ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ (Delimitation) ವಿಚಾರ ಇದೀಗ ಭಾರೀ ರಾಜಕೀಯ ವಾಗ್ಯುದ್ಧಕ್ಕೆ ವೇದಿಕೆಯಾಗಿದೆ. ಹಾಗೆ ನೋಡಿದ್ರೆ ಇದು ಅತ್ಯಂತ ಸೂಕ್ಷ್ಮ ಹಾಗೂ ಸಂವೇದನಾಶೀಲ ವಿಷಯ..! ಜನಸಂಖ್ಯಾ ಬೆಳವಣಿಗೆ, ರಾಜಕೀಯ ಪ್ರಾತಿನಿಧ್ಯ ಮತ್ತು ರಾಜ್ಯಗಳ ನಡುವಿನ ಸಮತೋಲನದ ಮೇಲೆ ಇದು ನೇರ ಪ್ರಭಾವ ಬೀರುತ್ತದೆ. ಕೊನೆಯ ಬಾರಿ ಪುನರ್‌ವಿಂಗಡಣೆ ನಡೆದಿದ್ದು 1971ರ ಜನಗಣತಿಯ ನಂತರ.. ಇದೀಗ 2026ಕ್ಕೆ ಮತ್ತೆ ಪುನರ್ ವಿಂಗಡಣೆಗೆ ವೇದಿಕೆ ಸಜ್ಜಾಗಿದೆ. ಆದರೆ, ಈ ಪುನರ್ ವಿಂಗಡಣೆ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು? ಲಾಭ ಮತ್ತು ನಷ್ಟಗಳೇನು? ಈ ಕುರಿತ ಸಮಗ್ರ ವಿವರ ಇಂತಿದೆ..
ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಲಾಭವೇನು?
1. ಅಭಿವೃದ್ಧಿ ಹೊಂದಿದ ನಗರಗಳಿಗೆ ಅನುಕೂಲ: ದಕ್ಷಿಣ ಭಾರತದ ರಾಜ್ಯಗಳಲ್ಲಿ ಇರುವ ನಗರಗಳ ಪೈಕಿ ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್ ನಗರಗಳು ಜನಸಂಖ್ಯೆಯಲ್ಲಿ ಸಾಕಷ್ಟು ಬೆಳೆದಿವೆ. ಹೊಸದಾಗಿ ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ಆದಾಗ ಈ ನಗರಗಳಿಗೆ ಹೆಚ್ಚು ಲೋಕಸಭಾ ಸೀಟುಗಳು ಸಿಗಬಹುದು. ಈ ಮೂಲಕ ನಗರಾಭಿವೃದ್ಧಿ, ಮೂಲಸೌಕರ್ಯ ಮತ್ತು ಸ್ಥಳೀಯ ಸಮಸ್ಯೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲು ಸಹಾಯಕವಾಗಲಿದೆ.
2. ಯುವ ಜನತೆಗೆ ಪ್ರಾತಿನಿಧ್ಯ: ದಕ್ಷಿಣ ಭಾರತದಲ್ಲಿ ಯುವ ಜನಸಂಖ್ಯೆ ಹೆಚ್ಚಿದೆ. ಹೊಸ ಕ್ಷೇತ್ರಗಳು ಸೃಷ್ಟಿಯಾದರೆ ಯುವ ನೇತೃತ್ವಕ್ಕೆ ಅವಕಾಶ ನೀಡಬಹುದು. ಈ ಮೂಲಕ, ರಾಜಕೀಯದಲ್ಲಿ ಹೊಸ ದೃಷ್ಟಿಕೋನಗಳನ್ನು ತರಬಹುದು.
3. ರಾಜಕೀಯ ಸ್ಪರ್ಧೆ ಹೆಚ್ಚಳ: ಹೊಸ ಕ್ಷೇತ್ರಗಳು ಹೊಸ ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸುವ ಸಾಧ್ಯತೆಯನ್ನು ಹೆಚ್ಚಿಸಬಹುದು. ಈ ಮೂಲಕ ಪ್ರಜಾಪ್ರಭುತ್ವವನ್ನು ಬಲ ಪಡಿಸಲು ಸಹಾಯಕವಾಗಲಿದೆ.
ನಷ್ಟಗಳೇನು? ದಕ್ಷಿಣ ಭಾರತದ ರಾಜ್ಯಗಳ ಆತಂಕಗಳೇನು?
1. ರಾಜಕೀಯ ಪ್ರಾತಿನಿಧ್ಯದ ಕ್ಷೀಣತೆ: ದಕ್ಷಿಣ ಭಾರತದ ರಾಜ್ಯಗಳು ಜನಸಂಖ್ಯಾ ನಿಯಂತ್ರಣದಲ್ಲಿ ಯಶಸ್ವಿಯಾಗಿವೆ. 2011ರ ಜನಗಣತಿ ಪ್ರಕಾರ, ಉತ್ತರ ಭಾರತದ ರಾಜ್ಯಗಳ ಜನಸಂಖ್ಯಾ ವೃದ್ಧಿ ದರ ಹೆಚ್ಚು. ಹೀಗಾಗಿ, ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯು ಜನಸಂಖ್ಯೆಯ ಆಧಾರದ ಮೇಲೆ ನಡೆದರೆ ದಕ್ಷಿಣ ಭಾರತಕ್ಕೆ ಸಿಗುವ ಸೀಟುಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ. ಉದಾಹರಣೆಗೆ, ತಮಿಳುನಾಡಿನಲ್ಲಿ ಸದ್ಯ 39 ಲೋಕಸಭಾ ಸ್ಥಾನಗಳಿವೆ. ಕೇರಳದಲ್ಲಿ 20 ಸ್ಥಾನಗಳಿವೆ. ಈ ರಾಜ್ಯಗಳು ಗಮನಾರ್ಹ ನಷ್ಟವನ್ನು ಎದುರಿಸಬಹುದು.
2. ಆರ್ಥಿಕ-ರಾಜಕೀಯ ಅಸಮತೋಲನ: ದಕ್ಷಿಣ ಭಾರತದ ರಾಜ್ಯಗಳು ಭಾರತದ GDPಗೆ 30% ಕೊಡುಗೆ ನೀಡುತ್ತಿವೆ. ಇಷ್ಟಾದರೂ ಸಂಸತ್ತಿನಲ್ಲಿ ಅವುಗಳ ಪ್ರಾತಿನಿಧ್ಯ ಕುಗ್ಗಿ ಹೋದರೆ ರಾಷ್ಟ್ರೀಯ ನೀತಿ ರೂಪಿಸುವ ವೇಳೆ ದಕ್ಷಿಣ ಭಾರತದ ರಾಜ್ಯಗಳ ಧ್ವನಿ ದುರ್ಬಲವಾಗುತ್ತದೆ. ಈ ಮೂಲಕ ತೆರಿಗೆ ಹಂಚಿಕೆ, ಬಜೆಟ್ ಹಂಚಿಕೆ ಮತ್ತು ಯೋಜನೆಗಳ ಹಂಚಿಕೆ ವೇಳೆ ಅನ್ಯಾಯ ಆಗುವ ಭೀತಿ ಇದೆ.
3. ಭಾಷಾ ವೈವಿಧ್ಯಕ್ಕೂ ಧಕ್ಕೆ: ಹಿಂದಿ-ಪ್ರಾಬಲ್ಯದ ರಾಜ್ಯಗಳು ಸಂಸತ್ತಿನಲ್ಲಿ ಪ್ರಾಬಲ್ಯ ಪಡೆದರೆ, ದಕ್ಷಿಣ ಭಾರತದ ಭಾಷೆಗಳು, ಸಂಸ್ಕೃತಿ, ಮತ್ತು ಪ್ರಾದೇಶಿಕ ಅಗತ್ಯಗಳಿಗೆ ಆದ್ಯತೆ ಸಿಗೋದಿಲ್ಲವೇ ಎಂಬ ಭೀತಿಯೂ ಇದೆ.
4. ರಾಜ್ಯಗಳ ನಡುವಿನ ಒಡಕು: ಉತ್ತರ ಹಾಗೂ ದಕ್ಷಿಣ ಭಾರತದ ರಾಜ್ಯಗಳ ನಡುವೆ ಪ್ರಾತಿನಿಧ್ಯದ ಅಸಮಾನತೆ ಹೆಚ್ಚಾದರೆ ರಾಜ್ಯಗಳ ನಡುವಿನ ಸಂಘರ್ಷ ಹೆಚ್ಚಬಹುದು. ಉದಾಹರಣೆಗೆ, ಕೇಂದ್ರದ ಸಂಪನ್ಮೂಲ ಹಂಚಿಕೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳು ತಮ್ಮನ್ನು “ನಿರ್ಲಕ್ಷಿಸಲಾಗಿದೆ” ಎಂದು ಭಾವಿಸಬಹುದು.
ಈ ಸಮಸ್ಯೆಗೆ ಪರಿಹಾರವೇನು?
1. ಜನಸಂಖ್ಯೆ ಮಾತ್ರವಲ್ಲ, ಇತರ ಅಂಶಗಳನ್ನು ಪರಿಗಣಿಸಿ: ಪುನರ್ ವಿಂಗಡಣೆಯ ಸೂತ್ರದಲ್ಲಿ ಜನಸಂಖ್ಯೆಯ ಜೊತೆಗೆ GDP, ಮಾನವಾಭಿವೃದ್ಧಿ ಸೂಚ್ಯಂಕ (HDI), ಮತ್ತು ಭೂ ವಿಸ್ತೀರ್ಣವನ್ನು ಸೇರಿಸಬೇಕು ಎಂಬ ಪ್ರಸ್ತಾಪಗಳಿವೆ.
2. ಸಂವಿಧಾನಕ್ಕೆ ತಿದ್ದುಪಡಿ ತನ್ನಿ: ರಾಜ್ಯಗಳ ನಡುವಿನ ಪ್ರಾತಿನಿಧ್ಯ ಸಮತೋಲನವನ್ನು ಕಾಪಾಡಲು, ಲೋಕಸಭಾ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವುದು ಒಂದು ಪರ್ಯಾಯ ಮಾರ್ಗ.
3. ಕೇಂದ್ರದ ಮೇಲಿನ ಅವಲಂಬನೆ ಕಡಿಮೆಯಾಗಲಿ: ರಾಜ್ಯಗಳಿಗೆ ಹೆಚ್ಚು ಸ್ವಾಯತ್ತತೆ ನೀಡಿದರೆ ಕೇಂದ್ರದ ಅವಲಂಬನೆಯನ್ನು ಕಡಿಮೆ ಮಾಡಬಹುದು.
ಒಟ್ಟಿನಲ್ಲಿ ಹೇಳೋದಾದರೆ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಕೇವಲ ಒಂದು ತಾಂತ್ರಿಕ ಪ್ರಕ್ರಿಯೆ ಅಷ್ಟೇ ಅಲ್ಲ, ಇದು ರಾಜಕೀಯ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ… ದಕ್ಷಿಣ ಭಾರತವು ಜನಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿವೆ. ಆದರೆ, ಯಶಸ್ಸಿಗೆ “ಶಿಕ್ಷೆ” ಆಗೋದು ಬೇಡ! ಹೀಗಾಗಿ, ಈ ವಿಚಾರ ಸಂಬಂಧ ರಾಷ್ಟ್ರೀಯ ಮಟ್ಟದಲ್ಲಿ ಸಮತೋಲಿತ ವಿಮರ್ಶೆ ಅಗತ್ಯ. ಜೊತೆಗೆ ಪ್ರತಿ ರಾಜ್ಯದ ಜನಸಂಖ್ಯೆ, ಆರ್ಥಿಕ ಕೊಡುಗೆ ಮತ್ತು ಸಾಂಸ್ಕೃತಿಕ ಸಂವೇದನೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಸಮನ್ವಯ ಸಾಧಿಸಿದಾಗ ಮಾತ್ರ ಭಾರತದ ಒಕ್ಕೂಟ ವ್ಯವಸ್ಥೆ ಮೇಲಿನ ನಂಬಿಕೆ ಇನ್ನಷ್ಟು ಗಟ್ಟಿಯಾಗುತ್ತದೆ.