ಬೆಂಗಳೂರು: ಇಂದಿನಿಂದ ಉಭಯ ವಿಧಾನಮಂಡಲ ಮುಂಗಾರು ಅಧಿವೇಶನ ಆರಂಭಗೊಂಡಿದೆ. ವಿಧಾನಪರಿಷತ್ ನಲ್ಲಿ ಇಂದು ಕಲಾಪ ಆರಂಭವಾಗುತ್ತಿದ್ದಂತೆ ಇತ್ತೀಚೆಗೆ ಅಗಲಿದ 13 ಮಂದಿ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.
ಮಾಜಿ ಸಚಿವರಾದ ರಾಮಚಂದ್ರಗೌಡ, ವೆಂಕಟರಮಣ್ಣಪ್ಪ, ಹಾಲಿ ಸಚಿವರಾಗಿದ್ದ ಡಿ.ಸುಧಾಕರ್, ಮಾಜಿ ಶಾಸಕ ಸಿ.ವೀರಣ್ಣ, ಮಾಜಿ ಸಂಸದ ಎಚ್.ಹನುಮಂತಪ್ಪ, ಪತ್ರಕರ್ತ ಡಾ.ಎಸ್.ಆರ್.ರಾಮಸ್ವಾಮಿ, ಗಾಯಕಿರಾದ ಆಶಾ ಭೋಂಸ್ಲೆ, ಎಸ್.ಜಾನಕಿ, ಮೀನುಗಾರರ ಮುಖಂಡರಾಗಿದ್ದ ರಾಮಚಂದ್ರ ಬೈಕಂಪಾಡಿ, ತೂಗುಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್, ಲೇಖಕಿ ಸಿ.ಎನ್. ಮುಕ್ತ, ನಾಣ್ಯಶಾಸ್ತ್ರ ತಜ್ಞ ಪ್ರೊ.ಎ.ವಿ.ನರಸಿಂಸಮೂರ್ತಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ಮೇಲ್ಮನೆಯು ಸಂತಾಪ ಸೂಚಿಸಿತು.
ಆಡಳಿತ ಪಕ್ಷದ ನಾಯಕ ಯತೀಂದ್ರ ಹಾಗೂ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಉಭಯ ಪಕ್ಷಗಳ ಸದಸ್ಯರು ಮೃತರ ಆತ್ಮಕ್ಕೆ ಶಾಂತಿ ಕೋರುವುದರ ಜೊತೆಗೆ ಅವರ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ಸಂತಾಪ ಸೂಚನೆ ವೇಳೆ ಮಾತನಾಡಿದ ವಿಪಕ್ಷ ಸದಸ್ಯ ಶರವಣ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ದಿ.ಚೆನ್ನಮ್ಮ ಅವರ ಹೆಸರಿಡುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಮನವಿ ಮಾಡಿದರು.
ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರು, ತಮ್ಮ ಮನೆಗೆ ಪ್ರತಿಯೊಬ್ಬರಿಗೆ ಅತಿಥಿ ಸತ್ಕಾರ ಮಾಡುತ್ತಿದ್ದರು. ಈ ನಿಟ್ಟಿನಲ್ಲಿ ಅನ್ನಪೂರ್ಣೇಶ್ವರಿ ಎಂದು ಹೆಸರು ಸಂಪಾದಿಸಿದ್ದ ಚೆನ್ನಮ್ಮ ಹೆಸರು ಅವಿಸ್ಮರಣೀಯವಾಗಿಸಲು ಸರ್ಕಾರಕ್ಕೆ ಮನವಿ ಮಾಡಿದರು.





