ನವದೆಹಲಿ (ಜುಲೈ 29): ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲಿ ಭಾರೀ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದ ತಲಬಿರಾ-II ಕಲ್ಲಿದ್ದಲು ಬ್ಲಾಕ್ ಹಂಚಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಾಜಿ ಪ್ರಧಾನಿಯವರ ನಿಧನದ ಎರಡು ವರ್ಷಗಳ ಬಳಿಕ, ಅವರ ವಿರುದ್ಧ ಯಾವುದೇ ವಿಚಾರಣೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿರುವ ಸುಪ್ರೀಂ ಕೋರ್ಟ್, ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ್ದ ಬಿ-ರಿಪೋರ್ಟ್ ಅನ್ನು ಅಂಗೀಕರಿಸಿ ಅವರಿಗೆ ಕ್ಲೀನ್ ಚಿಟ್ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಹಾಗೂ ವಿ. ಮೋಹನ ಅವರೊಂದಿಗೆ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದೆ. 2015ರ ಮಾರ್ಚ್ 11ರಂದು ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ ಸಮನ್ಸ್ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಾಲಯ, ತನಿಖಾ ಸಂಸ್ಥೆ ನಡೆಸಿದ ಪರಿಶೀಲನೆಯಲ್ಲಿ ಆರೋಪ ಸಾಬೀತುಪಡಿಸಲು ಯಾವುದೇ ವಿಶ್ವಾಸಾರ್ಹ ಸಾಕ್ಷ್ಯಾಧಾರ ದೊರೆತಿಲ್ಲ ಎಂಬ ಅಂಶವನ್ನು ಒಪ್ಪಿಕೊಂಡಿದೆ.
ಈ ಪ್ರಕರಣದಲ್ಲಿ ಸಿಬಿಐ ಎರಡು ಪ್ರತ್ಯೇಕ ಬಿ-ರಿಪೋರ್ಟ್‌ಗಳನ್ನು ಸಲ್ಲಿಸಿತ್ತು. ಎರಡೂ ವರದಿಗಳಲ್ಲೂ ಮಾಜಿ ಪ್ರಧಾನಿ ಸೇರಿದಂತೆ ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅಗತ್ಯವಾದ ಸಾಕ್ಷ್ಯಾಧಾರಗಳು ಲಭ್ಯವಿಲ್ಲ ಎಂದು ತಿಳಿಸಲಾಗಿತ್ತು. ಆದಾಗ್ಯೂ, ಆ ವರದಿಗಳನ್ನು ತಿರಸ್ಕರಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯ ಮನಮೋಹನ್ ಸಿಂಗ್ ಸೇರಿದಂತೆ ಐವರು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿತ್ತು. ಇದೇ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಗೆ ಈಗ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡಿದೆ.
ಡಾ. ಮನಮೋಹನ್ ಸಿಂಗ್ ಅವರು ಡಿಸೆಂಬರ್ 2024ರಲ್ಲಿ ನಿಧನರಾಗಿದ್ದರೂ, ಅವರ ವಿರುದ್ಧದ ವಿಚಾರಣಾ ನ್ಯಾಯಾಲಯದ ಆದೇಶದ ಸಿಂಧುತ್ವವನ್ನು ಪರಿಶೀಲಿಸುವುದು ಅಗತ್ಯವೆಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಮಾಜಿ ಪ್ರಧಾನಿಯವರ ನಿಧನದ ಬಳಿಕ ಮೇಲ್ಮನವಿ ತಾಂತ್ರಿಕವಾಗಿ ನಿಷ್ಪರಿಣಾಮಕಾರಿಯಾಗಿದ್ದರೂ, ನ್ಯಾಯಾಲಯದ ಹಿಂದಿನ ಅವಲೋಕನಗಳನ್ನು ಪರಿಶೀಲಿಸಿ ಸರಿಪಡಿಸುವುದು ಅತ್ಯಗತ್ಯ ಎಂದು ವಾದಿಸಿದ್ದರು.
ಪ್ರಕರಣ ಹಿನ್ನಲೆ?
2005ರಲ್ಲಿ ಒಡಿಶಾದ ತಲಬಿರಾ-II ಕಲ್ಲಿದ್ದಲು ಬ್ಲಾಕ್ ಅನ್ನು ಹಿಂಡಾಲ್ಕೊ ಕಂಪನಿಗೆ ಹಂಚಿಕೆ ಮಾಡಲಾಗಿತ್ತು. ಆ ಅವಧಿಯಲ್ಲಿ ಡಾ. ಮನಮೋಹನ್ ಸಿಂಗ್ ಅವರ ಬಳಿ ಪ್ರಧಾನಮಂತ್ರಿ ಹುದ್ದೆಯ ಜೊತೆಗೆ ಕಲ್ಲಿದ್ದಲು ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯೂ ಇತ್ತು. ಈ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಸಿತ್ತು. ಆದರೆ ತನಿಖೆಯ ನಂತರ ಆರೋಪ ಸಾಬೀತುಪಡಿಸಲು ಯಾವುದೇ ಸಾಕ್ಷ್ಯಾಧಾರ ಲಭ್ಯವಾಗಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿತ್ತು.
ಆದರೂ ವಿಶೇಷ ಸಿಬಿಐ ನ್ಯಾಯಾಲಯ ಕ್ರಿಮಿನಲ್ ಸಂಚು ಹಾಗೂ ನಂಬಿಕೆ ದ್ರೋಹ ಸೇರಿದಂತೆ ವಿವಿಧ ಆರೋಪಗಳಡಿ ವಿಚಾರಣೆ ನಡೆಸುವಂತೆ ಆದೇಶಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಆ ಆದೇಶವನ್ನು ರದ್ದುಗೊಳಿಸಿರುವುದರಿಂದ ಸುಮಾರು 11 ವರ್ಷಗಳಿಂದ ಮುಂದುವರಿದಿದ್ದ ಕಾನೂನು ಪ್ರಕ್ರಿಯೆಗೆ ಅಂತಿಮ ತೆರೆ ಬಿದ್ದಿದೆ.
ಯುಪಿಎ ಸರ್ಕಾರದ ಅವಧಿಯಲ್ಲಿ ದೇಶವ್ಯಾಪಿ ಚರ್ಚೆಗೆ ಕಾರಣವಾಗಿದ್ದ ಕಲ್ಲಿದ್ದಲು ಹಂಚಿಕೆ ವಿವಾದದ ಪ್ರಮುಖ ಪ್ರಕರಣಗಳಲ್ಲಿ ಇದೂ ಒಂದಾಗಿತ್ತು. ರಾಜಕೀಯ ಜೀವನದಲ್ಲಿ ಪ್ರಾಮಾಣಿಕತೆಗಾಗಿ ಹೆಸರಾದ ಡಾ. ಮನಮೋಹನ್ ಸಿಂಗ್ ಅವರ ಮೇಲೆ ಉಳಿದಿದ್ದ ಪ್ರಮುಖ ಆರೋಪಗಳಲ್ಲಿ ಒಂದಾಗಿದ್ದ ಈ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ಅಂತಿಮ ಮುಕ್ತಾಯ ದೊರೆತಿದೆ.





