ಬೀಜಿಂಗ್, ಸೆಪ್ಟೆಂಬರ್ 10: ಪೂರ್ವ ಚೀನಾದ ಕ್ವಿಂಗ್ಡಾವೊ ಬಂದರಿನಲ್ಲಿ ನಿರ್ವಹಣಾ ಕಾರ್ಯದಲ್ಲಿದ್ದ ಲೈಬೀರಿಯಾ ಧ್ವಜಾರೋಹಣದ ಸರಕು ಸಾಗಣೆ ಹಡಗಿನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದು, ಐವರು ನಾಪತ್ತೆಯಾಗಿದ್ದಾರೆ ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ಕ್ವಿಂಗ್ಡಾವೊ ನಗರದ ಹಡಗುಕಟ್ಟೆಯಲ್ಲಿ ನಿರ್ವಹಣಾ ಕಾರ್ಯಕ್ಕಾಗಿ ನಿಲ್ಲಿಸಲಾಗಿದ್ದ ವಿದೇಶಿ ಸರಕು ಹಡಗಿನಲ್ಲಿ ಇಂದು ಗುರುವಾರ ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ದಟ್ಟ ಹೊಗೆ ಆವರಿಸಿಕೊಂಡಿದ್ದು, ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು.
ಅಪಘಾತದ ಸಂದರ್ಭದಲ್ಲಿ ಹಡಗಿನಲ್ಲಿ ಒಟ್ಟು 42 ಮಂದಿ ಇದ್ದರು. ಅವರ ಪೈಕಿ 12 ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಐವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ. ಆದರೆ ಇನ್ನೂ ಐವರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಸರ್ಕಾರಿ ನಿಯಂತ್ರಿತ ಕ್ಸಿನ್ಹುವಾ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿರುವ ಚಿತ್ರಗಳಲ್ಲಿ ಹಡಗಿನಿಂದ ಭಾರೀ ಹೊಗೆ ಹೊರಬರುತ್ತಿರುವ ದೃಶ್ಯಗಳು ಕಂಡುಬಂದಿವೆ. ‘ಓಷನ್ ಮೆಲೋಡಿ’ ಎಂದು ಗುರುತಿಸಲಾಗಿರುವ ಈ ಹಡಗು ಲೈಬೀರಿಯಾ ಧ್ವಜಾರೋಹಣ ಹೊಂದಿರುವ ಸುಮಾರು 20 ವರ್ಷ ಹಳೆಯ ಒಣ ಸರಕು ಸಾಗಣೆ ಹಡಗು ಎಂದು ಹಡಗು ಟ್ರ್ಯಾಕಿಂಗ್ ಮಾಹಿತಿಗಳು ತಿಳಿಸಿವೆ. ಸುಮಾರು 623 ಅಡಿ ಉದ್ದದ ಈ ಹಡಗು ಆಗಸ್ಟ್ 31ರಂದು ಕ್ವಿಂಗ್ಡಾವೊ ಹಡಗುಕಟ್ಟೆಗೆ ಆಗಮಿಸಿತ್ತು.
ಬೆಂಕಿ ಕಾಣಿಸಿಕೊಂಡ ಕೆಲ ಗಂಟೆಗಳ ಬಳಿಕ, ಮಧ್ಯಾಹ್ನ ಸುಮಾರು 2.30ರ ವೇಳೆಗೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ವರದಿಯಾಗಿದೆ. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಅಧಿಕಾರಿಗಳು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ.
ಕ್ಸಿ ಜಿನ್‌ಪಿಂಗ್‌ರಿಂದ ತುರ್ತು ಸೂಚನೆ
ದುರಂತದ ಹಿನ್ನೆಲೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಧಿಕಾರಿಗಳಿಗೆ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ನಾಪತ್ತೆಯಾಗಿರುವವರನ್ನು ಪತ್ತೆಹಚ್ಚಲು ಪೂರ್ಣ ಪ್ರಮಾಣದ ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಅವರು ಸೂಚಿಸಿದ್ದಾರೆ.
ಇದೇ ವೇಳೆ, ಇಂತಹ ಅಪಘಾತಗಳು ಮರುಕಳಿಸದಂತೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಮತ್ತು ಪ್ರಮುಖ ಕೈಗಾರಿಕಾ ದುರಂತಗಳನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕ್ಸಿ ಜಿನ್‌ಪಿಂಗ್ ಸೂಚಿಸಿದ್ದಾರೆ.
ಘಟನೆಯ ಬೆಂಕಿಯ ಮೂಲ, ಹಡಗಿನಲ್ಲಿದ್ದ ಸರಕು ಮತ್ತು ನಿರ್ವಹಣಾ ಕಾರ್ಯದ ವೇಳೆ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿತ್ತೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.





