ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟನೊಬ್ಬ ಈಗ ಸೈಲೆಂಟ್ ಆಗಿ ಟಾಲಿವುಡ್ ಅಂಗಳದಲ್ಲಿ ದೊಡ್ಡ ಧಮಾಕಾ ಎಬ್ಬಿಸಲು ರೆಡಿಯಾಗಿದ್ದಾರೆ. 130ಕ್ಕೂ ಅಧಿಕ ಕನ್ನಡ ಸಿನಿಮಾಗಳಲ್ಲಿ ತನ್ನ ವಿಶಿಷ್ಟ ಅಭಿನಯದಿಂದ ಪ್ರೇಕ್ಷಕರ ದಿಲ್ ದೋಚಿರೋ ಈತ.. ಈಗ ತೆಲುಗಿನ ಹೈ-ವೋಲ್ಟೇಜ್ ಆ್ಯಕ್ಷನ್ ಚಿತ್ರದಲ್ಲಿ ಪವರ್‌ಫುಲ್ ರೋಲ್‌ನಿಂದ ಹುಬ್ಬೇರಿಸಿದ್ದಾರೆ. ಆತ ಯಾರು..? ಯಾವ ಸಿನಿಮಾ..? ಯಾವ ಸ್ಟಾರ್ ಜೊತೆ ಅಂತೀರಾ..? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್…
- ಟಿಟೌನ್ ಟೈಸನ್ ನಾಯ್ಡು ಜೊತೆ ಕನ್ನಡದ ಪ್ರಶಾಂತ್ ಸಿದ್ದಿ..!
- ನೀನಾಸಂ ರಂಗಭೂಮಿಯಿಂದ ಟಾಲಿವುಡ್ ಅಂಗಳದವರೆಗೆ
- 130+ ಸಿನಿಮಾ… ಕನ್ನಡದಾಚೆಗೂ ವಿಸ್ತರಿಸಿದ ಸಿದ್ದಿ ಸಾಮ್ರಾಜ್ಯ
- ಅಪ್ಪು ಜೊತೆ ಪರಮಾತ್ಮ ಫಸ್ಟ್.. ಈಗ ತೆಲುಗಲ್ಲಿ ನ್ಯೂ ಇನ್ನಿಂಗ್ಸ್
ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ವಿಭಿನ್ನ ಮ್ಯಾನರಿಸಂ ಮತ್ತು ಸಹಜ ಅಭಿನಯದ ಮೂಲಕ ಮನೆಮಾತಾಗಿರುವ ಜನಪ್ರಿಯ ನಟ ಪ್ರಶಾಂತ್ ಸಿದ್ದಿ ಈಗ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ತೆಲುಗಿನ ಯಂಗ್ ಹೀರೋ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ನಾಯಕನಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಹೈ-ವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಟೈಸನ್ ನಾಯ್ಡು ಚಿತ್ರದಲ್ಲಿ ಪ್ರಶಾಂತ್ ಸಿದ್ದಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಸ್ವತಃ ಪ್ರಶಾಂತ್ ಸಿದ್ದಿ ಅವರೇ ಈ ಸಿನಿಮಾದ ಶೂಟಿಂಗ್ ಅನುಭವಗಳನ್ನು ಹಂಚಿಕೊಂಡಿದ್ದು, ಕನ್ನಡದ ಪ್ರತಿಭೆಯೊಂದು ಪರಭಾಷೆಯ ದೊಡ್ಡ ಪ್ರಾಜೆಕ್ಟ್‌ನಲ್ಲಿ ಮಿಂಚುತ್ತಿರುವುದು ಸ್ಯಾಂಡಲ್‌ವುಡ್ ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟಿದೆ.
ಅಪ್ಪಟ್ಲೋ ಒಕಡುಂಡೇವಾಡು ಹಾಗೂ ಪವನ್ ಕಲ್ಯಾಣ್ ನಟನೆಯ ಭೀಮ್ಲಾ ನಾಯಕ್ ಖ್ಯಾತಿಯ ನಿರ್ದೇಶಕ ಸಾಗರ್ ಕೆ. ಚಂದ್ರ ಆಕ್ಷನ್-ಕಟ್ ಹೇಳಿರುವ ಈ ಚಿತ್ರವನ್ನು ಪ್ರತಿಷ್ಠಿತ 14 ರೀಲ್ಸ್ ಪ್ಲಸ್ ಬ್ಯಾನರ್ ಅಡಿಯಲ್ಲಿ ರಾಮ್ ಆಚಂಟ ಮತ್ತು ಗೋಪಿ ಆಚಂಟ ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಸ್ಪೆಷಲ್ ಆಪರೇಷನ್ಸ್ ಟೀಮ್‌ನ ಖಡಕ್ ಡಿಎಸ್‌ಪಿ ಅಧಿಕಾರಿಯೊಬ್ಬ ನಗರದಲ್ಲಿ ನಡೆಯುವ ಅಪರಾಧಗಳ ಸರಪಳಿಯನ್ನು ಭೇದಿಸಿ ದೊಡ್ಡ ಸಂಚನ್ನು ಬಯಲಿಗೆಳೆಯುವ ರೋಚಕ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ. ಭೀಮ್ಸ್ ಸಿಸಿರೋಲಿಯೋ ಸಂಗೀತವಿರುವ ಈ ಚಿತ್ರದಲ್ಲಿ ನೇಹಾ ಶೆಟ್ಟಿ, ಪ್ರಜ್ಞಾ ಜೈಸ್ವಾಲ್, ನಭಾ ನಟೇಶ್, ಸುನಿಲ್ ಮತ್ತು ರಾವ್ ರಮೇಶ್ ಸೇರಿದಂತೆ ಘಟಾನುಘಟಿ ತಾರಾಗಣವಿದ್ದು, ಇದೇ ಡಿಸೆಂಬರ್ 11ರಂದು ಸಿನಿಮಾ ಗ್ರ್ಯಾಂಡ್ ಆಗಿ ತೆರೆಕಾಣಲಿದೆ.
ಪ್ರಶಾಂತ್ ಸಿದ್ದಿ ಅವರ ಈ ಸಿನಿಮಾ ಪಯಣ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಬಡತನದ ಕಾರಣದಿಂದ ಪಿಯುಸಿ ಹಂತದಲ್ಲೇ ಶಿಕ್ಷಣ ಮೊಟಕುಗೊಳಿಸಿದ ಇವರು, ಚಿದಂಬರರಾವ್ ಜಂಬೆ ಅವರ ಮಾರ್ಗದರ್ಶನದಲ್ಲಿ ಹೆಗ್ಗೋಡಿನ ಪ್ರತಿಷ್ಠಿತ ನೀನಾಸಂ ನಾಟಕ ತಂಡ ಸೇರಿ ಅಭಿನಯದ ಪಟ್ಟುಗಳನ್ನು ಕಲಿತರು. ಬೆಂಗಳೂರಿನ ರಂಗಶಂಕರದಲ್ಲಿ ಇವರ ನಾಟಕದ ಅಭಿನಯ ಕಂಡು ಮೆಚ್ಚಿಕೊಂಡ ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಅವರು ಸಿನಿಮಾದಲ್ಲಿ ಪ್ರಯತ್ನಿಸುವಂತೆ ಸಲಹೆ ನೀಡಿದರು. ಬಳಿಕ 2011ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಪರಮಾತ್ಮ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಪ್ರಶಾಂತ್ ಸಿದ್ದಿ, ಇಲ್ಲಿಯವರೆಗೆ 130ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಕೇವಲ ಕಾಮಿಡಿ ಪಾತ್ರಗಳಿಗಷ್ಟೇ ಸೀಮಿತವಾಗದ ಪ್ರಶಾಂತ್ ಸಿದ್ದಿ, ಅಣ್ಣಾ ಬಾಂಡ್, ಲೂಸಿಯಾ, ದೃಶ್ಯ, ಗಜಕೇಸರಿ, ವಾಸ್ತು ಪ್ರಕಾರ, ದೊಡ್ಮನೆ ಹುಡ್ಗ ಹಾಗೂ ಬ್ಯೂಟಿಫುಲ್ ಮನಸುಗಳು ಚಿತ್ರಗಳಲ್ಲಿ ಗಮನ ಸೆಳೆದಿದ್ದರು. ಅದರಲ್ಲೂ ದುನಿಯಾ ಸೂರಿ ನಿರ್ದೇಶನದ ಕೆಂಡಸಂಪಿಗೆ ಮತ್ತು ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರಗಳಲ್ಲಿನ ಗಂಭೀರ ಹಾಗೂ ರಗಡ್ ಪಾತ್ರಗಳು ಇವರ ನಟನಾ ಸಾಮರ್ಥ್ಯಕ್ಕೆ ಹೊಸ ಆಯಾಮ ನೀಡಿದ್ದವು. ನಟನೆಯ ಜೊತೆಗೆ ತಮ್ಮೊಳಗಿನ ಸಂಗೀತ ಪ್ರತಿಭೆಯನ್ನೂ ಹೊರಹಾಕಿರುವ ಇವರು, ಮತ್ಸ್ಯಗಂಧ ಮತ್ತು ಶಭಾಷ್ ಬಡ್ಡಿಮಗ್ನೆ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.
ಸದ್ಯ ಪ್ರಶಾಂತ್ ಸಿದ್ದಿ ಅವರ ಕೈಯಲ್ಲಿ ಸಾಲು ಸಾಲು ನಿರೀಕ್ಷಿತ ಪ್ರಾಜೆಕ್ಟ್‌ಗಳಿವೆ. ಒಂದೆಡೆ ದುನಿಯಾ ಸೂರಿ ನಿರ್ದೇಶನದ ಬಹುನಿರೀಕ್ಷಿತ ಕಾಗೆ ಬಂಗಾರ ಮತ್ತು ಕೋಮಲ್ ಅಭಿನಯದ ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದರೆ, ಮತ್ತೊಂದೆಡೆ ಡಿಸೆಂಬರ್ 11ರಂದು ತೆರೆಗೆ ಬರುತ್ತಿರುವ ಟೈಸನ್ ನಾಯ್ಡು ಮೂಲಕ ಟಾಲಿವುಡ್ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಕನ್ನಡದ ಪ್ರತಿಭೆಯೊಂದು ಪರಭಾಷೆಯಲ್ಲೂ ಮಿಂಚುತ್ತಿರುವುದಕ್ಕೆ ಸ್ಯಾಂಡಲ್‌ವುಡ್ ಮಂದಿ ಶುಭ ಹಾರೈಸುತ್ತಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





