ನವದೆಹಲಿ, (ಜುಲೈ 29): ಕಳೆದ ವರ್ಷ ಅಹಮದಾಬಾದ್‌ನಲ್ಲಿ ಭೀಕರತೆಗೆ ಸಾಕ್ಷಿಯಾದ 260 ಪ್ರಯಾಣಿಕರ ಸಾವಿಗೆ ಕಾರಣವಾಗಿದ್ದ ಏರ್ ಇಂಡಿಯಾ ಎಐ-171 ವಿಮಾನ ದುರಂತದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. 260 ಪ್ರಯಾಣಿಕರು ಮತ್ತು ಸಿಬ್ಬಂದಿಯ ಸಾವಿಗೆ ಕಾರಣವಾಗಿದ್ದ ಈ ದುರಂತದ ತನಿಖೆ ಅಂತಿಮ ಹಂತದಲ್ಲಿದ್ದು, ವಿಮಾನದ ಇಂಧನ ನಿಯಂತ್ರಣ (Fuel Control) ಸ್ವಿಚ್‌ನ ಲಾಕಿಂಗ್ ವ್ಯವಸ್ಥೆಯಲ್ಲಿ ಯಾವುದೇ ತಾಂತ್ರಿಕ ದೋಷ ಅಥವಾ ಅಸಹಜತೆ ಪತ್ತೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ನಾಗರಿಕ ವಿಮಾನಯಾನ ಸಚಿವಾಲಯ, ವಿಮಾನದ ಮೂಲ ಉಪಕರಣ ತಯಾರಕರು ನಡೆಸಿದ ಸುಧಾರಿತ ತಾಂತ್ರಿಕ ಪರಿಶೀಲನೆಯ ನಂತರ ಈ ಮಾಹಿತಿ ದೃಢಪಟ್ಟಿದೆ ಎಂದು ಸ್ಪಷ್ಟಪಡಿಸಿದೆ. ಸದ್ಯ ಅಮೆರಿಕದ ಸಿಯಾಟಲ್‌ನಲ್ಲಿ ವಿಮಾನದ ಥ್ರಸ್ಟ್ ಕಂಟ್ರೋಲ್ ಮಾಡ್ಯೂಲ್ ಕುರಿತ ಹೆಚ್ಚಿನ ತಾಂತ್ರಿಕ ಪರಿಶೀಲನೆ ಮುಂದುವರಿದಿದೆ.
ರಾಜ್ಯಸಭೆಯಲ್ಲಿ ಉತ್ತರಿಸಿದ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೋಹೋಲ್, ವಿಮಾನದ ಹಾರಾಟ ಯೋಗ್ಯತಾ ಪರಿಶೀಲನೆಯ ಭಾಗವಾಗಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಈ ತಾಂತ್ರಿಕ ಪರೀಕ್ಷೆಗಳಿಗೆ ಆದೇಶಿಸಿತ್ತು ಎಂದು ಹೇಳಿದರು. ಇಂಧನ ಪೂರೈಕೆ ಮತ್ತು ಫ್ಯುಯೆಲ್ ಕಂಟ್ರೋಲ್ ಸ್ವಿಚ್‌ಗೆ ಸಂಬಂಧಿಸಿದ ಶಂಕೆಗಳ ಹಿನ್ನೆಲೆಯಲ್ಲಿ ವಿಶೇಷ ತನಿಖೆ ನಡೆಸಲಾಗಿತ್ತು.
ತನಿಖೆಯ ವೇಳೆ ವಿಮಾನದ ಕಾಕ್‌ಪಿಟ್‌ನಲ್ಲಿರುವ ಇಂಧನ ನಿಯಂತ್ರಣ ಸ್ವಿಚ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದವು ಎಂಬುದು ದೃಢಪಟ್ಟಿದೆ. ಜೊತೆಗೆ, ವಿಮಾನದ ಬ್ಲ್ಯಾಕ್ ಬಾಕ್ಸ್, ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ (DFDR) ಹಾಗೂ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ದಾಖಲಾತಿಗಳನ್ನು ಸಂಪೂರ್ಣವಾಗಿ ವಿಶ್ಲೇಷಿಸಲಾಗಿದೆ. ಈ ಪರಿಶೀಲನೆಯಲ್ಲಿ ಸ್ವಿಚ್‌ನ ಯಾಂತ್ರಿಕ ಕಾರ್ಯವೈಖರಿ ಅಥವಾ ವ್ಯವಸ್ಥೆಯ ವಿನ್ಯಾಸದಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ಅಪಘಾತ ತನಿಖಾ ಸಂಸ್ಥೆ (AAIB) ಅಂತಿಮ ವರದಿ ನೀಡಲು ವಿಳಂಬ ಮಾಡಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ದೊಡ್ಡ ಪ್ರಮಾಣದ ವಿಮಾನ ದುರಂತಗಳ ತನಿಖೆ ಸ್ವಾಭಾವಿಕವಾಗಿಯೇ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದ್ದು, ಈ ಪ್ರಕರಣದ ತನಿಖೆ ಈಗ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದೆ. ತನಿಖಾ ವರದಿ ಪೂರ್ಣಗೊಂಡ ಬಳಿಕ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಲ್ಲಿಸಲಾಗುವುದು.
ಇದಕ್ಕೂ ಮುನ್ನ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು, 2025ರ ಜೂನ್‌ನಲ್ಲಿ ಸಂಭವಿಸಿದ ಅಹಮದಾಬಾದ್ ಏರ್ ಇಂಡಿಯಾ ಎಐ-171 ದುರಂತದ ಅಂತಿಮ ತನಿಖಾ ವರದಿಯನ್ನು ಸಾಧ್ಯವಾದಷ್ಟು ಬೇಗ ಸಾರ್ವಜನಿಕಗೊಳಿಸಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ್ದರು. ತನಿಖಾ ಸಂಸ್ಥೆಗೆ ಅಗತ್ಯವಿರುವ ಎಲ್ಲಾ ತಾಂತ್ರಿಕ ಮತ್ತು ಆಡಳಿತಾತ್ಮಕ ನೆರವನ್ನು ಸರ್ಕಾರ ಒದಗಿಸಿದೆ ಎಂದೂ ಅವರು ತಿಳಿಸಿದ್ದರು.





