ನವದೆಹಲಿ (ಆಗಸ್ಟ್ 14): 80ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನವಾದ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಈ ಭಾಷಣದಲ್ಲಿ ರಾಷ್ಟ್ರೀಯ ಭದ್ರತೆ, ಉಗ್ರವಾದದ ವಿರುದ್ಧದ ಹೋರಾಟ, ಸಿಂಧೂ ಜಲ ಒಪ್ಪಂದದ ಅಮಾನತು, ನಕ್ಸಲ್ ನಿರ್ಮೂಲನೆ ಹಾಗೂ ಭಾರತದ ಆರ್ಥಿಕ ಬೆಳವಣಿಗೆ ಪ್ರಮುಖ ವಿಷಯಗಳಾಗಿ ಹೊರಹೊಮ್ಮಿದವು. “ಉಗ್ರರಿಗೆ ಮತ್ತು ಅವರಿಗೆ ಆಶ್ರಯ ನೀಡುವವರಿಗೆ ಎಲ್ಲೂ ಬಚ್ಚಿಟ್ಟುಕೊಳ್ಳಲು ಅವಕಾಶವಿಲ್ಲ” ಎಂಬ ಕಠಿಣ ಸಂದೇಶವನ್ನು ರಾಷ್ಟ್ರಪತಿ ನೀಡಿದರು.
#WATCH | Addressing the nation on the eve of Independence Day, President Droupadi Murmu says, “The Constitution framed by the People of India rests on the foundation of people’s participation. The spirit of public participation has always been inherent in the people of our… pic.twitter.com/5JqfRcdzl3
— ANI (@ANI) August 14, 2026
ಸಿಂಧೂ ಜಲ ಒಪ್ಪಂದ ಅಮಾನತು ರಾಷ್ಟ್ರೀಯ ಹಿತಕ್ಕಾಗಿ
ರಾಷ್ಟ್ರಪತಿ ಮುರ್ಮು, ಪಾಕಿಸ್ತಾನದೊಂದಿಗೆ ಮಾಡಿಕೊಂಡಿದ್ದ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿರುವುದು ರಾಷ್ಟ್ರೀಯ ಹಿತಾಸಕ್ತಿ ಹಾಗೂ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಕೈಗೊಂಡ ನಿರ್ಣಾಯಕ ನಿರ್ಧಾರ ಎಂದು ಹೇಳಿದರು. ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಭಾರತ ತೆಗೆದುಕೊಂಡ ಕ್ರಮಗಳ ಭಾಗವಾಗಿ ಈ ನಿರ್ಧಾರ ಜಾರಿಗೊಂಡಿದ್ದು, ದೇಶದ ಜಲ ಸಂಪನ್ಮೂಲಗಳ ಸಮರ್ಪಕ ಬಳಕೆಗೆ ಇದು ಮಹತ್ವದ್ದಾಗಿದೆ ಎಂದು ತಿಳಿಸಿದರು.
ಆಪರೇಷನ್ ಸಿಂಧೂರ್ ಉಲ್ಲೇಖ
ಉಗ್ರವಾದದ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆ ನೀತಿಯನ್ನು ಪುನರುಚ್ಚರಿಸಿದ ರಾಷ್ಟ್ರಪತಿ ಮುರ್ಮು, ಆಪರೇಷನ್ ಸಿಂಧೂರ್ ಭಾರತೀಯ ಸಶಸ್ತ್ರ ಪಡೆಗಳ ನಿಖರ ದಾಳಿ ಸಾಮರ್ಥ್ಯವನ್ನು ವಿಶ್ವಕ್ಕೆ ತೋರಿಸಿದೆ ಎಂದು ಬಣ್ಣಿಸಿದರು. “ಭಯೋತ್ಪಾದನೆಯಲ್ಲಿ ತೊಡಗಿರುವವರು ಮತ್ತು ಅವರಿಗೆ ಬೆಂಬಲ ನೀಡುವವರು ತಮ್ಮ ಕೃತ್ಯಗಳ ಪರಿಣಾಮವನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಎಚ್ಚರಿಕೆ ನೀಡಿದರು.
ನಕ್ಸಲ್ಮುಕ್ತ ಭಾರತದತ್ತ ಪ್ರಗತಿ
ಬಸ್ತರ್ ಸೇರಿದಂತೆ ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳಲ್ಲಿ ಅಭಿವೃದ್ಧಿ ವೇಗ ಪಡೆದಿರುವುದನ್ನು ಉಲ್ಲೇಖಿಸಿದ ರಾಷ್ಟ್ರಪತಿ, ನಕ್ಸಲ್ಮುಕ್ತ ಭಾರತದತ್ತ ದೇಶ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಹೇಳಿದರು. ಮೂಲಸೌಕರ್ಯ, ಶಿಕ್ಷಣ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಜನರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವುದು ಸಕಾರಾತ್ಮಕ ಬದಲಾವಣೆಯ ಸಂಕೇತ ಎಂದರು.
ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯ
ಜಾಗತಿಕ ಯುದ್ಧ ಹಾಗೂ ಆರ್ಥಿಕ ಅಸ್ಥಿರತೆಯ ನಡುವೆಯೂ ಭಾರತದ ಆರ್ಥಿಕತೆ ಜಾಗತಿಕ ಸರಾಸರಿಗಿಂತ ಎರಡು ಪಟ್ಟು ವೇಗದಲ್ಲಿ ಬೆಳೆಯುವ ನಿರೀಕ್ಷೆ ಇದೆ ಎಂದು ರಾಷ್ಟ್ರಪತಿ ಹೇಳಿದರು. ಕಳೆದ ಹತ್ತು ವರ್ಷಗಳಲ್ಲಿ 25 ಕೋಟಿಗೂ ಹೆಚ್ಚು ಜನರು ಬಡತನದಿಂದ ಹೊರ ಬಂದಿದ್ದಾರೆ, ಹಾಗೂ 80 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಉಚಿತ ಪಡಿತರ ಯೋಜನೆಯ ಮೂಲಕ ಆಹಾರ ಭದ್ರತೆ ಒದಗಿಸಲಾಗುತ್ತಿದೆ ಎಂದು ವಿವರಿಸಿದರು.
ಅಲ್ಲದೆ, ಯಾವುದೇ ವ್ಯಕ್ತಿ ಆರ್ಥಿಕ ಕೊರತೆಯಿಂದ ನ್ಯಾಯದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ನ್ಯಾಯಾಂಗ ವ್ಯವಸ್ಥೆಯ ಜವಾಬ್ದಾರಿ ಎಂದು ಕರೆ ನೀಡಿದರು.





