ಯಾದಗಿರಿ: ರಾಜ್ಯವನ್ನೇ ಬೆಚ್ಚಿಬೀಳಿಸುವಂತಹ ಅಮಾನವೀಯ ಘಟನೆಯೊಂದು ಯಾದಗಿರಿ ಜಿಲ್ಲೆಯ ರಾಜೀವ್ ಗಾಂಧಿ ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ. ಮದ್ಯದ ಅಮಲಿನಲ್ಲಿ ಹೆತ್ತ ತಾಯಿಯೇ ತನ್ನ ಅಪ್ರಾಪ್ತ ಮಗಳ ಕುತ್ತಿಗೆ ಹಿಸುಕಿ ಕೊಲೆ ಮಾಡಿದ ಘಟನೆ ನಡೆದಿದೆ..
ಮೃತ ಬಾಲಕಿಯನ್ನು ಪ್ರತಿಭಾ (10/11) ಎಂದು ಗುರುತಿಸಲಾಗಿದ್ದು, ಆರೋಪಿತ ತಾಯಿ ನಿರ್ಮಲಾ ಎಂಬ ಮಹಿಳೆ. ಪ್ರಾಥಮಿಕ ತನಿಖೆಯ ಪ್ರಕಾರ, ಮಗಳು ತಾಯಿಗೆ ಮದ್ಯಪಾನ ಬಿಡುವಂತೆ ಬುದ್ಧಿವಾದ ಹೇಳಿದ್ದೇ ಈ ಘೋರ ಕೃತ್ಯಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಆತ್ಮಹತ್ಯೆ ಎಂದು ನಾಟಕವಾಡಿದ ತಾಯಿ
ಘಟನೆ ನಡೆದ ನಂತರ ತಾಯಿ ನಿರ್ಮಲಾ, ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುತ್ತಮುತ್ತಲಿನವರಿಗೆ ಮತ್ತು ಪೊಲೀಸರಿಗೆ ನಂಬಿಸಲು ಯತ್ನಿಸಿದ್ದಾಳೆ. “ಜ್ಯೂಸ್ ಕುಡಿಯಲು 15 ರೂಪಾಯಿ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಮಗಳು ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ” ಎಂದು ಸುಳ್ಳು ಕಥೆಯನ್ನು ಕಟ್ಟಿದ್ದಳು.
ಮನೆ ಒಳಗೆ ಬಾಲಕಿ ಸೀರೆ ಕಟ್ಟಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆಯ ಶಂಕೆ ಮೂಡಿತ್ತು. ಆದರೆ ಬಾಲಕಿಯ ಸಾವಿನ ರೀತಿಯಲ್ಲಿ ಅನುಮಾನಾಸ್ಪದ ಅಂಶಗಳು ಕಂಡುಬಂದ ಹಿನ್ನೆಲೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು.
ವೈದ್ಯಕೀಯ ವರದಿ ಬಹಿರಂಗಪಡಿಸಿದ ಸತ್ಯ
ಪೊಲೀಸರ ತೀವ್ರ ವಿಚಾರಣೆ ಮತ್ತು ವೈದ್ಯಕೀಯ ತಪಾಸಣೆಯ ನಂತರ, ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಸತ್ಯ ಬಯಲಾಗಿದೆ. ಮಗಳ ಕುತ್ತಿಗೆಯಲ್ಲಿ ಉಸಿರುಗಟ್ಟಿದ ಗುರುತುಗಳು ಪತ್ತೆಯಾಗಿದ್ದು, ಆಕೆಯನ್ನು ಕೈಗಳಿಂದಲೇ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬುದು ದೃಢಪಟ್ಟಿದೆ. ಪೊಲೀಸರ ಸತತ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕೊನೆಗೆ ತಾಯಿ ನಿರ್ಮಲಾ ತಪ್ಪು ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.
ಹತ್ಯೆಗೆ ನಿಜವಾದ ಕಾರಣ ಏನು?
ಪೊಲೀಸ್ ಮೂಲಗಳ ಪ್ರಕಾರ, ನಿರ್ಮಲಾ ಮದ್ಯ ಸೇವನೆಗೆ ಅಡಿಕ್ಟ್ ಆಗಿದ್ದಳು. ಮನೆಗೆ ಬೇಕಾದ ಹಣವನ್ನೂ ಮದ್ಯಕ್ಕೆ ಖರ್ಚು ಮಾಡುತ್ತಿದ್ದಳು. ಇದರಿಂದ ಮನೆ ನಿರ್ವಹಣೆ ಕಷ್ಟವಾಗುತ್ತಿತ್ತು. ಈ ವಿಚಾರವಾಗಿ ಮಗಳು ಪ್ರತಿಭಾ ತಾಯಿಗೆ ಪದೇಪದೆ ಬುದ್ಧಿವಾದ ಹೇಳುತ್ತಿದ್ದಳು.
“ನೀನು ಕುಡಿದು ಸತ್ತರೆ ನಮ್ಮನ್ನು ನೋಡಿಕೊಳ್ಳುವವರು ಯಾರು?”, “ಮದ್ಯ ಸೇವನೆ ಬಿಡು, ಊಟಕ್ಕೂ ತೊಂದರೆಯಾಗುತ್ತಿದೆ” ಎಂದು ಮಗಳು ಪ್ರಶ್ನಿಸಿದ್ದಕ್ಕೆ ತಾಯಿ ಕೋಪಗೊಂಡಿದ್ದಾಳೆ. ಮದ್ಯದ ಮತ್ತಿನಲ್ಲಿ ಆಕ್ರೋಶಗೊಂಡ ನಿರ್ಮಲಾ, ಕೋಪದಲ್ಲಿ ಮಗಳ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಳೆ.
ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕಥೆ
ಕೊಲೆ ಮಾಡಿದ ಬಳಿಕ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆಯ ನಾಟಕವಾಡಿ, ಪೊಲೀಸರನ್ನೇ ದಾರಿ ತಪ್ಪಿಸಲು ಯತ್ನಿಸಿದ್ದಾಳೆ. ಆದರೆ ಸ್ಥಳೀಯರ ಹೇಳಿಕೆಗಳು, ಸಾಕ್ಷ್ಯಾಧಾರಗಳು ಮತ್ತು ವೈದ್ಯಕೀಯ ವರದಿ ಆಕೆಯ ಸುಳ್ಳು ಕಥೆಯನ್ನು ಬಹಿರಂಗಪಡಿಸಿದೆ.
ಪ್ರಕರಣ ದಾಖಲು, ಆರೋಪಿ ಬಂಧನ
ಈ ಸಂಬಂಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ತಾಯಿ ನಿರ್ಮಲಾಳನ್ನು ಪೊಲೀಸರು ಬಂಧಿಸಿದ್ದಾರೆ..





