ನೆಲಮಂಗಲ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದು, ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದೆ. ಆದರೆ ಈ ಐತಿಹಾಸಿಕ ಕ್ಷಣವನ್ನು ವಿಶೇಷವಾಗಿ ಆಚರಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ.
ನೆಲಮಂಗಲ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್. ಶ್ರೀನಿವಾಸ್ ನೇತೃತ್ವದಲ್ಲಿ ತಾಲೂಕಿನ ಪ್ರತಿಯೊಂದು ಮನೆಗೂ ಸಿಹಿ ಹಂಚುವ ಮಹತ್ವಾಕಾಂಕ್ಷಿ ಕಾರ್ಯಕ್ರಮ ರೂಪಿಸಲಾಗಿದೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಿರುವ ಸಂತಸವನ್ನು ಜನರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಸುಮಾರು 9 ರಿಂದ 10 ಲಕ್ಷ ಲಾಡುಗಳನ್ನು ಸಿದ್ಧಪಡಿಸಲಾಗುತ್ತಿದೆ.
ತಾಲೂಕಿನ ಗ್ರಾಮೀಣ ಹಾಗೂ ನಗರ ಪ್ರದೇಶಗಳನ್ನು ಒಳಗೊಂಡಂತೆ ಸುಮಾರು 80 ರಿಂದ 90 ಸಾವಿರ ಮನೆಗಳಿಗೆ ಉಚಿತವಾಗಿ ಸ್ವೀಟ್ ಬಾಕ್ಸ್ ವಿತರಣೆ ಮಾಡಲು ಯೋಜನೆ ರೂಪಿಸಲಾಗಿದೆ. ಪ್ರತಿಯೊಂದು ಕುಟುಂಬಕ್ಕೂ ಒಂದು ಕೆಜಿ ಸಿಹಿ ಬಾಕ್ಸ್ ತಲುಪಿಸುವ ವ್ಯವಸ್ಥೆ ಮಾಡಲಾಗಿದ್ದು, ಕ್ಷೇತ್ರದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಲಾಡು ತಯಾರಿಕೆ ಕಾರ್ಯ ಕಳೆದ ಎರಡು ದಿನಗಳಿಂದ ನಿರಂತರವಾಗಿ ನಡೆಯುತ್ತಿದೆ. ಸುಮಾರು 250 ರಿಂದ 300 ನುರಿತ ಬಾಣಸಿಗರು ಹಗಲಿರುಳು ಶ್ರಮಿಸಿ ಲಕ್ಷಾಂತರ ಲಾಡುಗಳನ್ನು ತಯಾರಿಸುತ್ತಿದ್ದಾರೆ. ಸಿಹಿಯ ಗುಣಮಟ್ಟ ಹಾಗೂ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ.
ಈ ನಡುವೆ ಶಾಸಕ ಎನ್. ಶ್ರೀನಿವಾಸ್ ಅವರು ಸ್ವತಃ ಲಾಡು ತಯಾರಿಕಾ ಕೇಂದ್ರಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು. ತಯಾರಾಗುತ್ತಿರುವ ಲಾಡುಗಳ ಗುಣಮಟ್ಟ, ಪ್ಯಾಕಿಂಗ್ ವ್ಯವಸ್ಥೆ ಹಾಗೂ ವಿತರಣಾ ಯೋಜನೆ ಕುರಿತು ಅಧಿಕಾರಿಗಳು ಮತ್ತು ಕಾರ್ಯಕರ್ತರಿಂದ ಮಾಹಿತಿ ಪಡೆದುಕೊಂಡರು.
ಈ ಕುರಿತು ಮಾತನಾಡಿದ ಶಾಸಕ ಶ್ರೀನಿವಾಸ್, “ನಾಳೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣ. ನನ್ನ ಕ್ಷೇತ್ರದ ಪ್ರತಿಯೊಂದು ಹಳ್ಳಿಯಲ್ಲೂ ಈಗಾಗಲೇ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಈ ಸಂತೋಷವನ್ನು ಜನರೊಂದಿಗೆ ಹಂಚಿಕೊಳ್ಳಲು ಕ್ಷೇತ್ರದ 80 ರಿಂದ 90 ಸಾವಿರ ಮನೆಗಳಿಗೆ ಸಿಹಿ ಬಾಕ್ಸ್ ವಿತರಣೆ ಮಾಡಲಾಗುತ್ತದೆ” ಎಂದು ಹೇಳಿದರು.
ಅಲ್ಲದೇ, ನಾಳೆ ಪ್ರಮಾಣವಚನ ಸಮಾರಂಭ ಮುಗಿಯುತ್ತಿದ್ದಂತೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಲಾಡು ಬಾಕ್ಸ್‌ಗಳನ್ನು ವಿತರಿಸಲಿದ್ದಾರೆ ಎಂದು ತಿಳಿಸಿದರು. ಯಾವುದೇ ಕುಟುಂಬ ಸಿಹಿ ವಿತರಣೆಯಿಂದ ವಂಚಿತವಾಗದಂತೆ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಬೆಂಗಳೂರು ನಗರದ ಲೋಕಭವನದಲ್ಲಿ ನಡೆಯಲಿರುವ ಪ್ರಮಾಣವಚನ ಸಮಾರಂಭದೊಂದಿಗೆ ನೆಲಮಂಗಲದಲ್ಲೂ ಸಂಭ್ರಮದ ಕಾರ್ಯಕ್ರಮಗಳು ಜೋರಾಗಲಿವೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ತಾಲೂಕಿನಾದ್ಯಂತ ಸಿಹಿ ಹಂಚುವ ಮೂಲಕ ಹೊಸ ಸರ್ಕಾರವನ್ನು ಸ್ವಾಗತಿಸಲು ಕಾಂಗ್ರೆಸ್ ಕಾರ್ಯಕರ್ತರು ಸಜ್ಜಾಗಿದ್ದಾರೆ.




