ರತಿಬಿಂಬಿಸುತ್ತದೆ.
ಈ ಪ್ರಸ್ತಾವಿತ ಸರಣಿ ಆಸ್ತಿಯಲ್ಲಿ ಒಟ್ಟು 9 ತಾಣಗಳಿದ್ದು, ಎರಡು ದಕ್ಷಿಣ ಆಫ್ರಿಕಾದಲ್ಲಿವೆ ಮತ್ತು ಏಳು ಭಾರತದಲ್ಲಿವೆ.
ದಕ್ಷಿಣ ಆಫ್ರಿಕಾದ ತಾಣಗಳಲ್ಲಿ ಪೀಟರ್‌ಮರಿಟ್ಸ್‌ಬರ್ಗ್ ರೈಲು ನಿಲ್ದಾಣ ಮತ್ತು ಫೀನಿಕ್ಸ್ ಸೆಟಲ್‌ಮೆಂಟ್ ಸೇರಿವೆ.
ಭಾರತದಲ್ಲಿರುವ ತಾಣಗಳ ಪಟ್ಟಿಯಲ್ಲಿ ಮಹಾತ್ಮ ಗಾಂಧಿ ಸತ್ಯಾಗ್ರಹ ಸ್ಮಾರಕ, ಸಾಬರಮತಿ ಆಶ್ರಮ, ಮಣಿ ಭವನ ಸಂಕೀರ್ಣ, ಹರಿಜನ ಸೇವಕ ಸಂಘದ ಸಂಕೀರ್ಣ, ಸೇವಾಗ್ರಾಮ ಆಶ್ರಮ, ಆಗಾ ಖಾನ್ ಅರಮನೆ ಮತ್ತು ಗಾಂಧಿ ಸ್ಮೃತಿ ಸೇರಿವೆ.
ಭಾರತದ ಪರಂಪರೆಗೆ ಮತ್ತೊಂದು ಗರಿ
UNESCO ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಗೆ ಐದು ಹೊಸ ಸೇರ್ಪಡೆಗಳು ಭಾರತದ ವೈವಿಧ್ಯಮಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮತ್ತಷ್ಟು ಜಾಗತಿಕ ಮಟ್ಟದಲ್ಲಿ ಗುರುತಿಸಲು ನೆರವಾಗಿವೆ. ಗುಪ್ತರ ಕಾಲದ ಗುಹೆಗಳಿಂದ ಹಿಡಿದು ಗೊಂಡ್ ರಾಜರ ಕೋಟೆ, ಪ್ರಾಚೀನ ದೇವಾಲಯಗಳು ಹಾಗೂ ಗಾಂಧೀಜಿಯವರ ಸತ್ಯಾಗ್ರಹದ ಇತಿಹಾಸದವರೆಗೆ ವಿಭಿನ್ನ ಪರಂಪರೆಗಳು ಈ ಸೇರ್ಪಡೆಯಲ್ಲಿ ಒಳಗೊಂಡಿವೆ.





