ಮದುವೆಯ ಆಮೀಷವೊಡ್ಡಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಭಾರತೀಯ ಕ್ರಿಕೆಟಿಗ ಯಶ್ ದಯಾಳ್ ಅವರಿಗೆ ಅಲಹಾಬಾದ್ ಹೈಕೋರ್ಟ್ ಮಹತ್ವದ ಮಧ್ಯಂತರ ರಿಲೀಫ್ ನೀಡಿದೆ. ಗಾಜಿಯಾಬಾದ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್ ಹಾಗೂ ಪ್ರಕರಣದ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ಇಂದು ತಾತ್ಕಾಲಿಕ ತಡೆ ನೀಡಿದೆ.
ನ್ಯಾಯಮೂರ್ತಿ ಸಂಜಯ್ ಕುಮಾರ್ ಪಚೋರಿ ಅವರ ಏಕಸದಸ್ಯ ಪೀಠ, ಪೊಲೀಸ್ ಸಲ್ಲಿಸಿದ್ದ ಚಾರ್ಜ್‌ಶೀಟ್ ಹಾಗೂ ವಿಚಾರಣಾ ನ್ಯಾಯಾಲಯದ ಕಾಗ್ನಿಜನ್ಸ್ ಆದೇಶವನ್ನು ಪ್ರಶ್ನಿಸಿ ಯಶ್ ದಯಾಳ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದೆ. ಇದರೊಂದಿಗೆ, ಪ್ರಕರಣದ ಮುಂದಿನ ವಿಚಾರಣೆ ಕುರಿತು ಅಂತಿಮ ನಿರ್ಧಾರವಾಗುವವರೆಗೆ ಕೆಳ ನ್ಯಾಯಾಲಯದ ಪ್ರಕ್ರಿಯೆ ಸ್ಥಗಿತಗೊಂಡಿದೆ.
ಘಟನೆ ಏನು?
ಈ ಪ್ರಕರಣವು ಮಹಿಳೆಯೊಬ್ಬರು ನೀಡಿದ್ದ ದೂರಿನ ಆಧಾರದ ಮೇಲೆ ದಾಖಲಾಗಿತ್ತು. ದೂರಿನಲ್ಲಿ, ಯಶ್ ದಯಾಳ್ ಮದುವೆಯಾಗುವುದಾಗಿ ಭರವಸೆ ನೀಡಿ ಸುಮಾರು ಐದು ವರ್ಷಗಳ ಕಾಲ ಸಂಬಂಧ ಹೊಂದಿದ್ದರು. ನಂತರ ಮದುವೆಗೆ ನಿರಾಕರಿಸಿ ತನ್ನ ಮೇಲೆ ದೈಹಿಕ ಹಾಗೂ ಮಾನಸಿಕ ಹಿಂಸೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ದೂರಿನ ಆಧಾರದ ಮೇಲೆ ಗಾಜಿಯಾಬಾದ್ ಪೊಲೀಸರು 2025ರ ಜುಲೈನಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು.
ಈ ಹಿಂದೆ 2025ರ ಜುಲೈ 15ರಂದು ಕೂಡ ಯಶ್ ದಯಾಳ್ ಸಲ್ಲಿಸಿದ್ದ ಮತ್ತೊಂದು ಅರ್ಜಿಯ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್, ಅವರ ಬಂಧನಕ್ಕೆ ಮಧ್ಯಂತರ ತಡೆ ನೀಡಿತ್ತು. ಬಳಿಕ ತನಿಖೆ ಪೂರ್ಣಗೊಂಡು ಚಾರ್ಜ್‌ಶೀಟ್ ಸಲ್ಲಿಕೆಯಾದ ನಂತರ, ಅದನ್ನೂ ಹಾಗೂ ವಿಚಾರಣಾ ನ್ಯಾಯಾಲಯದ ಕ್ರಮವನ್ನೂ ಪ್ರಶ್ನಿಸಿ ಅವರು ಹೊಸ ಅರ್ಜಿ ಸಲ್ಲಿಸಿದ್ದರು.
ತಮ್ಮ ಅರ್ಜಿಯಲ್ಲಿ ಯಶ್ ದಯಾಳ್, ತಮ್ಮ ಮತ್ತು ದೂರುದಾರರ ನಡುವಿನ ಸಂಬಂಧವು ಪರಸ್ಪರ ಸಮ್ಮತಿಯ ಆಧಾರದ ಮೇಲಿತ್ತು ಎಂದು ವಾದಿಸಿದ್ದಾರೆ. 2021ರಲ್ಲಿ ಇಬ್ಬರ ನಡುವೆ ದೈಹಿಕ ಸಂಬಂಧ ನಡೆದಿದ್ದನ್ನು ಒಪ್ಪಿಕೊಂಡಿರುವ ಅವರು, ಆ ಸಮಯದಲ್ಲಿ ಮದುವೆಯ ಭರವಸೆ ನೀಡಲಾಗಿರಲಿಲ್ಲ ಎಂದು ತಿಳಿಸಿದ್ದಾರೆ. ಮದುವೆ ಕುರಿತು ಚರ್ಚೆಗಳು ನಂತರದ ಹಂತದಲ್ಲಿ ನಡೆದಿದ್ದವು ಎಂದು ಅವರು ಹೇಳಿದ್ದಾರೆ.
ಅಲ್ಲದೆ, ದೂರುದಾರರ ಹೇಳಿಕೆ ಅಥವಾ ಸಾಕ್ಷಿದಾರರ ಹೇಳಿಕೆಗಳಲ್ಲಿ ಆರಂಭದಲ್ಲೇ ಮದುವೆಯ ಭರವಸೆ ನೀಡಿದ್ದ ಬಗ್ಗೆ ಸ್ಪಷ್ಟ ಉಲ್ಲೇಖ ಇಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಹೆಸರು ಗಳಿಸಿದ ಬಳಿಕ ಹಣ ಸುಲಿಗೆ ಮಾಡುವ ಉದ್ದೇಶದಿಂದ ಈ ಪ್ರಕರಣ ದಾಖಲಿಸಲಾಗಿದೆ ಎಂಬ ಆರೋಪವನ್ನೂ ಯಶ್ ದಯಾಳ್ ಮಾಡಿದ್ದಾರೆ.





