ಚಳಿಗಾಲ ಆರಂಭವಾಗುತ್ತಿದ್ದಂತೆ ದೇಹದ ಆರೈಕೆ, ವಿಶೇಷವಾಗಿ ಚರ್ಮದ ಆರೈಕೆ ಬಹಳ ಮುಖ್ಯವಾಗುತ್ತದೆ. ಈ ಋತುವಿನಲ್ಲಿ ತಂಪು ಗಾಳಿ ಮತ್ತು ಒಣ ವಾತಾವರಣದ ಕಾರಣ ಚರ್ಮ ಶೀಘ್ರವಾಗಿ ಒಣಗುವುದು ಸಾಮಾನ್ಯ. ಹಾಗಾಗಿ ಯಾವ ನೀರಿನಿಂದ ಸ್ನಾನ ಮಾಡುವುದು ದೇಹಕ್ಕೆ ಮತ್ತು ಚರ್ಮಕ್ಕೆ ಉತ್ತಮ ಎಂಬ ಪ್ರಶ್ನೆ ಬಹುತೇಕ ಎಲ್ಲರ ಮನದಲ್ಲೂ ಮೂಡುತ್ತದೆ.
ಕೆಲವರು ಬೆಳಿಗ್ಗೆ ಸ್ನಾನಕ್ಕೆ ಬಿಸಿನೀರನ್ನು ಬಳಸುವುದರಿಂದ ದೇಹ ವಿಶ್ರಾಂತಿ ಪಡೆಯುತ್ತದೆ. ಸ್ನಾಯುಗಳ ಒತ್ತಡ ಕಡಿಮೆಯಾಗುತ್ತದೆ ಮತ್ತು ಚಳಿಯಿಂದ ಉಂಟಾಗುವ ಗಟ್ಟಿತನ ದೂರವಾಗುತ್ತದೆ ಎಂದು ನಂಬುತ್ತಾರೆ. ಮತ್ತೊಂದೆಡೆ, ವೈದ್ಯರು ಮತ್ತು ಚರ್ಮ ತಜ್ಞರು ಹೆಚ್ಚಾಗಿ ಬಿಸಿ ನೀರಿನಿಂದ ಸ್ನಾನ ಮಾಡಿದರೆ ಚರ್ಮದ ನೈಸರ್ಗಿಕ ಎಣ್ಣೆ ಪದರ ಕಡಿಮೆಯಾಗುತ್ತದೆ. ಚರ್ಮ ಇನ್ನಷ್ಟು ಒಣಗುತ್ತದೆ ಮತ್ತು ಚರ್ಮದ ಕಿರಿಕಿರಿಗಳು ಹೆಚ್ಚಾಗುತ್ತವೆ ಎಂದು ಸೂಚಿಸುತ್ತಾರೆ. ಇದರಿಂದ ‘ಬಿಸಿ ನೀರು ಸೂಕ್ತವೇ? ಅಥವಾ ತಣ್ಣೀರು ಉತ್ತಮವೇ?’ ಎಂಬ ಗೊಂದಲ ಎಲ್ಲರಲ್ಲೂ ಕಾಣುತ್ತದೆ.
ಬಿಸಿ ನೀರಿನ ಸ್ನಾನದ ಲಾಭ–ನಷ್ಟ
ಚಳಿಗಾಲದಲ್ಲಿ ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದರಿಂದ ತಕ್ಷಣದ ವಿಶ್ರಾಂತಿ ಮತ್ತು ಆರಾಮದ ಅನುಭವ ಸಿಗುವುದು ನಿಜ. ದೇಹದ ಸ್ನಾಯುಗಳು ಶೀತದಿಂದ ಗಟ್ಟಿಯಾಗಿರುವಾಗ ಬಿಸಿ ನೀರು ಅವುಗಳನ್ನು ಸಡಿಲಿಸಲು ಸಹಾಯ ಮಾಡುತ್ತದೆ.
ಆದರೆ ಅತಿಯಾದ ಬಿಸಿ ನೀರು ಚರ್ಮಕ್ಕೆ ಹಾನಿಕಾರಕ. ಇದು ಚರ್ಮದ ಮೇಲೆ ಇರುವ ನೈಸರ್ಗಿಕ ತೈಲ ಪದರವನ್ನು ಕಡಿಮೆ ಮಾಡುತ್ತದೆ. ಅದರ ಪರಿಣಾಮವಾಗಿ ಚರ್ಮ ಒಣಗುವುದು, ಬಿರುಕು ಬಿದ್ದಂತೆ ಕಾಣುವುದು, ತುರುಕು ಅಥವಾ ಕೆಂಪಾಗುವುದು, ಚರ್ಮದಲ್ಲಿ ಉರಿ-ಕಿರಿಕಿರಿ ಹೆಚ್ಚಾಗುತ್ತದೆ. ಕೂದಲಿಗೂ ಅತಿಯಾದ ಬಿಸಿ ನೀರಿನ ತೊಂದರೆ ಇದೆ. ಕೂದಲು ಒಣಗುವುದು, ಸ್ಪ್ಲಿಟ್ ಎಂಡ್ಸ್ ಹೆಚ್ಚಾಗುವುದು ಮತ್ತು ನೈಸರ್ಗಿಕ ಶೈನ್ ಕಡಿಮೆಯಾಗುತ್ತದೆ.
ತಣ್ಣೀರು ಸ್ನಾನ
ತಣ್ಣೀರು ರಕ್ತಸಂಚಾರವನ್ನು ಚುರುಕುಗೊಳಿಸಿ ದೇಹಕ್ಕೆ ಚೈತನ್ಯ ನೀಡುತ್ತದೆ ಎನ್ನುವುದು ನಿಜ. ಆದರೆ ಚಳಿಗಾಲದ ತೀವ್ರ ಶೀತದಲ್ಲಿ ಸಂಪೂರ್ಣ ತಣ್ಣೀರು ನೀರಿನಿಂದ ಸ್ನಾನ ಮಾಡುವುದು ಆರೋಗ್ಯಕ್ಕೆ ಸದಾ ಒಳ್ಳೆಯದೇನಲ್ಲ. ಏಕೆಂದರೆ ದೇಹ ಇದ್ದಕ್ಕಿದ್ದಂತೆ ತಣ್ಣೀರಿನ ಸಂಪರ್ಕಕ್ಕೆ ಬಂದಾಗ ರಕ್ತನಾಳಗಳು ತಕ್ಷಣ ಸಂಕುಚಿತಗೊಳ್ಳುತ್ತವೆ. ಇದು ಕೆಲವೊಮ್ಮೆ ರಕ್ತದೊತ್ತಡ ಏರಿಕೆ, ಹೃದಯ ಬಡಿತ ಹೆಚ್ಚಳ, ತಲೆ ಸುತ್ತು, ಶೀತ, ಜ್ವರ ಮುಂತಾದ ಸಮಸ್ಯೆಗಳ ಅಪಾಯಕ್ಕೆ ಕಾರಣವಾಗಬಹುದು. ಹೀಗಾಗಿ ಚಳಿಗಾಲದಲ್ಲಿ ತಣ್ಣೀರು ಸ್ನಾನವು ಎಲ್ಲರಿಗೂ ಸೂಕ್ತವಲ್ಲ.
ಹಾಗಾದರೆ ಯಾವ ನೀರು ಉತ್ತಮ?
ಆರೋಗ್ಯ ತಜ್ಞರ ಪ್ರಕಾರ, ಚಳಿಗಾಲದಲ್ಲಿ ಮಿತವಾದ ಬೆಚ್ಚಗಿನ ನೀರು (lukewarm water) ಸ್ನಾನಕ್ಕೆ ಅತ್ಯಂತ ಉತ್ತಮ. ಇದು ದೇಹ ಬಿಸಿಯಾಗುವಂತೆ ಮಾಡುತ್ತದೆ. ಸ್ನಾನ ಆರಾಮಕರವಾಗಿರುತ್ತದೆ ಮತ್ತು ಚರ್ಮದ ನೈಸರ್ಗಿಕ ಎಣ್ಣೆ ಪದರಕ್ಕೂ ಹೆಚ್ಚು ಹಾನಿ ಆಗುವುದಿಲ್ಲ.
ಇದಲ್ಲದೆ ಸ್ನಾನದ ಬಳಿಕ ಮಾಯಿಶ್ಚರೈಸರ್ ಹಚ್ಚುವುದು ಬಹಳ ಮುಖ್ಯ. ಇದು ಚರ್ಮದ ಮೇಲೆ ಒಂದು ರಕ್ಷಣಾತ್ಮಕ ಪದರವನ್ನು ನಿರ್ಮಿಸಿ ಒಣಗುವಿಕೆಯನ್ನು ತಡೆಯುತ್ತದೆ.
ಹ್ಯಾಂಡ್ ಪಂಪ್ ಅಥವಾ ಬೋರ್ವೆಲ್ ನೀರಿನ ಬಳಕೆ
ಗ್ರಾಮೀಣ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಹ್ಯಾಂಡ್ ಪಂಪ್ ಅಥವಾ ಬೋರ್ವೆಲ್ ನೀರು ಸ್ವಲ್ಪ ಬಿಸಿಯಾಗಿಯೇ ಬರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಈ ನೀರನ್ನು ನೇರವಾಗಿ ಸ್ನಾನಕ್ಕೆ ಬಳಸಬಹುದಾದರೂ, ಕೆಲವೇಳೆ ಈ ನೀರಿನಲ್ಲಿ ಖನಿಜ ಅಂಶಗಳು ಹೆಚ್ಚು ಇರುವುದರಿಂದ ಚರ್ಮಕ್ಕೆ ಉರಿ, ತುರಿಕೆ, ಒಣಗುವುದು ಇಂತಹ ಮುಂತಾದ ಸಮಸ್ಯೆಗಳು ಕಾಣಿಸಬಹುದು. ಹೀಗಾಗಿ ಸಾಧ್ಯವಾದರೆ ಈ ನೀರನ್ನು ಸ್ವಲ್ಪ ತಾಪಮಾನ ಸಮತೋಲನಕ್ಕೆ ತಂದು ಬಳಸುವುದು ಉತ್ತಮ.
ಚಳಿಗಾಲದಲ್ಲಿ ಸ್ನಾನಕ್ಕೆ ಮಂದಬಿಸಿ ನೀರು ಅತ್ಯುತ್ತಮ ಆಯ್ಕೆ. ಅತಿಯಾದ ಬಿಸಿ ನೀರಲ್ಲ, ತಣ್ಣೀರಲ್ಲ ಮಧ್ಯಮ ಬಿಸಿಪಟ್ಟೆಯ ನೀರು ದೇಹಕ್ಕೂ, ಚರ್ಮಕ್ಕೂ, ಕೂದಲಿಗೂ ಉತ್ತಮ. ಸ್ನಾನದ ನಂತರ ಚರ್ಮದ ಆರೈಕೆ ಮಾಡಿದರೆ ಚಳಿಗಾಲದಲ್ಲೂ ಆರೋಗ್ಯಕರ, ಮೃದುವಾದ ಚರ್ಮವನ್ನು ಕಾಪಾಡಿಕೊಳ್ಳಬಹುದು.





