ಇಂದಿನ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಒತ್ತಡ ಮತ್ತು ಆತಂಕ ಸಾಮಾನ್ಯ ಸಮಸ್ಯೆಗಳಾಗಿವೆ. ಮನೆಯಲ್ಲಿ ಗಿಡಗಳನ್ನು ನೆಡುವುದು ಈ ಸಮಸ್ಯೆಗಳಿಗೆ ಸಹಜ ಮತ್ತು ಸುಂದರ ಪರಿಹಾರವಾಗಬಲ್ಲದು. ಸಸ್ಯಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ನಮ್ಮ ಮಾನಸಿಕ ಆರೋಗ್ಯದ ಮೇಲೂ ಗಮನಾರ್ಹ ಪ್ರಭಾವ ಬೀರುತ್ತವೆ.
ಸಸ್ಯಗಳು ಕಾರ್ಟಿಸೋಲ್ ಅಂತಹ ಒತ್ತಡದ ಹಾರ್ಮೋನ್ಗಳ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಇವು ನಮ್ಮ ಮನಸ್ಥಿತಿಯನ್ನು ಸುಧಾರಿಸಿ, ಸಕಾರಾತ್ಮಕ ಶಕ್ತಿಯನ್ನು ಹರಡುತ್ತವೆ. ಮನೆಯಲ್ಲಿ ಸಸ್ಯಗಳನ್ನು ನೆಡುವುದು ನಮ್ಮ ದಿನಚರಿಯ ಒತ್ತಡದಿಂದ ಸ್ವಲ್ಪ ಸಮಯ ವಿರಮಿಸಲು ಉತ್ತಮ ಮಾರ್ಗವಾಗಿದೆ. ಇದು ನಮ್ಮ ಮನೆಗೆ ಸಹಜ ಸೌಂದರ್ಯವನ್ನು ತರುವುದರ ಜೊತೆಗೆ ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ.
ಇಲ್ಲಿ ಮನೆಯಲ್ಲಿ ಬೆಳೆಸಲು ಸೂಕ್ತವಾದ ಕೆಲವು ಮನೋಶಾಂತಿದಾಯಕ ಸಸ್ಯಗಳ ವಿವರ ನೀಡಲಾಗಿದೆ.
ಲ್ಯಾವೆಂಡರ್ (Lavender)
ಲ್ಯಾವೆಂಡರ್ ಸಸ್ಯದ ಸುಗಂಧವೇ ಒತ್ತಡವನ್ನು ಕರಗಿಸುತ್ತದೆ. ಈ ಸಸ್ಯದಿಂದ ಹೊರಬರುವ ಪರಿಮಳವು ಆತಂಕ, ಬೇಸರ ಹಾಗೂ ಅಸ್ವಸ್ಥತೆ ಕಡಿಮೆ ಮಾಡುತ್ತದೆ. ರಾತ್ರಿಯಲ್ಲಿ ಮಲಗುವ ಕೋಣೆಯಲ್ಲಿ ಲ್ಯಾವೆಂಡರ್ ಗಿಡವನ್ನು ಇಡುವುದರಿಂದ ನಿದ್ರೆ ಉತ್ತಮವಾಗಿ ಬರುವುದರ ಜೊತೆಗೆ ಮನಸ್ಸು ತಾಜಾಗಿಯೂ ಇರುತ್ತದೆ.
ಮನಿ ಪ್ಲಾಂಟ್ (Money Plant)
ಮನಿ ಪ್ಲಾಂಟ್ ಶಾಶ್ವತವಾಗಿ ಜನಪ್ರಿಯ ಒಳಾಂಗಣ ಸಸ್ಯ. ಇದು ಮನೆಯ ವಾತಾವರಣವನ್ನು ತಾಜಾ ಮತ್ತು ಶುದ್ಧವಾಗಿಡುತ್ತದೆ. ಹೆಚ್ಚು ಆಮ್ಲಜನಕ ಬಿಡುಗಡೆ ಮಾಡಿ, ಇಂಗಾಲದ ಡೈಆಕ್ಸೈಡ್ ಹೀರಿಕೊಳ್ಳುವುದರಿಂದ, ಮನಸ್ಸಿಗೆ ಶಾಂತಿ ಮತ್ತು ತಾಜಾತನ ನೀಡುತ್ತದೆ. ಈ ಗಿಡವನ್ನು ಮನೆಯ ಪೂರ್ವ ಅಥವಾ ಈಶಾನ್ಯ ಭಾಗದಲ್ಲಿ ಇಡುವುದು ಶ್ರೇಷ್ಠ ಎಂದು ವಾಸ್ತುಶಾಸ್ತ್ರವೂ ಹೇಳುತ್ತದೆ.
ಪೀಸ್ ಲಿಲ್ಲಿ (Peace Lily)
ಈ ಹೂವುಗಳ ಹೆಸರು “ಪೀಸ್” (Peace) ಎಂಬುದೇ ಹೇಳುತ್ತದೆ. ಇದು ಶಾಂತಿಯ ಸಂಕೇತ. ಪೀಸ್ ಲಿಲ್ಲಿ ಮನೆಯಲ್ಲಿ ತಾಜಾತನದ ಸ್ಪರ್ಶ ನೀಡುತ್ತದೆ ಮತ್ತು ಒತ್ತಡ, ಆತಂಕ ಹಾಗೂ ಕಳವಳ ಕಡಿಮೆ ಮಾಡುತ್ತದೆ. ಇದರ ಹಸಿರು ಎಲೆಗಳು ಮತ್ತು ಬಿಳಿ ಹೂವುಗಳು ಮನಸ್ಸಿಗೆ ಶಾಂತಿ ನೀಡುವ ನೈಸರ್ಗಿಕ ಥೆರಪಿ ತರಹ ಕೆಲಸ ಮಾಡುತ್ತವೆ.
ಸ್ಪೈಡರ್ ಪ್ಲಾಂಟ್ (Spider Plant)
ಸ್ಪೈಡರ್ ಪ್ಲಾಂಟ್ ಪರಿಮಳವಿಲ್ಲದಿದ್ದರೂ ಇದು ಒಂದು ಹವಾಮಾನ ಶುದ್ಧೀಕರಕ ಸಸ್ಯ. ಇದು ಗಾಳಿಯಲ್ಲಿನ ವಿಷಕಾರಿ ಅಂಶಗಳನ್ನು ಹೀರಿಕೊಂಡು, ಶುದ್ಧ ಆಮ್ಲಜನಕವನ್ನು ನೀಡುತ್ತದೆ. ಹೀಗಾಗಿ ಈ ಗಿಡವನ್ನು ನಿಮ್ಮ ಹಾಲ್ ಅಥವಾ ಕಚೇರಿಯ ಮೇಜಿನ ಮೇಲೆ ಇಡುವುದರಿಂದ ಒತ್ತಡದ ಮಟ್ಟ ಕಡಿಮೆಯಾಗುತ್ತದೆ.
ಜಿನ್ಸೆಂಗ್ (Ginseng)
ಚೀನೀ ಔಷಧದಲ್ಲಿ ಶತಮಾನಗಳಿಂದ ಬಳಕೆಯಲ್ಲಿರುವ ಈ ಗಿಡವು ದೇಹದ ಶಕ್ತಿ ಮತ್ತು ಏಕಾಗ್ರತೆ ಹೆಚ್ಚಿಸುತ್ತದೆ. ಜೊತೆಗೆ, ಕಾರ್ಟಿಸೋಲ್ ಹಾರ್ಮೋನ್ ನಿಯಂತ್ರಣದಲ್ಲಿಡುವುದರಿಂದ ಒತ್ತಡ ಕಡಿಮೆ ಮಾಡಿ ಮನಸ್ಥಿತಿಯನ್ನು ಸುಧಾರಿಸುತ್ತದೆ. ಮನೆಯಲ್ಲಿ ಈ ಸಸ್ಯವನ್ನು ಬೆಳೆಸುವುದು ಆರೋಗ್ಯ ಮತ್ತು ಶಾಂತಿಯ ಸಂಯೋಜನೆ ತರಹದ ಪ್ರಯೋಜನ ನೀಡುತ್ತದೆ.
ಗಿಡಮೂಲಿಕಾ ಸಸ್ಯಗಳು: ತುಳಸಿ, ಮಲ್ಲಿಗೆ, ಲೆಮನ್ ಗ್ರಾಸ್, ಪುದೀನಾ
ಇವುಗಳ ಪರಿಮಳವೇ ಸಕಾರಾತ್ಮಕ ಶಕ್ತಿಯ ಮೂಲ. ತುಳಸಿಯು ಹವೆಯನ್ನು ಶುದ್ಧಗೊಳಿಸುವುದರ ಜೊತೆಗೆ ಆಧ್ಯಾತ್ಮಿಕ ಶಾಂತಿಯನ್ನು ತರುತ್ತದೆ. ಮಲ್ಲಿಗೆಯ ಪರಿಮಳವು ಸಂತೋಷದ ಹಾರ್ಮೋನ್ ಸೆರೋಟೋನಿನ್ ಹೆಚ್ಚಿಸುತ್ತದೆ. ಲೆಮನ್ ಗ್ರಾಸ್ ಮತ್ತು ಪುದೀನಾ ಮನಸ್ಸಿಗೆ ತಾಜಾತನ ಮತ್ತು ಚೈತನ್ಯ ನೀಡುತ್ತವೆ.





