ನವದೆಹಲಿ (ಆಗಸ್ಟ್ 14): ಸುಮಾರು 13,000 ಕೋಟಿ ರೂ. ಮೌಲ್ಯದ ಅಂತರರಾಷ್ಟ್ರೀಯ ಡ್ರಗ್ಸ್ ಕಳ್ಳಸಾಗಣೆ ಜಾಲದ ಪ್ರಮುಖ ಆರೋಪಿ ವೀರೇಂದ್ರ ಸಿಂಗ್ ಬಸೋಯಾ ಅವರನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಿಂದ ಭಾರತಕ್ಕೆ ಕರೆತರಲಾಗಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಮನವಿಯ ಮೇರೆಗೆ ಇಂಟರ್ಪೋಲ್ ಹೊರಡಿಸಿದ್ದ ರೆಡ್ ಕಾರ್ನರ್ ನೋಟಿಸ್ ಆಧಾರದ ಮೇಲೆ ಜೂನ್ನಲ್ಲಿ ದುಬೈನಲ್ಲಿ ಬಂಧಿತನಾಗಿದ್ದ ಬಸೋಯಾರನ್ನು ಇದೀಗ ಅಧಿಕೃತವಾಗಿ ಭಾರತಕ್ಕೆ ಗಡೀಪಾರು ಮಾಡಲಾಗಿದೆ.
ಎನ್ಸಿಬಿ ಅಧಿಕಾರಿಗಳು ವೀರೇಂದ್ರ ಬಸೋಯಾರನ್ನು ಏರ್ ಇಂಡಿಯಾ ವಿಮಾನ AI-4310 ಮೂಲಕ ನವದೆಹಲಿಗೆ ಕರೆತಂದು ವಶಕ್ಕೆ ಪಡೆದಿದ್ದಾರೆ. ಅಧಿಕಾರಿಗಳ ಪ್ರಕಾರ, ಆತ ದೇಶದ ಅತಿದೊಡ್ಡ ಅಕ್ರಮ ಮಾದಕವಸ್ತು ಕಳ್ಳಸಾಗಣೆ ಜಾಲದ ಪ್ರಮುಖ ಸಂಚುಕೋರನಾಗಿದ್ದು, ಲಂಡನ್ಗೆ ಮೆಫೆಡ್ರೋನ್ ಹಾಗೂ ಇತರ ಮಾದಕ ವಸ್ತುಗಳನ್ನು ಸಾಗಿಸುವ ಜಾಲವನ್ನು ನಿರ್ವಹಿಸುತ್ತಿದ್ದಾನೆ ಎಂಬ ಆರೋಪ ಎದುರಿಸುತ್ತಿದ್ದಾನೆ.
970 ಕೆಜಿ ಗಾಂಜಾ ಜಪ್ತಿ ಪ್ರಕರಣದ ಪ್ರಮುಖ ಆರೋಪಿ
2024ರ ಫೆಬ್ರವರಿಯಲ್ಲಿ ಪುಣೆ ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ದೆಹಲಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 970 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದವು. ಈ ಸರಕು ಲಂಡನ್ಗೆ ರಫ್ತು ಆಗಬೇಕಿತ್ತು ಎಂದು ತನಿಖೆಯಲ್ಲಿ ಬಹಿರಂಗವಾಗಿತ್ತು. ಡೆಲ್ಟಾ ಲಾಜಿಸ್ಟಿಕ್ಸ್ ಮೂಲಕ ಅಕ್ರಮ ಸಾಗಣೆ ನಡೆಸಲು ಯೋಜನೆ ರೂಪಿಸಲಾಗಿದ್ದು, ಈ ಜಾಲವನ್ನು ವೀರೇಂದ್ರ ಬಸೋಯಾ ನಿರ್ದೇಶಿಸುತ್ತಿದ್ದನೆಂದು ಎನ್ಸಿಬಿ ಆರೋಪಿಸಿದೆ.
ಈ ಪ್ರಕರಣದಲ್ಲಿ ದಿವೇಶ್ ಚರಣ್ಜೀತ್ ಭೂತಾನಿ, ಸಂದೀಪ್ ಕುಮಾರ್ ರಾಜ್ಪಾಲ್, ಡೆಲ್ಟಾ ಲಾಜಿಸ್ಟಿಕ್ಸ್ ಮಾಲೀಕ ಸಂದೀಪ್ ಹನುಮಾನ್ ಸಿಂಗ್ ಯಾದವ್ ಹಾಗೂ ವ್ಯವಸ್ಥಾಪಕ ದೇವೇಂದ್ರ ಯಾದವ್ ಸೇರಿದಂತೆ ಹಲವು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ.
ಸಂದೀಪ್ ಧುನಿಯಾ ಆಪ್ತ
ವೀರೇಂದ್ರ ಬಸೋಯಾ, ದೆಹಲಿ ಪೊಲೀಸರ 13,000 ಕೋಟಿ ರೂ. ಡ್ರಗ್ಸ್ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಆಗಿರುವ ಸಂದೀಪ್ ಧುನಿಯಾ ಅವರ ಆಪ್ತನಾಗಿದ್ದಾನೆ ಎಂದು ತನಿಖೆ ಮೂಲಕ ತಿಳಿದು ಬಂದಿದೆ. ಸಂದೀಪ್ ಧುನಿಯಾ ದುಬೈನಿಂದ ಪಾಕಿಸ್ತಾನಕ್ಕೆ ಪರಾರಿಯಾಗಿದ್ದರೆ, ಬಸೋಯಾರನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಹಾಗೂ ಎನ್ಸಿಬಿ ಯಶಸ್ವಿಯಾಗಿದೆ.
ಪ್ರಸ್ತುತ ವಿದೇಶದಲ್ಲಿರುವ ಬಸೋಯಾ ಅವರ ಪುತ್ರ ರಿಷಭ್ ಬಸೋಯಾ ವಿರುದ್ಧವೂ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಯಲ್ಲಿದ್ದು, ಆತನ ಬಂಧನಕ್ಕೆ ಪ್ರಯತ್ನ ಮುಂದುವರಿದಿದೆ.





