ರಾಮ ಶಾಮ ಭಾಮ ಖ್ಯಾತಿಯ ಬಹುಭಾಷಾ ನಟಿ ಊರ್ವಶಿ ಕನ್ನಡಕ್ಕೆ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್‌ಗೂ ಮುನ್ನ ಅಣ್ಣಾವ್ರ ಸ್ಮಾರಕಕ್ಕೆ ತೆರಳಿ, ಹಳೆಯ ನೆನಪುಗಳನ್ನ ಮೆಲುಕು ಹಾಕಿದ ಊರ್ವಶಿ, ಅಪ್ಪು ಸ್ಮಾರಕಕ್ಕೆ ಕಾಲಿಡಲ್ಲ ಅಂದಿದ್ದಾರೆ. ಇಷ್ಟಕ್ಕೂ ಈ ಹಿರಿಯನಟಿ ಇಂಥದ್ದೊಂದು ಸ್ಟೇಟ್ಮೆಂಟ್ ನೀಡಿದ್ಯಾಕೆ..? ಅಂಥದ್ದೇನಾಯ್ತು ಅಂತೀರಾ..? ನೀವೇ ನೋಡಿ.
- ಅಪ್ಪು ಸ್ಮಾರಕಕ್ಕೆ ಕಾಲಿಡಲ್ಲ ಅಂದರೇಕೆ ಹಿರಿಯನಟಿ ಊರ್ವಶಿ?
- ದಶಕದ ನಂತ್ರ ಕರುನಾಡಿಗೆ ಕಂಬ್ಯಾಕ್.. ಅಣ್ಣಾವ್ರು-ಅಂಬಿ ನೆನಪು
- ಓಂ ಪ್ರಕಾಶ್ ರಾವ್ ಕ್ವಾಟ್ಲೆಗೆ ಊರ್ವಶಿ ಕೊಟ್ಟೇಬಿಟ್ರು ಪಂಚ್..!
- ‘ಬುಲ್ಲಿ’ ಸೆಟ್ ಹಂಗಾಮ.. ಭುವನ್-ಹರ್ಷಿಕಾ ಹರ್ಷೋದ್ಘಾರ
ಬಹುಭಾಷಾ ನಟಿ ಊರ್ವಶಿ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ರೀ-ಎಂಟ್ರಿ ಕೊಟ್ಟಿದ್ದಾರೆ. ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ನಾಲ್ಕು ದಶಕಗಳಿಂದ ಕಮಾಲ್ ಮಾಡಿರೋ ಈ ಹಿರಿಯ ನಟಿ, ಶ್ರಾವಣ ಬಂತು ಅಂತ ಅಣ್ಣಾವ್ರ ಜೊತೆ ಗಾಂಧಿನಗರಕ್ಕೆ ಹೆಜ್ಜೆ ಇಟ್ಟವರು. ವಿಷ್ಣುದಾದ, ಅಂಬಿ ಅಣ್ಣ, ಅನಂತ್ ನಾಗ್, ರವಿಚಂದ್ರನ್ ರಿಂದ ಹಿಡಿದು ಕಾಮಿಡಿ ಕಿಂಗ್ ಕೋಮಲ್ ವರೆಗೂ ನಟಿಸಿ ಧೂಳೆಬ್ಬಿಸಿದ್ದ ಊರ್ವಶಿ, ಈಗ ತಮ್ಮ ಕೆರಿಯರ್‌ನ 729ನೇ ಮೈಲಿಗಲ್ಲಿನ ಸಿನಿಮಾ ಬುಲ್ಲಿ ಮೂಲಕ ಮತ್ತೆ ಕರುನಾಡಿನಲ್ಲಿ ನಗುವಿನ ಅಲೆ ಎಬ್ಬಿಸಲು ಬಂದಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ನಡೆದ ಬುಲ್ಲಿ ಶೂಟಿಂಗ್ ಹಾಗೂ ಪ್ರೆಸ್‌ಮೀಟ್‌ಗೆ ತೆರಳುವ ಮುನ್ನ, ಅಣ್ಣಾವ್ರು, ಪಾರ್ವತಮ್ಮ ಹಾಗೂ ಅಪ್ಪು ಸ್ಮಾರಕಕ್ಕೆ ಭಾವಪೂರ್ಣ ನಮನ ಸಲ್ಲಿಸಿದ ಊರ್ವಶಿ, ಅಪ್ಪು ನನಗೇ ತುಂಬಾ ಕ್ಲೋಸ್, ಅವನ ಸ್ಮಾರಕ ನೋಡಿದ್ರೆ ನನಗೆ ಕಣ್ಣೀರು ಬರುತ್ತೆ, ನಾನು ಒಳಗಡೆ ಬರಲ್ಲ ಎಂದು ಕಣ್ಣೀರಾದ ಕ್ಷಣ ಎಲ್ಲರ ಕಣ್ಣಂಚನ್ನು ಒದ್ದೆ ಮಾಡಿತು.
ಭುವನ್ ಪೊನ್ನಣ್ಣ ಅಭಿನಯಿಸುತ್ತಿರುವ ಬುಲ್ಲಿ ಚಿತ್ರದ ಶೀರ್ಷಿಕೆ ಕಂಠೀರವ ಸ್ಟುಡಿಯೋದಲ್ಲಿ ಅನಾವರಣಗೊಂಡಿದ್ದು, ಬುಲ್ಲಿ ಚಿತ್ರಕ್ಕೆ ಅತಿ ದೊಡ್ಡ ಸರ್ಪ್ರೈಸ್ ಎಂದರೆ ಊರ್ವಶಿ ಅವರ ಪುತ್ರಿ ತೇಜಾ ಲಕ್ಷ್ಮಿ ಕೂಡ ಈ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ತಾಯಿಯಂತೆ ಕನ್ನಡದಲ್ಲೇ ಮೊದಲ ಸಿನಿಮಾಗೆ ಬಣ್ಣ ಹಚ್ಚುತಿದ್ದಾರೆ. ರಾಜ್ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಜೊತೆ ನಟಿಸಿದ್ದ ನೆನಪುಗಳನ್ನು ಮೆಲುಕು ಹಾಕಿದ ಊರ್ವಶಿ, ನನಗೂ ಕನ್ನಡ ಇಂಡಸ್ಟ್ರಿಗೂ ದೈವಿಕ ಸಂಬಂಧವಿದೆ ಎಂದು ಹೇಳುತ್ತಾ ಹಳೆಯ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು.
ಅನೂಪ್ ಅಂಟೋನಿ ನಿರ್ದೇಶನದ ಈ ಡಾರ್ಕ್ ಕಾಮಿಡಿ ಸಬ್ಜೆಕ್ಟ್‌ನಲ್ಲಿ ಭುವನ್ ಪೊನ್ನಣ್ಣ ಯೂಸ್‌ಲೆಸ್ ಜೆನ್ ಜಿ ಬಲರಾಮ ಎಂಬ ಪಾತ್ರದಲ್ಲಿ, ಊರ್ವಶಿ ಅವರ ಮಗನಾಗಿ ಕಮಾಲ್ ಮಾಡಲಿದ್ದಾರೆ.ಆರು ವರ್ಷಗಳ ಹಿಂದೆ ರೈಲಿನಲ್ಲಿ ಪ್ರಯಾಣಿಸುವಾಗ ಹರ್ಷಿಕಾಗೆ ಊರ್ವಶಿ ಮೇಡಂ ಜೊತೆ ಆಕ್ಟ್ ಮಾಡಬೇಕು ಅಂತ ಹೇಳಿದ್ದೆ. ಒಟ್ಟು ಒಂದು ವರ್ಷದ ಕಠಿಣ ಪ್ರಯತ್ನದ ನಂತರ ಆ ಕನಸು ಇವತ್ತು ನನಸಾಗಿದೆ ಎಂದು ಭುವನ್ ಪೊನ್ನಣ್ಣ ತಮ್ಮ ಹರ್ಷೋದ್ಘಾರವನ್ನು ಹಂಚಿಕೊಂಡಿದ್ದಾರೆ.
ಇನ್ನು ಓಂ ಪ್ರಕಾಶ್ ರಾವ್ ಕಾಮಿಡಿ ಕ್ವಾಟ್ಲೆ ಮತ್ತು ಊರ್ವಶಿ ಕೊಟ್ಟ ಪಂಚ್ ಪ್ರೆಸ್‌ಮೀಟ್‌ನ ಹೈಲೈಟ್ ಆಗಿತ್ತು. ಎಸ್, ಹಿರಿಯ ನಿರ್ದೇಶಕ-ನಟ ಓಂ ಪ್ರಕಾಶ್ ರಾವ್ ತಮ್ಮದೇ ಶೈಲಿಯಲ್ಲಿ ನಗೆಯ ಅಲೆ ಎಬ್ಬಿಸಿ, ನಾನು ಒಳ್ಳೆ ಡೈರೆಕ್ಟರ್ ಹೊರತು ಗ್ರೇಟ್ ಆರ್ಟಿಸ್ಟ್ ಅಲ್ಲ. ಆದರೆ ರಾಮ ಶಾಮ ಭಾಮಾದಲ್ಲಿ ಅದ್ಭುತವಾಗಿ ನಟಿಸಿದ್ದ ಊರ್ವಶಿ ಜೊತೆ ಆಕ್ಟ್ ಮಾಡಿದ ಮೇಲೆಯೇ ನನ್ನಲ್ಲೂ ಒಬ್ಬ ಆರ್ಟಿಸ್ಟ್ ಇದ್ದಾನೆ ಅಂತ ಗೊತ್ತಾಗಿದ್ದು. ಇದರಲ್ಲಿ ಬಡ್ಡಿ ವ್ಯಾಪಾರಿ ಪಾತ್ರ ಮಾಡಿದ್ದು, ಊರ್ವಶಿ ಅವರಿಂದ ಸರಿಯಾಗಿ ಕ್ಯಾಕರಿಸಿ ಉಗಿಸಿಕೊಂಡಿದ್ದೇನೆ ಎಂದು ಪ್ರೆಸ್‌ಮೀಟ್‌ನ ವಾತಾವರಣವನ್ನು ಸಖತ್ ಕಲರ್‌ಫುಲ್ ಮಾಡಿದರು.
ಹರ್ಷಿಕಾ ಪೊನ್ನಣ್ಣ ಅವರ ಮುತುವರ್ಜಿಯಿಂದ ಒಂದಾದ ಈ ಮಾಸ್ ಪ್ರಾಜೆಕ್ಟ್ ಈಗ ಗಾಂಧಿನಗರದ ಹಾಟ್ ಟಾಪಿಕ್ ಆಗಿದೆ. ಇನ್ನು ಈ ಚಿತ್ರದಲ್ಲಿ ಹುಲಿ ಕಾರ್ತಿಕ್, ಬಾಲ ಕಲಾವಿದ ಆರ್ಯ ಸ್ವರೂಪ್ ಕೂಡ ಅಭಿನಯಿಸಿದ್ದಾರೆ. ಮಲಯಾಳಂ ಶೂಟಿಂಗ್ ಮುಗಿಸಿ, ಕನ್ನಡಿಗರ ಮೇಲಿರುವ ಪ್ರೀತಿಗಾಗಿ ಕಂಬ್ಯಾಕ್ ಮಾಡಿರುವ ಊರ್ವಶಿ ಅವರ ಬುಲ್ಲಿ ಸಿನಿಮಾ ಪಕ್ಕಾ ಎಂಟರ್ಟೈನ್ಮೆಂಟ್ ವೈಬ್‌ನಲ್ಲಿ ಶೂಟಿಂಗ್ ಆರಂಭಿಸಿದೆ. ಭುವನ್ ಪೊನ್ನಣ್ಣ, ತೇಜಾ ಲಕ್ಷ್ಮಿ, ಓಂ ಪ್ರಕಾಶ್ ರಾವ್ ಹಾಗೂ ನಟಿ ಊರ್ವಶಿ ಅವರ ಈ ಕ್ರೇಜಿ ಕಾಂಬಿನೇಷನ್ ಗಾಂಧಿನಗರದ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆಯುತ್ತಾ ಕಾದು ನೋಡಬೇಕು.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





