ಬೆಂಗಳೂರು ಆಗಸ್ಟ್ 14: ಭಾರತದ ಶ್ರೀಮಂತ ಸಂಸ್ಕೃತಿ, ಪರಂಪರೆ ಮತ್ತು ಕಥೆಗಳನ್ನು ಪ್ರವಾಸಿಗರಿಗೆ ಹತ್ತಿರವಾಗಿಸುವ ಉದ್ದೇಶದಿಂದ, ಪ್ರಸಿದ್ಧ ಟ್ರಾವೆಲ್ ಪ್ಲಾಟ್‌ಫಾರ್ಮ್ ಮೇಕ್ ಮೈ ಟ್ರಿಪ್ ಇದೀಗ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ.
‘ಇನ್‌ಕ್ರೆಡಿಬಲ್ ಇಂಡಿಯಾ’ ಮತ್ತು ‘ದೇಖೋ ಅಪ್ನಾ ದೇಶ್’ ಅಭಿಯಾನದ ಅಡಿಯಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದೇ ದೇಶದ 60ಕ್ಕೂ ಹೆಚ್ಚು ನಗರಗಳಲ್ಲಿ ಬರೋಬ್ಬರಿ 350ಕ್ಕೂ ಅಧಿಕ ವಿಶೇಷ ಗೈಡೆಡ್ ಟೂರ್‌ಗಳನ್ನು ಆರಂಭಿಸುತ್ತಿದೆ.
ಏನಿದು ಹೊಸ ಸೌಲಭ್ಯ? ಲಾಭವೇನು?
ಸಾಮಾನ್ಯವಾಗಿ ನಾವು ಯಾವುದಾದರೂ ಪ್ರವಾಸಿ ತಾಣಕ್ಕೆ ಹೋದಾಗ, ಸ್ಥಳೀಯ ಇತಿಹಾಸವನ್ನು ತಿಳಿಯಲು ಅಲ್ಲಿಗೆ ಹೋದ ಮೇಲೆ ಗೈಡ್‌ಗಳನ್ನು ಹುಡುಕುತ್ತೇವೆ. ಇದುವರೆಗೆ ಅವರನ್ನು ಆನ್‌ಲೈನ್‌ನಲ್ಲಿ ಮುಂಚಿತವಾಗಿ ಬುಕ್ ಮಾಡುವ ವ್ಯವಸ್ಥೆ ಇರಲಿಲ್ಲ ಮತ್ತು ದರದಲ್ಲೂ ಪಾರದರ್ಶಕತೆ ಇರುತ್ತಿರಲಿಲ್ಲ.
ಈ ಸಮಸ್ಯೆಗೆ ಪರಿಹಾರವಾಗಿ, ವಿಮಾನ ಮತ್ತು ಹೋಟೆಲ್ ಬುಕ್ ಮಾಡಿದಷ್ಟೇ ಸುಲಭವಾಗಿ, ಸ್ಥಳೀಯ ಪರಿಣಿತ ಗೈಡ್‌ಗಳ ಜೊತೆಗಿನ ವಿಶೇಷ ಪ್ರವಾಸಗಳನ್ನು ಆನ್‌ಲೈನ್‌ನಲ್ಲೇ ಮುಂಚಿತವಾಗಿ ಬುಕ್ ಮಾಡುವ ಅವಕಾಶವನ್ನು ಇದೀಗ ಕಲ್ಪಿಸಲಾಗಿದೆ. ಮೇಕ್ ಮೈ ಟ್ರಿಪ್ ಆ್ಯಪ್ ಅಥವಾ ವೆಬ್‌ಸೈಟ್ ಮೂಲಕ ಮಾರ್ಗದರ್ಶಕರನ್ನು ಕಾಯ್ದಿರಿಸಬಹುದಾಗಿದೆ.
ಕೇವಲ 500 ರೂ. ಗಳಿಂದ ಟೂರ್ ಆರಂಭ: ವಿಶೇಷತೆಗಳು ಏನು?
ಈ ಗೈಡೆಡ್ ಟೂರ್‌ಗಳ ದರ ಕೇವಲ 500 ರೂ.ಗಳಿಂದ ಆರಂಭವಾಗಲಿದೆ. ನಡಿಗೆ, ಸೈಕ್ಲಿಂಗ್, ವಾಹನ ಮತ್ತು ಹಲವು ದಿನಗಳ ಪ್ರವಾಸದ ಆಯ್ಕೆಗಳೂ ಇದರಲ್ಲಿವೆ.
ರೋಚಕ ಟೂರ್ ಪ್ಯಾಕೇಜ್‌ಗಳಲ್ಲಿ, ಕತ್ತಲಾದ ಮೇಲೆ ಮುಸ್ಸೂರಿಯ ಬ್ರಿಟಿಷ್ ಕಾಲದ ಬೀದಿಗಳಲ್ಲಿ ಘೋಸ್ಟ್ ವಾಕ್, ವಾರಣಾಸಿಯ ಗಂಗಾ ನದಿ ತೀರದಲ್ಲಿ ಸೂರ್ಯೋದಯ ವೀಕ್ಷಣೆ ಮತ್ತು ಸಂಜೆಯ ಗಂಗಾ ಆರತಿ ದರ್ಶನ, ಗೋವಾದ ಹಳ್ಳಿಯಲ್ಲಿ ಎಲೆಕ್ಟ್ರಿಕ್ ಸೈಕಲ್ ರೈಡ್ ಹಾಗೂ ಸ್ಥಳೀಯರ ಮನೆಯೊಂದರಲ್ಲಿ ಸಂಜೆಯ ಚಹಾ – ತಿಂಡಿ ಸವಿಯುವ ಅವಕಾಶಗಳು ಇವೆ.
ಅದೇ ರೀತಿ, ಮುಂಬೈನ ಧಾರಾವಿ ಸ್ಲಂ, ದೋಬಿ ಘಾಟ್, ಗೇಟ್‌ವೇ ಆಫ್ ಇಂಡಿಯಾ ಹಾಗೂ ಡಬ್ಬಾವಾಲಾಗಳ ದೈನಂದಿನ ಜೀವನದ ವೀಕ್ಷಣೆ, ಲಡಾಖ್‌ನ ನುಬ್ರಾ ಕಣಿವೆಯಲ್ಲಿ ಬಾರ್ಬೆಕ್ಯೂ ಮತ್ತು ನಕ್ಷತ್ರ ವೀಕ್ಷಣೆ, ಆಗ್ರಾದಲ್ಲಿ ಗಾಳಿಪಟ ಹಾರಿಸುವಿಕೆ, ಜೈಪುರದಲ್ಲಿ ಕರಕುಶಲಕರ್ಮಿಗಳ ಭೇಟಿ ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಶಿಕಾರಾ ರೈಡ್ ಅನ್ನೂ ಪ್ರವಾಸಿಗರು ಬುಕ್ ಮಾಡಬಹುದು.
ಈ ಬಗ್ಗೆ ಮಾತನಾಡಿರುವ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, “ಸ್ಥಳೀಯ ಗೈಡ್‌ಗಳು ನಮ್ಮ ಪ್ರವಾಸೋದ್ಯಮದ ಬೆನ್ನೆಲುಬು. ಈ ಒಪ್ಪಂದದಿಂದ ಅವರು ನೇರವಾಗಿ ಪ್ರವಾಸಿಗರನ್ನು ತಲುಪಲು ಹಾಗೂ ಭಾರತದ ಕಥೆಗಳನ್ನು ಹೇಳಲು ಸಾಧ್ಯವಾಗಲಿದೆ. ಈ ಸ್ವಾತಂತ್ರ್ಯ ದಿನಾಚರಣೆಯಂದು ಕೇವಲ ವೀಕ್ಷಕರಾಗಿರದೆ, ಭಾರತದ ಪರಂಪರೆಯನ್ನು ಜಗತ್ತಿಗೆ ಸಾರುವ ಕಥೆಗಾರರ ಜೊತೆ ಪ್ರವಾಸ ಮಾಡಿ,” ಎಂದು ಅವರು ಕರೆ ನೀಡಿದ್ದಾರೆ.
ಮೇಕ್ ಮೈ ಟ್ರಿಪ್ ಸಿಇಒ ರಾಜೇಶ್ ಮಾಗೋವ್ ಅವರು, “ಭಾರತದಲ್ಲಿ ಕಥೆಗಳಿಗೆ ಬರವಿಲ್ಲ. ಆದರೆ, ಫ್ಲೈಟ್ ಬುಕ್ ಮಾಡಿದಷ್ಟು ಸುಲಭವಾಗಿ ಸ್ಥಳೀಯ ಗೈಡ್‌ಗಳನ್ನು ಬುಕ್ ಮಾಡಲು ಇದುವರೆಗೆ ಸಾಧ್ಯವಿರಲಿಲ್ಲ. ಪ್ರವಾಸೋದ್ಯಮ ಸಚಿವಾಲಯದ ಜೊತೆಗಿನ ಒಪ್ಪಂದವು ಗೈಡ್‌ಗಳನ್ನು ಮುಂಚೂಣಿಗೆ ತರಲಿದ್ದು, ಪ್ರವಾಸಿಗರಿಗೆ ಅತ್ಯುತ್ತಮ ಮತ್ತು ನೈಜ ಅನುಭವವನ್ನು ನೀಡಲಿದೆ,” ಎಂದು ವಿವರಿಸಿದ್ದಾರೆ.
ಈ ಹೊಸ ಉಪಕ್ರಮವನ್ನು ಜನರಿಗೆ ತಲುಪಿಸಲು ಮೇಕ್ ಮೈ ಟ್ರಿಪ್ ಮತ್ತು ಪ್ರವಾಸೋದ್ಯಮ ಸಚಿವಾಲಯವು ಜಂಟಿಯಾಗಿ ಹೊಸ ಪ್ರಚಾರ ಅಭಿಯಾನವನ್ನೂ ಶುರು ಮಾಡಿವೆ. ಈ ಮೂಲಕ ಪ್ರವಾಸಿಗರಿಗೆ ಹೊಸ ಜಗತ್ತನ್ನು ಪರಿಚಯಿಸಲು ಸಜ್ಜಾಗಿವೆ.





