ಬೆಂಗಳೂರು (ಜುಲೈ 23): ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯ ಸಂಪೂರ್ಣ ಅಧ್ಯಯನ ನಡೆಸಿದ ಬಳಿಕ ರೈತರು ಹಾಗೂ ಸಾರ್ವಜನಿಕರಿಗೆ ಅಗತ್ಯ ನೆರವು ನೀಡುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಇದೇ ವೇಳೆ, NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಬರ ಪರಿಸ್ಥಿತಿ ಕುರಿತು ಮಾತನಾಡಿದ ಅವರು, ಬೆಂಗಳೂರು ಮತ್ತು ಮೈಸೂರು ವಿಭಾಗಗಳ ಪರಿಶೀಲನೆ ಇನ್ನೂ ಬಾಕಿಯಿದ್ದು, ಜುಲೈ 25ರಂದು ಬೆಂಗಳೂರು ವಿಭಾಗದ ಪರಿಶೀಲನೆ ನಡೆಸಲಾಗುತ್ತದೆ. ಬಳಿಕ ಮೈಸೂರು ವಿಭಾಗದ ಪರಿಶೀಲನೆಯೂ ಪೂರ್ಣಗೊಳ್ಳಲಿದ್ದು, ರಾಜ್ಯದ ಸಂಪೂರ್ಣ ಚಿತ್ರಣ ಸಿಕ್ಕ ನಂತರ ಸರ್ಕಾರ ಆಂತರಿಕ ಸಭೆ ನಡೆಸಿ ಪರಿಹಾರ ಕ್ರಮಗಳನ್ನು ಘೋಷಿಸಲಿದೆ ಎಂದರು.
ರೈತರಿಗೆ ಹಾಗೂ ಸಾಮಾನ್ಯ ಜನರಿಗೆ ಹೇಗೆ ನೆರವು ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಈಗಾಗಲೇ ಜಿ ರಾಮ್ ಜಿ ಯೋಜನೆ ಅಡಿಯಲ್ಲಿ ಕಾಮಗಾರಿಗಳನ್ನು ಆರಂಭಿಸಲು ಸೂಚನೆ ನೀಡಲಾಗಿದೆ. ಸ್ಥಳೀಯ ಸಂಸ್ಥೆಗಳಿಂದ ಪ್ರಸ್ತಾವನೆ ಬಂದ ಕೂಡಲೇ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಪ್ರತಿ ಶಾಸಕರ ಕ್ಷೇತ್ರಕ್ಕೆ ₹1 ಕೋಟಿ, ಕುಡಿಯುವ ನೀರಿನ ತುರ್ತು ಕಾಮಗಾರಿಗಳಿಗೆ ₹5 ಕೋಟಿ ಹಾಗೂ ಜಿಲ್ಲೆಗಳ ಪಿಡಿ ಖಾತೆಗಳಲ್ಲಿ ₹329 ಕೋಟಿ ಹಣವನ್ನು ಮೀಸಲಿಟ್ಟಿದ್ದು, ಹಣದ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದರು. ಕೇಂದ್ರ ಸರ್ಕಾರಕ್ಕೆ ಬರ ಪರಿಸ್ಥಿತಿ ಕುರಿತು ಪತ್ರ ಬರೆದಿದ್ದರೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಶೀಘ್ರದಲ್ಲೇ ಕೇಂದ್ರಕ್ಕೆ ಅಧಿಕೃತ ಮೆಮೊರಾಂಡಂ ಸಲ್ಲಿಸಲಾಗುವುದು. ಬಳಿಕ ಕೇಂದ್ರ ತಂಡ ರಾಜ್ಯಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅಧ್ಯಯನ ಮಾಡಬಹುದು ಎಂದು ಹೇಳಿದರು.
NEET ವಿಚಾರದಲ್ಲಿ ಕೇಂದ್ರದ ವಿರುದ್ಧ ಆಕ್ರೋಶ
NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿದ ಪರಮೇಶ್ವರ್, ಈ ವಿಷಯದ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಮೊದಲ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದಿದ್ದ ಹಲವರು ಮರು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿರುವ ಉದಾಹರಣೆಗಳಿವೆ. ಇದು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳ ಪರವಾಗಿದ್ದೇವೆ ಎಂದು ಹೇಳುವುದಾದರೆ, ಮೊದಲು ಜವಾಬ್ದಾರಿ ಹೊತ್ತಿರುವ ಧರ್ಮೇಂದ್ರ ಪ್ರಧಾನರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಗೆ ಸಂವಿಧಾನಬದ್ಧ ಹಕ್ಕು
ರಾಹುಲ್ ಗಾಂಧಿ ಸೇರಿದಂತೆ ಪ್ರತಿಪಕ್ಷ ನಾಯಕರಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕಿದೆ. ಆದರೆ ಸರ್ಕಾರ ಅದಕ್ಕೂ ಅವಕಾಶ ನೀಡದಿರುವುದು ಸರಿಯಲ್ಲ ಎಂದು ಪರಮೇಶ್ವರ್ ಹೇಳಿದರು. ಬಿಜೆಪಿ ಕಚೇರಿ ಎದುರು ನಡೆದ ಪ್ರತಿಭಟನೆ ವೇಳೆ ಮೊಟ್ಟೆ ಎಸೆದ ಘಟನೆ ಕುರಿತು ಪ್ರತಿಕ್ರಿಯಿಸಿದ ಅವರು, “ಆಕ್ಷನ್ ಇದ್ದರೆ ರಿಯಾಕ್ಷನ್ ಇರುತ್ತದೆ. ನಾವು ಪ್ರತಿಭಟನೆ ನಡೆಸಿದ ಬಳಿಕ ಬಿಜೆಪಿ ಕಾರ್ಯಕರ್ತರು ನಮ್ಮ ಕಚೇರಿಗೆ ಮುತ್ತಿಗೆ ಹಾಕಲು ಬಂದಿದ್ದರು. ಅದರ ಪ್ರತಿಕ್ರಿಯೆಯಾಗಿ ಈ ಘಟನೆ ನಡೆದಿದೆ” ಎಂದು ಹೇಳಿದರು.





