ತಿರುವನಂತಪುರಂ, ಜುಲೈ 28: ಕೇರಳದ ತ್ರಿಶೂರ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಮಹತ್ವದ ಸೌಲಭ್ಯ ಕಲ್ಪಿಸಲಾಗಿದ್ದು, ಆಗಸ್ಟ್ 4ರಿಂದ ಆನ್‌ಲೈನ್ ದರ್ಶನ ಬುಕ್ಕಿಂಗ್ ವ್ಯವಸ್ಥೆ ಪ್ರಾಯೋಗಿಕವಾಗಿ ಆರಂಭವಾಗಲಿದೆ. ಈ ಹೊಸ ವ್ಯವಸ್ಥೆಯ ಮೂಲಕ ಭಕ್ತರು ಮುಂಚಿತವಾಗಿಯೇ ದರ್ಶನದ ಸಮಯವನ್ನು ಕಾಯ್ದಿರಿಸಿಕೊಂಡು, ದೀರ್ಘ ಸಾಲಿನಲ್ಲಿ ಕಾಯದೆ ಸುಲಭವಾಗಿ ದೇವರ ದರ್ಶನ ಪಡೆಯಲು ಸಾಧ್ಯವಾಗಲಿದೆ.
ಗುರುವಾಯೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಎ.ವಿ. ಗೋಪಿನಾಥ್ ಈ ಕುರಿತು ಮಾಹಿತಿ ನೀಡಿದ್ದು, ಆರಂಭಿಕ ಹಂತದಲ್ಲಿ ಈ ಸೇವೆಯನ್ನು ಪ್ರತಿ ವಾರ ಮಂಗಳವಾರ ಮತ್ತು ಗುರುವಾರ ಮಾತ್ರ ಜಾರಿಗೆ ತರಲಾಗುತ್ತದೆ ಎಂದು ತಿಳಿಸಿದ್ದಾರೆ. ಪ್ರಾಯೋಗಿಕ ಹಂತದ ಯಶಸ್ಸಿನ ಬಳಿಕ ವಾರದ ಎಲ್ಲಾ ದಿನಗಳಿಗೂ ಈ ಸೇವೆಯನ್ನು ವಿಸ್ತರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ದಿನಕ್ಕೆ ಎಂಟು ಸಮಯದ ಸ್ಲಾಟ್
ಹೊಸ ವರ್ಚುವಲ್ ಕ್ಯೂ (Virtual Queue) ವ್ಯವಸ್ಥೆಯಡಿ ದಿನಕ್ಕೆ ಎಂಟು ಸಮಯದ ಸ್ಲಾಟ್‌ಗಳನ್ನು ನಿಗದಿಪಡಿಸಲಾಗಿದೆ. ಪ್ರತಿ ಒಂದು ಗಂಟೆಯ ಸ್ಲಾಟ್‌ನಲ್ಲಿ ಸುಮಾರು 300 ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ದಿನಕ್ಕೆ ಒಟ್ಟು 2,400 ಭಕ್ತರು ಆನ್‌ಲೈನ್ ಬುಕ್ಕಿಂಗ್ ಮೂಲಕ ದರ್ಶನ ಪಡೆಯಲು ಸಾಧ್ಯವಾಗಲಿದೆ.
ಭಕ್ತರು ತಮ್ಮ ಅನುಕೂಲಕ್ಕೆ ತಕ್ಕ ಸಮಯವನ್ನು ಮುಂಚಿತವಾಗಿ ಆಯ್ಕೆ ಮಾಡಿಕೊಂಡು ದೇವಾಲಯಕ್ಕೆ ಭೇಟಿ ನೀಡಬಹುದಾಗಿದೆ. ಇದರಿಂದ ದೇವಾಲಯದ ಆವರಣದಲ್ಲಿ ಉಂಟಾಗುವ ಜನಸಂದಣಿ, ದೀರ್ಘ ಸಾಲು ಹಾಗೂ ಕಾಯುವ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವುದು ದೇವಸ್ವಂ ಮಂಡಳಿಯ ಉದ್ದೇಶವಾಗಿದೆ.
ಈ ವ್ಯವಸ್ಥೆಯನ್ನು ದೇವಸ್ವಂ ನಿರ್ವಹಣಾ ಸಮಿತಿಯ ನಿರ್ಧಾರ ಹಾಗೂ ಕೇರಳ ಹೈಕೋರ್ಟ್‌ನ ನಿರ್ದೇಶನದಂತೆ ಜಾರಿಗೆ ತರಲಾಗುತ್ತಿದೆ. ಭಕ್ತರಿಗೆ ಹೆಚ್ಚು ಸುಗಮ, ಶಿಸ್ತುಬದ್ಧ ಹಾಗೂ ತೊಂದರೆಯಿಲ್ಲದ ದರ್ಶನದ ಅನುಭವ ಕಲ್ಪಿಸುವುದೇ ಇದರ ಪ್ರಮುಖ ಗುರಿಯಾಗಿದೆ.
ಒಂದು ಆನ್‌ಲೈನ್ ಬುಕ್ಕಿಂಗ್‌ನಲ್ಲಿ ಎಷ್ಟು ಭಕ್ತರು ಇರಬಹುದು
ಭಕ್ತರು ಗುರುವಾಯೂರು ದೇವಸ್ವಂ ಮಂಡಳಿಯ ಅಧಿಕೃತ ವೆಬ್‌ಸೈಟ್ ಮೂಲಕ ತಮ್ಮ ದರ್ಶನದ ಸಮಯವನ್ನು ಕಾಯ್ದಿರಿಸಿಕೊಳ್ಳಬಹುದು. ಈ ಸೇವೆಯ ಮೂಲಕ ಮುಂಚಿತವಾಗಿ ಸಮಯ ನಿಗದಿಪಡಿಸಿಕೊಂಡು ದೇವಸ್ಥಾನಕ್ಕೆ ಭೇಟಿ ನೀಡಲು ಅವಕಾಶ ಸಿಗಲಿದೆ. ಒಂದು ಆನ್‌ಲೈನ್ ಬುಕ್ಕಿಂಗ್‌ನಲ್ಲಿ ಗರಿಷ್ಠ ಆರು ಭಕ್ತರನ್ನು ಸೇರಿಸಬಹುದಾಗಿದ್ದು, ಕುಟುಂಬ ಅಥವಾ ಗುಂಪಾಗಿ ದೇವಸ್ಥಾನಕ್ಕೆ ಭೇಟಿ ನೀಡುವವರಿಗೆ ಈ ವ್ಯವಸ್ಥೆ ಹೆಚ್ಚು ಅನುಕೂಲಕರವಾಗಲಿದೆ.
ತ್ರಿಶೂರ್ ಜಿಲ್ಲೆಯಲ್ಲಿರುವ ಗುರುವಾಯೂರು ಶ್ರೀಕೃಷ್ಣ ದೇವಾಲಯ ದೇಶದ ಪ್ರಮುಖ ಹಿಂದೂ ಯಾತ್ರಾ ಕ್ಷೇತ್ರಗಳಲ್ಲಿ ಒಂದಾಗಿದೆ. ಇಲ್ಲಿ ಬಾಲಕೃಷ್ಣನ ರೂಪದಲ್ಲಿರುವ ಗುರುವಾಯೂರಪ್ಪನ ಆರಾಧನೆ ನಡೆಯುತ್ತದೆ. ಪ್ರತಿದಿನ ಸಾವಿರಾರು ಭಕ್ತರು ದೇಶದ ವಿವಿಧ ಭಾಗಗಳಿಂದ ದೇವರ ದರ್ಶನಕ್ಕಾಗಿ ಆಗಮಿಸುತ್ತಾರೆ. ದೇವಾಲಯದಲ್ಲಿ ಬೆಳಿಗ್ಗೆ 3.00ರಿಂದ ಮಧ್ಯಾಹ್ನ 12.30ರವರೆಗೆ ಹಾಗೂ ಸಂಜೆ 4.30ರಿಂದ ರಾತ್ರಿ 9.15ರವರೆಗೆ ದರ್ಶನಕ್ಕೆ ಅವಕಾಶವಿದೆ. ಸಾಂಪ್ರದಾಯಿಕ ಉಡುಪು ಕಡ್ಡಾಯವಾಗಿದ್ದು, ಹಿಂದೂ ಭಕ್ತರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.





