ಬೆಂಗಳೂರು: ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯ ಆರಂಭವಾಗಿದ್ದು, ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿದ್ದಾರೆ. ಭವ್ಯ ಪ್ರಮಾಣವಚನ ಸಮಾರಂಭದ ಬಳಿಕ ವಿಧಾನಸೌಧಕ್ಕೆ ಆಗಮಿಸಿದ ನೂತನ ಮುಖ್ಯಮಂತ್ರಿ ಡಿಕೆಶಿ ಅವರು ತಮ್ಮ ಸರಳತೆ, ವಿನಯ ಹಾಗೂ ಸಂಪ್ರದಾಯಪಾಲನೆಯ ಮೂಲಕ ಎಲ್ಲರ ಗಮನ ಸೆಳೆದರು.
ಪ್ರಮಾಣವಚನ ಸ್ವೀಕರಿಸಿದ ನಂತರ ವಿಧಾನಸೌಧಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರು ಮೊದಲು ಡಾ. ಬಿ.ಆರ್. ಅಂಬೇಡ್ಕರ್, ಬಸವಣ್ಣ, ಮಹಾತ್ಮ ಗಾಂಧಿ ಸೇರಿದಂತೆ ಹಲವು ಮಹನೀಯರ ಪ್ರತಿಮೆಗಳಿಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ವಿಧಾನಸೌಧ ಆವರಣದಲ್ಲಿರುವ ಮುನೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಇದರ ನಂತರ ನಡೆದ ಒಂದು ದೃಶ್ಯ ರಾಜ್ಯದ ಜನರ ಗಮನ ಸೆಳೆಯಿತು. ವಿಧಾನಸೌಧದ ಮೆಟ್ಟಿಲುಗಳ ಮುಂದೆ ನಿಂತ ಡಿಕೆಶಿ, ಅವುಗಳಿಗೆ ದೀರ್ಘದಂಡ ನಮಸ್ಕಾರ ಸಲ್ಲಿಸಿದರು. ಪ್ರಜಾಪ್ರಭುತ್ವದ ದೇವಾಲಯ ಎಂದೇ ಕರೆಯಲ್ಪಡುವ ವಿಧಾನಸೌಧದ ಮೆಟ್ಟಿಲುಗಳಿಗೆ ತಲೆಬಾಗಿದ ಅವರು, ಸಾರ್ವಜನಿಕ ಸೇವೆಯ ಮಹತ್ವವನ್ನು ಸಾರುವ ಸಂದೇಶ ನೀಡಿದರು. ಬಳಿಕ ಉತ್ತರದ ನಂದಿ ದ್ವಾರದ ಮೂಲಕ ವಿಧಾನಸೌಧ ಪ್ರವೇಶಿಸಿದ ಮುಖ್ಯಮಂತ್ರಿ, ಅಧಿಕಾರದ ಜವಾಬ್ದಾರಿಯನ್ನು ಅಧಿಕೃತವಾಗಿ ಸ್ವೀಕರಿಸಿದರು.
ವಿಧಾನಸೌಧ ಪ್ರವೇಶಿಸಿದ ನಂತರ ನೂತನ ಸಚಿವ ಸಂಪುಟ ಸದಸ್ಯರೊಂದಿಗೆ ತಮ್ಮ ಮೊದಲ ಕ್ಯಾಬಿನೆಟ್ ಸಭೆಯನ್ನು ನಡೆಸಿದರು. ರಾಜ್ಯದ ಆಡಳಿತಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಿದ ಅವರು, ಜನಪರ ಆಡಳಿತ ನೀಡುವ ಸಂಕಲ್ಪವನ್ನು ವ್ಯಕ್ತಪಡಿಸಿದರು.
ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಜೀವನವೇ ಹೋರಾಟ ಮತ್ತು ಸಾಧನೆಯ ಕಥೆಯಾಗಿದೆ. ಸುಮಾರು 45 ವರ್ಷಗಳ ರಾಜಕೀಯ ಪಯಣದಲ್ಲಿ ಅನೇಕ ಏಳು-ಬೀಳುಗಳನ್ನು ಎದುರಿಸಿದ ಅವರು, ಪಕ್ಷ ಸಂಘಟನೆ, ನಾಯಕತ್ವ ಮತ್ತು ಹೋರಾಟದ ಮೂಲಕ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿ ಬೆಳೆದಿದ್ದಾರೆ. ಹಲವು ಸವಾಲುಗಳು, ರಾಜಕೀಯ ಸಂಕಷ್ಟಗಳು ಹಾಗೂ ವೈಯಕ್ತಿಕ ಕಷ್ಟಗಳನ್ನು ಮೀರಿ ಇಂದು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವುದು ಅವರ ರಾಜಕೀಯ ಜೀವನದ ಮಹತ್ವದ ಮೈಲಿಗಲ್ಲಾಗಿದೆ.
ಇನ್ನೊಂದೆಡೆ, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಡಿಕೆಶಿಗೆ ರೈತರಿಂದ ವಿಶೇಷ ಅಭಿನಂದನೆ ದೊರೆಯಿತು. ಹೈಕೋರ್ಟ್ ಗೇಟ್ ಸಮೀಪ ಸಾಗುತ್ತಿದ್ದ ವೇಳೆ ಕೆಲ ರೈತರು ಅವರನ್ನು ಭೇಟಿ ಮಾಡಲು ಮುಂದಾದರು. ಆರಂಭದಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ರೈತರನ್ನು ತಡೆಯಲು ಯತ್ನಿಸಿದರೂ, ಸ್ವತಃ ಡಿಕೆ ಶಿವಕುಮಾರ್ ಅವರೇ ರೈತರಿಗೆ ಅವಕಾಶ ಕಲ್ಪಿಸುವಂತೆ ಸೂಚನೆ ನೀಡಿದರು. ಬಳಿಕ ರೈತರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ಕೃಷಿಯ ಸಂಕೇತವಾಗಿರುವ ನೇಗಿಲನ್ನು ಉಡುಗೊರೆಯಾಗಿ ನೀಡಿ ಅಭಿನಂದಿಸಿದರು.
ಇದಕ್ಕೂ ಮುನ್ನ ಬೆಂಗಳೂರಿನ ಲೋಕಭವನದ ಗಾಜಿನ ಮನೆಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಸಂಜೆ 4.15ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಧಿಕಾರ ಪದ ಹಾಗೂ ಗೌಪ್ಯತೆಯ ವಿಧಿಯನ್ನು ಬೋಧಿಸಿದರು. ರೇಷ್ಮೆ ಜುಬ್ಬಾ, ಪಂಚೆ ಹಾಗೂ ಶಲ್ಯ ಧರಿಸಿದ ಸಾಂಪ್ರದಾಯಿಕ ಉಡುಪಿನಲ್ಲಿ ವೇದಿಕೆಗೆ ಬಂದ ಡಿಕೆಶಿ, ಕೈಯಲ್ಲಿ ಭಾರತದ ಸಂವಿಧಾನ ಹಿಡಿದು ತಮ್ಮ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.





