ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಮಂಡಳಿ (CBSE) ತನ್ನ ಮೌಲ್ಯಮಾಪನದಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ವಿದ್ಯಾರ್ಥಿಗಳಿಂದ ಭಾರಿ ಮೊತ್ತದ ಶುಲ್ಕ ವಸೂಲಿ ಮಾಡುತ್ತಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಸಂಸ್ಥೆಗಳ ಒಳಗೇ “ಜೇಬುಗಳ್ಳರು” ಕುಳಿತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, CBSE ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಸಂಭವಿಸಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ವಿದ್ಯಾರ್ಥಿಗಳಿಂದ ಅನಗತ್ಯವಾಗಿ ಹೆಚ್ಚಿನ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದರಿಂದಾಗಿ ಶಿಕ್ಷಣ ಸೇವೆಯ ಬದಲು ವ್ಯಾಪಾರವಾಗಿ ಪರಿವರ್ತನೆಯಾಗುತ್ತಿರುವ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಪರೀಕ್ಷೆಯ ಮೌಲ್ಯಮಾಪನದಲ್ಲಿ CBSE ಮಾಡಿದ ಎಡವಟ್ಟುಗಳಿಂದಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಕಡಿಮೆ ಅಂಕಗಳು ಬಂದಿವೆ. ಆದರೆ ಆ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮಂಡಳಿಯು ವಿದ್ಯಾರ್ಥಿಗಳ ಮುಂದೆ ದೊಡ್ಡ ಬಿಲ್ ಇಟ್ಟಿದೆ.
CBSE ಶುಲ್ಕ ಹೀಗಿದೆ
-
ಡಿಜಿಟಲ್ ಸ್ಕ್ಯಾನ್ ಪ್ರತಿ ಪಡೆಯಲು: ಪ್ರತಿ ವಿಷಯಕ್ಕೆ ₹100
-
ಅಂಕಗಳ ಮರುಎಣಿಕೆಗೆ: ಪ್ರತಿ ಪತ್ರಿಕೆಗೆ ₹100
-
ಮರುಮೌಲ್ಯಮಾಪನಕ್ಕೆ: ಪ್ರತಿ ಪ್ರಶ್ನೆಗೆ ₹25
ಈ ಲೆಕ್ಕಾಚಾರದ ಪ್ರಕಾರ, ಒಂದು ವಿದ್ಯಾರ್ಥಿ ತಾನು ಬರೆದ ಎಲ್ಲಾ ಉತ್ತರ ಪತ್ರಿಕೆಗಳ ಸರಿಯಾದ ಪರಿಶೀಲನೆಗಾಗಿ ಸುಮಾರು 2,000 ರೂಪಾಯಿಗಳವರೆಗೆ ಹಣ ಪಾವತಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಕೋಟ್ಯಂತರ ರೂ. ಸಂಪಾದನೆ?
ದೇಶಾದ್ಯಂತ ಸುಮಾರು 4 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ಮೂಲಕ CBSE ಕೋಟ್ಯಂತರ ರೂಪಾಯಿ ಸಂಪಾದನೆ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆತಂಕ ವ್ಯಕ್ತಪಡಿಸಿದ್ದಾರೆ.
“ಸಂಸ್ಥೆ ಮಾಡಿದ ತಪ್ಪುಗಳನ್ನು ಸರಿಪಡಿಸಲು ವಿದ್ಯಾರ್ಥಿಗಳಿಂದಲೇ ದಂಡ ವಸೂಲಿ ಮಾಡುತ್ತಿರುವುದು ಎಷ್ಟು ಸರಿ?” ಎಂದು ಅವರು ಪ್ರಶ್ನಿಸಿದ್ದಾರೆ. ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಪ್ರಕ್ರಿಯೆಯನ್ನು ಕೇವಲ ಮೊಬೈಲ್ ಫೋನ್‌ಗಳ ಮೂಲಕ ಮಾಡಿರುವುದರಿಂದ ಅಂಕ ನೀಡಿಕೆಯಲ್ಲಿ ತಪ್ಪುಗಳಾಗಿರುವುದು ಖಚಿತವಾಗಿದೆ ಎಂದು ಅವರು ಹೇಳಿದ್ದಾರೆ.
ಶಿಕ್ಷಣ ಕ್ಷೇತ್ರವನ್ನು ಉದ್ಯಮವನ್ನಾಗಿ ಪರಿವರ್ತಿಸಿದಾಗ ತಪ್ಪುಗಳನ್ನು ತಿದ್ದಿಕೊಳ್ಳುವ ಬದಲು ಅವುಗಳನ್ನೇ ಮತ್ತಷ್ಟು ಹೆಚ್ಚಿಸಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ತಪ್ಪು ಮಂಡಳಿಯದ್ದಾಗಿದ್ದರೂ ಶಿಕ್ಷೆ ಮಾತ್ರ ಮಕ್ಕಳಿಗೆ ಸಿಗುತ್ತಿದೆ ಮತ್ತು ಇದರಿಂದ ಸರ್ಕಾರಕ್ಕೆ ಭರಪೂರ ಆದಾಯ ಹರಿದುಬರುತ್ತಿದೆ ಎಂದು ಆರೋಪಿಸಿದ್ದಾರೆ.
“ಈ ಕಮರ್ಷಿಯಲ್ ಆಟದಿಂದಾಗಿ ದೇಶದ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯ, ಆತ್ಮವಿಶ್ವಾಸ ಮತ್ತು ಉಜ್ವಲ ಭವಿಷ್ಯವನ್ನು ಕಳೆದುಕೊಳ್ಳುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ CBSE ಮಂಡಳಿ ಈ ಆರೋಪಗಳಿಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.





