ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ರಾಮಾಯಣ ಮಾಡಿರೋ ಆ ಮಹಾದಾಖಲೆ ನೋಡಿ ಇಡೀ ಇಂಡಿಯನ್ ಸಿನಿದುನಿಯಾ ಬೆಚ್ಚಿಬಿದ್ದಿದೆ. ಒಂದೇ ಒಂದು ನಗರದಲ್ಲಿ ನೂರು ಕೋಟಿ ಗಡಿ ದಾಟಿ ಮುನ್ನುಗ್ಗುತ್ತಿರೋ ಈ ಚಿತ್ರಕ್ಕೆ ರಾವಣನ ಅಬ್ಬರವೇ ಬ್ರಹ್ಮಾಸ್ತ್ರವಾಗಿದೆ. ಅಷ್ಟಕ್ಕೂ ಬೆಂಗಳೂರಿನಲ್ಲಿ ರಾಮಾಯಣ ಲೂಟಿ ಮಾಡಿದ್ದೆಷ್ಟು ಕೋಟಿ..? ಯಾವೆಲ್ಲಾ ಹಳೇ ದಾಖಲೆಗಳು ಈಗ ಧೂಳೀಪಟವಾಗಿವೆ..? ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.
- ಬೆಂಗಳೂರು ಸಿಟಿಯಲ್ಲೇ ‘ರಾಮಾಯಣ’ 116Cr ಕಲೆಕ್ಷನ್
- ಮುಂಬೈ ಅಲ್ಲ.. ರಾಮಾಯಣಕ್ಕೆ ಬೆಂಗಳೂರೇ ಅಸಲಿ ಅಡ್ಡಾ
- ಕೆಜಿಎಫ್-2 ಸಾರ್ವಕಾಲಿಕ ದಾಖಲೆಯತ್ತ ರಾಮಾಯಣ ಚಿತ್ತ
- MMB ಕಪಾಲಿಯಲ್ಲೇ 3 ಕೋಟಿ.. ಜೇಮ್ಸ್ ದಾಖಲೆ ಉಡೀಸ್
ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮೆಗಾ ಬ್ಲಾಕ್‌ಬಸ್ಟರ್ ರಾಮಾಯಣ ಭಾಗ 1 ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ಸೃಷ್ಟಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರೊಂದರಲ್ಲೇ ಈ ಸಿನಿಮಾ ಬರೋಬ್ಬರಿ ₹116 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಬೆಂಗಳೂರು ರಾಷ್ಟ್ರೀಯ ಮಲ್ಟಿಪ್ಲೆಕ್ಸ್‌ಗಳಲ್ಲೇ ಮೊದಲ 8 ದಿನಕ್ಕೆ ₹36.7 ಕೋಟಿ ನೆಟ್ ಗಳಿಸಿದ್ದ ರಾಮಾಯಣ, ರಣಬೀರ್ ಕಪೂರ್ ಕರಿಯರ್‌ನಲ್ಲಿ ಬೆಂಗಳೂರಲ್ಲೇ ₹100 ಕೋಟಿ ಕ್ಲಬ್ ಸೇರಿದ ಮೊದಲ ಸಿನಿಮಾ ಎನಿಸಿಕೊಂಡರೆ, ಕೆಜಿಎಫ್-2 ಬಳಿಕ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಇದು ಬೆಂಗಳೂರಿನ ಎರಡನೇ ಶತಕೋಟಿ ದಾಖಲೆಯಾಗಿದೆ.
ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅಬ್ಬರಕ್ಕೆ ಕರುನಾಡು ಅಕ್ಷರಶಃ ಫಿದಾ ಆಗಿದ್ದು, ರಾಜ್ಯಾದ್ಯಂತ ರಾಮಾಯಣ ವಿಜಯಯಾತ್ರೆ ಮುಂದುವರಿದಿದೆ. ಕರ್ನಾಟಕದಾದ್ಯಂತ ಈಗಾಗಲೇ ₹163.55 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿರುವ ಈ ಸಿನಿಮಾ, ಬೆಂಗಳೂರಿನ ನಂತರ ಮೈಸೂರಿನಲ್ಲಿ ₹8.05 ಕೋಟಿ, ಹುಬ್ಬಳ್ಳಿ-ಧಾರವಾಡದಲ್ಲಿ ₹6.47 ಕೋಟಿ, ಮಂಗಳೂರಿನಲ್ಲಿ ₹3.68 ಕೋಟಿ, ಕಲಬುರಗಿಯಲ್ಲಿ ₹3.32 ಕೋಟಿ ಹಾಗೂ ಬೆಳಗಾವಿಯಲ್ಲಿ ₹3.10 ಕೋಟಿ ಗಳಿಸಿದೆ. ಈ ಮೂಲಕ ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ನಾನ್-ಕನ್ನಡ ಸಿನಿಮಾಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವ ರಾಮಾಯಣ, ಈಗ ₹182.96 ಕೋಟಿ ಲೈಫ್‌ಟೈಮ್ ಗಳಿಕೆ ಹೊಂದಿರುವ ಕೆಜಿಎಫ್-2 ದಾಖಲೆಯತ್ತ ಕಣ್ಣಿಟ್ಟಿದೆ.
ಇನ್ನೊಂದು ವಿಶೇಷ ಅಂದ್ರೆ, ರಾಮಾಯಣ ಚಿತ್ರದ ಕನ್ನಡ ಡಬ್ಬಿಂಗ್ ಅವತರಣಿಕೆ ಕೇವಲ 20 ದಿನಗಳಲ್ಲಿ ಭಾರತದಲ್ಲಿ ₹77.05 ಕೋಟಿ ನೆಟ್ ಗಳಿಕೆ ಮಾಡುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. ಕನ್ನಡ ವರ್ಷನ್‌ನಲ್ಲಿ ₹50 ಕೋಟಿ ನೆಟ್ ದಾಟಿದ ಮೊದಲ ಬಾಲಿವುಡ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜೇಮ್ಸ್ ₹75.49 ಕೋಟಿ ಚಿತ್ರದ ಗಳಿಕೆಯನ್ನು ಹಿಂದಿಕ್ಕಿ ಕನ್ನಡದ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಏರಿದೆ. ಹಿಂದಿಯಲ್ಲಿ ₹739.25 ಕೋಟಿ, ನಂತರ ಅತಿ ಹೆಚ್ಚು ಗಳಿಕೆ ತಂದುಕೊಟ್ಟ ಎರಡನೇ ಭಾಷೆ ಕನ್ನಡವಾಗಿದ್ದು, ತೆಲುಗು ₹57.30 ಕೋಟಿ, ಮಲಯಾಳಂ ₹51.20 ಕೋಟಿ ಹಾಗೂ ತಮಿಳು ₹48.15 ಕೋಟಿ ಅವತರಣಿಕೆಗಳಿಗಿಂತಲೂ ಕನ್ನಡ ಮಾರುಕಟ್ಟೆ ಮುಂದಿದೆ.
ಇನ್ನು ಬೆಂಗಳೂರಿನ ಪ್ರತಿಷ್ಠಿತ ಮಲ್ಟಿಪ್ಲೆಕ್ಸ್ ಆದ ಎಎಂಬಿ ಕಪಾಲಿ ಒಂದರಲ್ಲೇ ರಾಮಾಯಣ ಬರೋಬ್ಬರಿ ₹3 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಭರ್ಜರಿ ದಾಖಲೆ ಬರೆದಿದೆ. ಪ್ರೇಕ್ಷಕರಿಂದ ಸಿಗುತ್ತಿರುವ ಅಪಾರ ಪ್ರೀತಿ ಹಾಗೂ ಅಭೂತಪೂರ್ವ ರೆಸ್ಪಾನ್ಸ್‌ನಿಂದಾಗಿ ಒಂದೇ ಥಿಯೇಟರ್‌ನಲ್ಲಿ ಈ ಮಟ್ಟದ ಗಳಿಕೆ ಕಾಣುವ ಮೂಲಕ ಸಿನಿಮಾ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಕೇವಲ ಕರ್ನಾಟಕ ಮಾತ್ರವಲ್ಲ, ದೇಶ-ವಿದೇಶಗಳಲ್ಲೂ ರಾಮಾಯಣ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಬೇಟೆಯಾಡುತ್ತಿದೆ. ಬಿಡುಗಡೆಯಾದ 20 ದಿನಗಳಲ್ಲಿ ದೇಶಾದ್ಯಂತ ₹972.95 ಕೋಟಿ ನೆಟ್ ಕಲೆಕ್ಷನ್ ಮಾಡಿರುವ ಈ ಸಿನಿಮಾ, ಓವರ್‌ಸೀಸ್‌ನಲ್ಲಿ ₹573 ಕೋಟಿ ಬಾಚಿಕೊಂಡಿದೆ. ಈ ಮೂಲಕ ವಿಶ್ವದಾದ್ಯಂತ ಬರೋಬ್ಬರಿ ₹1,735 ಕೋಟಿ ಗ್ರಾಸ್ ಕಲೆಕ್ಷನ್ ದಾಟಿದ್ದು, ಕೆಜಿಎಫ್-2, ಆರ್‌ಆರ್‌ಆರ್ ಹಾಗೂ ಜವಾನ್ ಚಿತ್ರಗಳ ಲೈಫ್‌ಟೈಮ್ ಗಳಿಕೆಯನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ.
ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ದೃಶ್ಯಕಾವ್ಯಕ್ಕೆ ಆಸ್ಕರ್ ವಿಜೇತರಾದ ಎ.ಆರ್. ರೆಹಮಾನ್ ಮತ್ತು ಹ್ಯಾನ್ಸ್ ಜಿಮ್ಮರ್ ಸಂಗೀತ ದೊಡ್ಡ ಶಕ್ತಿಯಾಗಿದೆ. ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್, ಹನುಮಂತನಾಗಿ ಸನ್ನಿ ಡಿಯೋಲ್ ಹಾಗೂ ಲಕ್ಷ್ಮಣನಾಗಿ ರವಿ ದುಬೆ ಅಭಿನಯಕ್ಕೆ ಪ್ರೇಕ್ಷಕರು ಜೈಕಾರ ಹಾಕಿದ್ದು, ರಾಮಾಯಣ ಬಾಕ್ಸ್ ಆಫೀಸ್ ಓಟ ಸದ್ಯಕ್ಕೆ ನಿಲ್ಲುವ ಲಕ್ಷಣಗಳೇ ಕಾಣಿಸುತ್ತಿಲ್ಲ.
ಕೀರ್ತಿ ಪಾಟೀಲ್, ಫಿಲಂ ಬ್ಯೂಯೋ, ಗ್ಯಾರಂಟಿ ನ್ಯೂಸ್





