ಕರ್ನಾಟಕ ರಾಜ್ಯ ವೈವಿಧ್ಯಮಯ ಹಣ್ಣು-ತರಕಾರಿ ಹಾಗೂ ಕೃಷಿ ಸಮೃದ್ಧತೆಗೆ ಹೆಸರಾದ ನಾಡು. ಆದರೆ, ಈ ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ಬಂದು ಗ್ರಾಹಕರಿಗೆ ತಲುಪುವ ಹೊತ್ತಿಗೆ ಕೆಲವೊಮ್ಮೆ ಮಾರಣಾಂತಿಕ ಆಗುತ್ತಿವೆ! ಅದರಲ್ಲೂ ಕೃತಕ ಬಣ್ಣಗಳ ಬಳಕೆ ಅತ್ಯಂತ ಗಂಭೀರ ವಿಚಾರವಾಗಿದೆ. ಕಲ್ಲಂಗಡಿ ಹಣ್ಣಿನಲ್ಲಿ ಕೃತಕ ಬಣ್ಣ ಬೆರೆಸುತ್ತಿರುವ ದಂಧೆ ಬಯಲಾದ ಬೆನ್ನಲ್ಲೇ ಜನ ಸಾಮಾನ್ಯರು ಹಣ್ಣು-ತರಕಾರಿಗಳನ್ನ ಸಂಶಯದ ಕಣ್ಣಿನಲ್ಲಿ ನೋಡುವಂತಾಗಿದೆ.
ವ್ಯಾಪಾರಿಗಳು ಹಣ್ಣು-ತರಕಾರಿಗಳಲ್ಲಿ ಕೃತಕ ಬಣ್ಣ ಬಳಸೋದು ಏಕೆ? ಈ ಕೃತಕ ಬಣ್ಣಗಳಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ? ಯಾವೆಲ್ಲಾ ಹಣ್ಣು-ತರಕಾರಿಗಳಲ್ಲಿ ಕೃತಕ ಬಣ್ಣ ಬೆರೆಸಲಾಗುತ್ತದೆ? ಈ ಕುರಿತ ಸಮಗ್ರ ವಿವರ ಇಲ್ಲಿದೆ..
ಹಣ್ಣು–ತರಕಾರಿಗಳಿಗೆ ಕೃತಕ ಬಣ್ಣ ಬಳಸೋದು ಏಕೆ?
ವ್ಯಾಪಾರಿಗಳು ಹಣ್ಣು-ತರಕಾರಿಗಳನ್ನು ಹಸಿರಾಗಿ, ಹಳದಿಯಾಗಿ ಅಥವಾ ಕೆಂಪಾಗಿ ಕಾಣಿಸಲು ಕೃತಕ ಬಣ್ಣಗಳನ್ನು ಸಿಂಪಡಿಸುತ್ತಾರೆ. ಇದರ ಹಿಂದಿನ ಮುಖ್ಯ ಕಾರಣಗಳು ಇಂತಿವೆ:
1. ನೋಡಲು ಸುಂದರವಾಗಿರಬೇಕು: ಹಣ್ಣು-ತರಕಾರಿಗಳು ನೋಡಲು ಅಂದವಾಗಿದ್ದರೆ, ಕಣ್ಣಿಗೆ ಕುಕ್ಕುವಂತಿದ್ದರೆ ಗ್ರಾಹಕರನ್ನು ಆಕರ್ಷಿಸಬಹುದು. ಉತ್ತಮ ಬಣ್ಣ ಹೊಂದಿರುವ ಹಣ್ಣು-ತರಕಾರಿಗಳನ್ನೇ ಗ್ರಾಹಕರು ಆರಿಸಿಕೊಳ್ತಾರೆ.
2. ಸಾಗಾಣಿಕೆ ಸಮಯದಲ್ಲಿ ನೈಸರ್ಗಿಕ ಬಣ್ಣ ಕಳೆದುಹೋಗುತ್ತೆ: ಇದು ಸಹಜ. ಮಾವು, ಕಿತ್ತಳೆ ಸೇರಿದಂತೆ ಹಲವು ಹಣ್ಣುಗಳು ಮಾಗುವ ಸಮಯದಲ್ಲಿ ನೈಸರ್ಗಿಕವಾಗಿ ತಮ್ಮ ಬಣ್ಣ ಬದಲಾಯಿಸುತ್ತವೆ. ಈ ಪ್ರಕ್ರಿಯೆಯನ್ನ ವೇಗ ಮಾಡಲು ಕೃತಕ ಬಣ್ಣಗಳನ್ನ ಚಿಮುಕಿಸಲಾಗುತ್ತದೆ.
3. ಲಾಭದಾಸೆ: ವ್ಯಾಪಾರಿಗಳು ಹೆಚ್ಚಿನ ಲಾಭದ ಆಸೆಗೆ ಕೆಲವು ರಾಸಾಯನಿಕ ಬಣ್ಣಗಳನ್ನ ಬಳಸುತ್ತಾರೆ. ಈ ರಾಸಾಯನಿಕ ವಸ್ತುಗಳು ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಗೆ ಸಿಗುತ್ತವೆ. ಇವುಗಳ ಬಳಕೆಯಿಂದ ವ್ಯಾಪಾರಿಗಳು ಹೆಚ್ಚು ಲಾಭ ಗಳಿಸುತ್ತಾರೆ.
ಯಾವ ಹಣ್ಣು-ತರಕಾರಿಗಳಲ್ಲಿ ಕೃತಕ ಬಣ್ಣಗಳ ಬಳಕೆ ಹೆಚ್ಚು?
1. ಮಾವು: ಹಸಿರು ಮಾವುಗಳನ್ನು ಹಳದಿ ಅಥವಾ ಕಿತ್ತಳೆ ಬಣ್ಣಕ್ಕೆ ತರಲು ಕ್ಯಾಲ್ಶಿಯಂ ಕಾರ್ಬೈಡ್ ಮತ್ತು ಎರಿಥ್ರೋಸಿನ್ ಬಳಸಲಾಗುತ್ತದೆ.
2. ಕಿತ್ತಳೆ ಹಣ್ಣು: ಹಣ್ಣಿನ ತೊಗಟೆಗೆ ಮೆಥನಿಲ್ ಹಳದಿ (Metanil Yellow) ಸಿಂಪಡಿಸಿ ಹಳದಿ ಬಣ್ಣವನ್ನು ಹೆಚ್ಚಿಸಲಾಗುತ್ತದೆ.
3. ಕಲ್ಲಂಗಡಿ ಹಣ್ಣು: ಹಣ್ಣಿನ ಒಳಗೆ ಕೆಂಪು ಬಣ್ಣ ಹೆಚ್ಚಿಸಲು ಸುಡಾನ್ ರೆಡ್, ಕ್ರೋಮೇಟ್, ಮತ್ತು ಮೆಂಥಾಲ್ ಯೆಲ್ಲೋ ಬಳಕೆ
4. ತರಕಾರಿಗಳು:
- ಮೆಣಸಿನಕಾಯಿ: ಹಸಿರು ಬಣ್ಣ ಹೆಚ್ಚಿಸಲು ಮೆಲಾಚೈಟ್ ಗ್ರೀನ್
- ಕೆಂಪು ಮೆಣಸಿನ ಪುಡಿ: ಸುಡಾನ್ ರೆಡ್ (Sudan Red) ಬಣ್ಣ ಬಳಕೆ
- ಹಲಸಿನ ಹಣ್ಣು: ಹಳದಿ ಬಣ್ಣಕ್ಕೆ ರಾಸಾಯನಿಕಗಳು.
5. ಸ್ಟ್ರಾಬೆರಿ ಮತ್ತು ದ್ರಾಕ್ಷಿ: ಕೆಂಪು ಮತ್ತು ನೇರಳೆ ಬಣ್ಣಗಳನ್ನು ಹೆಚ್ಚಿಸಲು ಬಣ್ಣಗಳ ಬಳಕೆ
ಕೃತಕ ಬಣ್ಣಗಳಿಂದ ಆರೋಗ್ಯದ ಮೇಲೆ ಏನೆಲ್ಲಾ ದುಷ್ಪರಿಣಾಮ ಆಗುತ್ತೆ?
ಕೃತಕ ಬಣ್ಣಗಳಲ್ಲಿ ಹಲವು ಕ್ಯಾನ್ಸರ್-ಕಾರಕ ಮತ್ತು ವಿಷಪೂರಿತ ರಾಸಾಯನಿಕಗಳಿವೆ. ಇವುಗಳ ದೀರ್ಘಕಾಲೀನ ಬಳಕೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.
- ಕ್ಯಾನ್ಸರ್: ಸುಡಾನ್ ರೆಡ್ ಮತ್ತು ಮೆಥನಿಲ್ ಹಳದಿಯು ಯಕೃತ್ತು ಮತ್ತು ಮೂತ್ರಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು.
- ಜೀರ್ಣಾಂಗ ವ್ಯವಸ್ಥೆಯ ತೊಂದರೆ: ವಾಂತಿ, ಹೊಟ್ಟೆ ತೊಳೆಸುವಿಕೆ, ಭೇದಿ, ಹೊಟ್ಟೆನೋವು.
- ಚರ್ಮದ ಅಲರ್ಜಿ: ಕೆಂಪು ದದ್ದುಗಳು, ಕೆರೆತ
- ನರಮಂಡಲದ ಹಾನಿ: ಕೆಲವು ರಾಸಾಯನಿಕಗಳು ನರಗಳ ಮೇಲೆ ವಿಷಪೂರಿತ ಪರಿಣಾಮ ಬೀರುತ್ತವೆ.
- ಮಕ್ಕಳ ಬೆಳವಣಿಗೆಗೆ ಅಡ್ಡಿ: ಸೀಸ (Lead) ಮತ್ತು ಕ್ಯಾಡ್ಮಿಯಂ (Cadmium) ಸೇರಿದ ಬಣ್ಣಗಳು ಮಕ್ಕಳ ಮಾನಸಿಕ ಬೆಳವಣಿಗೆಯನ್ನು ನಿಧಾನಗೊಳಿಸುತ್ತವೆ.
ಕೃತಕ ಬಣ್ಣಕ್ಕೆ ಕಡಿವಾಣ ಹೇಗೆ?
- ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರ (FSSAI) ಕೃತಕ ಬಣ್ಣಗಳ ಬಳಕೆಯನ್ನು ನಿಷೇಧಿಸಿದೆ. ಸುಡಾನ್ ರೆಡ್, ಮೆಲಾಚೈಟ್ ಗ್ರೀನ್, ಮೆಥನಿಲ್ ಹಳದಿಯಂತಹ ರಾಸಾಯನಿಕಗಳು ಕಾನೂನುಬಾಹಿರ.
- ಸಾರ್ವಜನಿಕ ಜಾಗೃತಿ: ಹಣ್ಣು-ತರಕಾರಿಗಳನ್ನು ನೀರಿನಲ್ಲಿ ನೆನೆಸಿ ಅಥವಾ ಹಸಿ ಹುರುಳಿಯಿಂದ ತಿಕ್ಕಿ ಪರೀಕ್ಷಿಸಬೇಕು. ಬಣ್ಣ ಕಳೆದು ಹೋದರೆ, ಅದು ಕೃತಕವೆಂದು ಗುರುತಿಸಬಹುದು.
- ಸಾವಯವ ಕೃಷಿಗೆ ಪ್ರೋತ್ಸಾಹ: ರಾಸಾಯನಿಕ-ಮುಕ್ತ ಉತ್ಪನ್ನಗಳನ್ನು ಖರೀದಿಸಲು ಗ್ರಾಹಕರು ಮುಂದಾಗಬೇಕು.
ಸರ್ಕಾರ ಮತ್ತು ನಿಯಂತ್ರಕ ಸಂಸ್ಥೆಗಳು ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನೂ ಜಾಗೃತರಾಗಿ, ಸ್ಥಳೀಯ ರೈತರಿಂದ ನೇರವಾಗಿ ಹಣ್ಣು-ತರಕಾರಿಗಳನ್ನು ಖರೀದಿಸಬೇಕು. ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಆದ್ಯತೆ ನೀಡಬೇಕು. “ಆರೋಗ್ಯವೇ ಭಾಗ್ಯ ” ಎಂಬ ನಾಣ್ಣುಡಿಯನ್ನ ಮರೆಯಬಾರದು.
ಇದನ್ನೂ ಓದಿ: ಕುಣಿಗಲ್ ಕಲ್ಲಂಗಡಿ ಹಣ್ಣಲ್ಲ, ವಿಷದ ಗುಳಿಗೆ: ಕೃತಕ ಬಣ್ಣ ಪತ್ತೆ!