ಇಂದಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಸಾಮಾನ್ಯ. ಆದರೆ, ಫಿಟ್ ಆಗಿರಲು ಜಿಮ್ ಸೇರಿದ ಪತ್ನಿಯ ನಿರ್ಧಾರವೇ ಆಕೆಯ ಸಾವಿಗೆ ಕಾರಣವಾದ ದಾರುಣ ಘಟನೆಯೊಂದು ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದಿದೆ. ಪತ್ನಿ ಸುಂದರವಾಗಿ ಕಾಣುವುದನ್ನು ಸಹಿಸದ ಪತಿ, ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿ ವಿಕೃತಿ ಮೆರೆದಿದ್ದಾನೆ.
ಜಿಮ್ ವಿಚಾರಕ್ಕೆ ಶುರುವಾದ ಕಿರಿಕ್ :
ಮೊರಾದಾಬಾದ್ನ ಕತ್ಘರ್ ಪ್ರದೇಶದ ನಿವಾಸಿ, ಗುಜುರಿ ವ್ಯಾಪಾರಿ ಶೋಭಿತ್ ಗುಪ್ತಾ ಮತ್ತು ಪೂನಂ ಗುಪ್ತಾ ದಂಪತಿಗೆ ಮದುವೆಯಾಗಿ 10 ವರ್ಷಗಳಾಗಿತ್ತು. ಇತ್ತೀಚೆಗೆ ಪೂನಂ ತಮ್ಮ ದೇಹದ ಸೌಂದರ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳಲು ಜಿಮ್ಗೆ ಸೇರಿದ್ದರು. ಆದರೆ, ಹೆಂಡತಿ ಜಿಮ್ಗೆ ಹೋಗುವುದು ಶೋಭಿತ್ಗೆ ಇಷ್ಟವಿರಲಿಲ್ಲ. ಪತ್ನಿ ಸುಂದರವಾಗಿ ಕಾಣಲು ಆರಂಭಿಸಿದರೆ ಬೇರೆಯವರ ಕಣ್ಣು ಆಕೆಯ ಮೇಲೆ ಬೀಳಬಹುದು ಎಂಬ ಕೀಳರಿಮೆ ಮತ್ತು ಅನುಮಾನ ಶೋಭಿತ್ನನ್ನು ಕಾಡುತ್ತಿತ್ತು.
ಶವದ ಪಕ್ಕ 7 ಗಂಟೆ ಕುಳಿತಿದ್ದ ಆರೋಪಿ!
ಜಿಮ್ಗೆ ಹೋಗದಂತೆ ಶೋಭಿತ್ ಎಷ್ಟೇ ಎಚ್ಚರಿಕೆ ನೀಡಿದರೂ ಪೂನಂ ಅದನ್ನು ಧಿಕ್ಕರಿಸಿದ್ದರು. ಇದೇ ವಿಚಾರವಾಗಿ ದಂಪತಿಗಳ ನಡುವೆ ಪ್ರತಿದಿನ ಗಲಾಟೆ ನಡೆಯುತ್ತಿತ್ತು. ಘಟನೆಯ ದಿನ ಜಗಳ ವಿಕೋಪಕ್ಕೆ ತಿರುಗಿ ಆಕ್ರೋಶಗೊಂಡ ಶೋಭಿತ್, ಪೂನಂಳನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ. ಅಷ್ಟೇ ಅಲ್ಲದೆ, ಕೊಲೆ ಮಾಡಿದ ಬಳಿಕ ಸುಮಾರು 7 ಗಂಟೆಗಳ ಕಾಲ ಆಕೆಯ ಶವದ ಪಕ್ಕದಲ್ಲೇ ಕುಳಿತು ಅಮಾನವೀಯವಾಗಿ ವರ್ತಿಸಿದ್ದಾನೆ.
ಸದ್ಯ ಪೊಲೀಸರು ಆರೋಪಿ ಶೋಭಿತ್ ಗುಪ್ತಾನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸುಂದರವಾಗಿ ಕಾಣಬೇಕೆಂಬ ಆಸೆ ಹೊತ್ತಿದ್ದ ಹೆಣ್ಣುಮಗಳೊಬ್ಬಳು ತನ್ನ ಪತಿಯ ಸಂಶಯದ ಭೂತಕ್ಕೆ ಬಲಿಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.





